ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ಕ್ಕೆ ಕೋಟಿ ವಾಹನಗಳು

Last Updated 30 ಜುಲೈ 2019, 19:45 IST
ಅಕ್ಷರ ಗಾತ್ರ

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ ಸಂಚಾರ ದಟ್ಟನೆ ದುಃಸ್ವಪ್ನದಂತೆ ಕಾಡುತ್ತಿದೆ. ಜನಸಂಖ್ಯೆಗೆ ಪೈಪೋಟಿ ನೀಡುವಂತೆ ವಾಹನಗಳ ಸಂಖ್ಯೆ ಮಿತಿಮೀರಿ ಏರುತ್ತಿದೆ.ಒಂದು ಅಂದಾಜಿನ ಪ್ರಕಾರ 2025ರ ವೇಳೆಗೆಬೆಂಗಳೂರು ರಸ್ತೆಗಳಲ್ಲಿ ವಾಹನಗಳ ಸಂಖ್ಯೆ80 ಲಕ್ಷ ತಲುಪಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗಲೇ ಅಷ್ಟು ಸಂಖ್ಯೆಯ ವಾಹನಗಳು ರಸ್ತೆಯಲ್ಲಿವೆ. 2025ರ ವೇಳೆಗೆ ವಾಹನಗಳ ಸಂಖ್ಯೆ ಕೋಟಿ ಗಡಿ ದಾಟುವ ಸಾಧ್ಯತೆ ಇದೆ.

ಅಂದಾಜು 13,000 ಕಿ.ಮೀ ರಸ್ತೆ ಜಾಲ ಹೊಂದಿರುವ ನಗರದಲ್ಲಿ ಪ್ರತಿದಿನ 2,000 ದಿಂದ 3,000 ಹೊಸ ವಾಹನ ನೋಂದಣಿಯಾಗುತ್ತಿವೆ. ಒಂದು ದಶಕದಲ್ಲಿ ಬೆಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸುಮಾರು 50 ಲಕ್ಷ ಹೊಸ ವಾಹನಗಳನ್ನು ನೋಂದಾಯಿಸಲಾಗಿದೆ. ಟ್ರಾಫಿಕ್‌ಗೆ ಸಂಬಂಧಿಸಿದಂತೆ ಇದು ಅತ್ಯಂತ ಆಘಾತಕಾರಿ ಬೆಳವಣಿಗೆ.

ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಬರುವ ದಶಕದಲ್ಲಿ ಬೆಂಗಳೂರಿನ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥವಾಗಲಿದೆ. ಸಂಚಾರ ತಜ್ಞರು ಮತ್ತು ಪೊಲೀಸರಿಗೆ ಸಂಚಾರ ನಿರ್ವಹಣೆಯೇ ಒಂದು ಸವಾಲಾಗಲಿದೆ!

ಐ.ಟಿ–ಬಿ.ಟಿ ಕೊಡುಗೆ

ಒಂದು ದಶಕದಲ್ಲಿ ಐ.ಟಿ-ಬಿ.ಟಿ ಕಂಪನಿಗಳು ಹೊರ ವರ್ತುಲ ರಸ್ತೆಗಳಲ್ಲಿ ಕಚೇರಿ ತೆರೆಯುತ್ತಿವೆ. ಹೊರ ವಲಯಗಳನ್ನೂ ಸಹ ಬೆಂಗಳೂರು ತನ್ನ ತೆಕ್ಕೆಗೆ ತೆಗೆದುಕೊಂಡು ಸಂಚಾರ ವ್ಯಾಪ್ತಿ ವಿಸ್ತರಿಸಿಕೊಂಡಿದೆ.

ಬೆಂಗಳೂರು ನಗರದ ಒಟ್ಟು ಜನಸಂಖ್ಯೆಯಲ್ಲಿ (1.20 ಕೋಟಿ) ಸರಿ ಸುಮಾರು ಅರ್ಧದಷ್ಟು (58 ಲಕ್ಷ) ಜನರು ನಿತ್ಯ ಸಂಚಾರಕ್ಕೆ ಬಿಎಂಟಿಸಿ ಬಸ್‌ ಅವಲಂಬಿಸಿದ್ದಾರೆ. 4 ರಿಂದ6 ಲಕ್ಷ ಜನರು ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ.ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ವಂತ ವಾಹನ ಹೊಂದಿರುವವರ ಸಂಖ್ಯೆ ಏರುತ್ತಿದೆ. ಇದಕ್ಕೆ ಬಿಎಂಟಿಸಿ ಬಸ್‌ಗಳ ಕೊರತೆ ಮತ್ತು ‘ಲಾಸ್ಟ್‍ಮೈಲ್ ಕನೆಕ್ಟಿವಿಟಿ’ ಸಮಸ್ಯೆ ಕಾರಣವಾಗಿದೆ.

ವಾಹನ ಖರೀದಿಗೆ ಉತ್ತೇಜನ

ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ವಾಹನ ಖರೀದಿಸಲು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಸಾಲ ನೀಡುತ್ತಿವೆ. ಇದರಿಂದ ವಾಹನ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ.

ಸದಾ ನಡೆಯುತ್ತಿರುವ ರಸ್ತೆ ಮತ್ತು ಮೆಟ್ರೊ ಕಾಮಗಾರಿ ವಿಳಂಬ ಸಂಚಾರ ಸಮಸ್ಯೆ ಬಿಗಡಾಯಿಸಲು ಮತ್ತೊಂದು ಕಾರಣ. ಕಾಮಗಾರಿಗೆ ಸಾಕಷ್ಟು ಕಾಲಾವಕಾಶ ಬೇಡುತ್ತವೆ. ಆ ಸಮಯದಲ್ಲಿ ವಾಹನ ಸವಾರರು ಸೂಕ್ತ ಪರ್ಯಾಯ ಮಾರ್ಗಗಳಿಲ್ಲದೆ ಪರದಾಡಬೇಕಾಗುತ್ತದೆ. ಕಾಮಗಾರಿ ಪೂರ್ಣಗೊಳಿಸಲು ಹಲವು ತಿಂಗಳೇ ಬೇಕಾಗುವುದರಿಂದ ಸುಗಮ ಸಂಚಾರ ವ್ಯವಸ್ಥೆಗೆ ಸಂಚಾರ ಪೊಲೀಸರು ಸಾಹಸ ಮಾಡಬೇಕಾಗುತ್ತದೆ.

ಔದ್ಯೋಗಿಕರಣ ಮತ್ತು ನಗರೀಕರಣ ಸಮಸ್ಯೆಗಳು ಉಲ್ಬಣಿಸುತ್ತಿದ್ದು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದಲ್ಲಿ ಮುಂಬರುವ ವರ್ಷಗಳಲ್ಲಿ ಸಂಕೀರ್ಣ ಸಮಸ್ಯೆಗಳು ನಗರವಾಸಿಗಳನ್ನು ಇನ್ನಿಲ್ಲದಂತೆ ಕಾಡಲಿವೆ. ಅದಕ್ಕಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

ಡಾ.ಅನಿಲ್‍ಕುಮಾರ್ ಪಿ. ಜಿ.ಪೊಲೀಸ್ ಇನ್‌ಸ್ಪೆಕ್ಟರ್‌ (ಸಂಚಾರ ಯೋಜನೆ)

***

ಮುಂದುವರಿದ ರಾಷ್ಟ್ರಗಳ ಪರಿಣಾಮಕಾರಿ ಪರಿಹಾರ

ವಾಹನ ದಟ್ಟಣೆ ಸಮಸ್ಯೆಗೆ ಮುಂದುವರಿದ ರಾಷ್ರಗಳು ಹಲವು ಬಗೆಯಲ್ಲಿ ಪರಿಹಾರ ಕಂಡುಕೊಂಡಿವೆ.

* ಮೊದಲ ಬಾರಿಗೆಸಿಂಗಾಪುರ 1975ರಲ್ಲಿ ‘ಸಂಚಾರ ದಟ್ಟಣೆ ಶುಲ್ಕ‘ (Congestion Fee) ವಿಧಿಸಿತ್ತು

* ಇಂಗ್ಲೆಂಡ್ ಸಂಚಾರ ದಟ್ಟಣಾ ಶುಲ್ಕ ವಿಧಿಸಿದಎರಡನೇ ದೇಶ.2003ರಲ್ಲಿ ಈ ಶುಲ್ಕ ಜಾರಿಗೆ ತಂದಿತು

* ಸಂಚಾರ ದಟ್ಟಣೆಯಿರುವ ರಸ್ತೆಗಳಿಗೆ ಇಳಿಯುವ ವಾಹನಗಳು 12 ಯೂರೊಗಳನ್ನು ಹೆಚ್ಚುವರಿಯಾಗಿ ತೆರಬೇಕಾಯಿತು. ಇದರಿಂದ ಶೇ 60% ಕಾರ್ ಟ್ರಿಪ್‍ ಕಡಿಮೆಯಾದವು. ಬಹಳಷ್ಟು ಜನರು ಸಾರ್ವಜನಿಕ ಸಾರಿಗೆ ಅವಲಂಬಿಸಿದರು

* ಸ್ಟಾಕ್ ಹೋಮ್‍ನಲ್ಲಿ 2007 ರಿಂದ ಈ ಪದ್ದತಿಯು ಜಾರಿಯಾಗಿದೆ. 2006ರಲ್ಲಿ 6 ತಿಂಗಳ ಪರೀಕ್ಷಾರ್ಥ ಶುಲ್ಕ ವಿಧಿಸಿದ ನಂತರ ಜನರ ಒಪ್ಪಿಗೆ ಕೇಳಿದಾಗ ಜನರು ಈ ಸುಂಕವನ್ನು ಬೆಂಬಲಿಸಿದರು

* ಇಟಲಿಯ ಬೊಲೊಗರ್ನ ಮತ್ತು ಮಿಲಾನ್ ನಗರಗಳಲ್ಲಿ ಸಹ ಸಂಚಾರ ದಟ್ಟಣೆ ಶುಲ್ಕ ಜಾರಿಗೆ ತರಲಾಗಿದೆ. ಇಟಲಿಯ ಕೆಲವು ನಗರಗಳಲ್ಲಿ ಈ ಪ್ರಯೋಗದಿಂದ ವಾಹನಗಳ ಸಂಖ್ಯೆ ಕಡಿಮೆಯಾದುದಲ್ಲದೇ ಅಫಘಾತಗಳ ಸಂಖ್ಯೆಯು ಸಹ ಗಣನೀಯ ಪ್ರಮಾಣದಲ್ಲಿ (28%) ಕಡಿಮೆಯಾಗಿದೆ. ಜೊತೆಗೆ ವಾಯು ಮತ್ತು ಶಬ್ದ ಮಾಲಿನ್ಯ ಪ್ರಮಾಣ ಸಹ ಗಮನಾರ್ಹವಾಗಿ ತಗ್ಗಿದೆ.

ಪರಿಹಾರ ಮಾರ್ಗಗಳು

lಸಂಚಾರ ವ್ಯವಸ್ಥೆಗೆ ನೀಲನಕ್ಷೆ

lಕಟ್ಟುನಿಟ್ಟಿನ ಕಾನೂನು ಅನುಷ್ಠಾನ

lದಂಡದ ಮೊತ್ತ ಹೆಚ್ಚಳ

lವಾಹನಗಳ ಸಂಖ್ಯೆಗೆ ಕಡಿವಾಣ

lಶಾಲೆ, ಕಚೇರಿ, ಖಾಸಗಿ ಸಂಸ್ಥೆಗಳ ಸಮಯದಲ್ಲಿ ಬದಲಾವಣೆ

lಮನೆಯಿಂದಲೇ ಕೆಲಸದ ಅವಕಾಶ

lಕೆಲಸಕ್ಕೆ ಟೆಲಿ ಕಮ್ಯುನಿಕೇಟಿಂಗ್

lಸಮೂಹ ಸಾರಿಗೆ ಬಳಕೆ

lಕಾರ್ ಪೂಲಿಂಗ್

lದಟ್ಟಣೆ ಶುಲ್ಕ ವಿಧಿಸುವುದು

lವಾಹನ ಮಾಲಿಕತ್ವದ ನಿಯಂತ್ರಣ

lಪ್ರಿಯಾರಿಟಿ ಲೇನ್‍ಗಳ ನಿರ್ಮಾಣ

lಖಾಸಗಿ / ವೈಯಕ್ತಿಕ ವಾಹನಗಳಿಗೆ ಹೆಚ್ಚು ಸೇವಾ ಶುಲ್ಕ

lಸಂಚಾರ ಪೊಲೀಸರು ಇರಲಿ, ಇಲ್ಲದಿರಲಿ ರಸ್ತೆ ನಿಯಮ ಪಾಲಿಸುವುದು ಕರ್ತವ್ಯವಾಗಬೇಕು

***

ನಡೆದು ಕಚೇರಿ, ಮನೆ ತಲುಪುತ್ತಿದ್ದರು

70ರ ದಶಕದಲ್ಲಿ ಆರಂಭವಾದ ಐಟಿಐ, ಹೆಚ್‍ಎಂಟಿ, ಹೆಚ್‍ಎಎಲ್, ಬಿಹೆಚ್‍ಇಎಲ್ ಕಂಪನಿಗಳು ಕಾರ್ಖಾನೆ ಸಮೀಪದಲ್ಲೇ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದವು. ಇದರಿಂದಾಗಿ ಅವರು ಕೆಲಸಕ್ಕೆ ಹೋಗಲು ಬಸ್‌ ಅಥವಾ ಸ್ವಂತ ವಾಹನ ಬಳಸುವ ಅನಿವಾರ್ಯತೆ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಬೆಂಗಳೂರು 24 ಗಂಟೆಯೂ ಎಚ್ಚರವಾಗಿರುತ್ತದೆ. ಈ ಕಾರಣದಿಂದ ಜನರ ಓಡಾಟವು ಹಿಂದೆಂದಿಗಿಂತಲೂ ಅಧಿಕವಾಗಿದೆ.

ಕೊಂಚ ಪರಿಹಾರ

ಬೆಂಗಳೂರಿನ ರಸ್ತೆಗಳನ್ನು ಪಣಾಮಕಾರಿಯಾಗಿ ಬಳಸಿಕೊಳ್ಳಲು ‘ಅಡಾಪ್ಟಿವ್‌ ಸಿಗ್ನಲ್‍‘ಗಳನ್ನು ಈಗಾಗಲೇ ಪ್ರಯೋಗಿಕವಾಗಿ ಅಳವಡಿಸಲಾಗಿದೆ. ಸುಗಮ ಸಂಚಾರದ ದೃಷ್ಟಿಯಿಂದ ನಗರದ ಹಲವಾರು ರಸ್ತೆಗಳನ್ನು, ಅದರಲ್ಲೂ ಮುಖ್ಯವಾಗಿ ಜಂಕ್ಷನ್‌ಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಅತಿಮುಖ್ಯ ರಸ್ತೆಗಳನ್ನು ಉನ್ನತೀಕರಿಸಿ ಟೆಂಡರ್‌ ಶ್ಯೂರ್ ಮಾದರಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಇದು ಕೊಂಚಮಟ್ಟಿಗೆ ಪರಿಹಾರ ನೀಡಬಹುದು.

ಸಮ, ಬೆಸ ಸಂಖ್ಯೆ ಏಕೆ ಬೇಡ?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಿ ಮತ್ತು ಬೆಸ ಸಂಖ್ಯೆ ವಾಹನಗಳನ್ನು ಸರತಿಯಲ್ಲಿ ಓಡಾಡಲು ಅನುವು ಮಾಡಿಕೊಟ್ಟ ಪದ್ಧತಿಯನ್ನು ಬೆಂಗಳೂರಿಗೂ ಅನ್ವಯಿಸಬಾರದೇಕೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಬೆಂಗಳೂರಿಗೆ ಹೋಲಿಸಿದರೆ ದೆಹಲಿಯಲ್ಲಿ ಸಾರ್ವಜನಿಕ ಸಮೂಹ ಸಾರಿಗೆ ಸೌಲಭ್ಯ ಚೆನ್ನಾಗಿದೆ. ಬೆಂಗಳೂರಿನಲ್ಲಿ ಇದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT