ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲು ಅಗತ್ಯ: ನ್ಯಾ. ನಾಗಮೋಹನ್‌ ದಾಸ್‌

Published 19 ನವೆಂಬರ್ 2023, 15:55 IST
Last Updated 19 ನವೆಂಬರ್ 2023, 15:55 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲು ಕಲ್ಪಿಸಬೇಕು. ಆ ಮೂಲಕ ಅವರ ಹಕ್ಕುಗಳಿಗೆ ಬಲ ತುಂಬುವ ಕೆಲಸ ಮಾಡಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಹೇಳಿದರು.

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ‘ಒಂದೆಡೆ’ ಸಂಘಟನೆಯ ದಶಮಾನೋತ್ಸವದ ಅಂಗವಾಗಿ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ‘ಭಾರತದ ಸಂವಿಧಾನ ಹಾಗೂ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಮಹಿಳಾ ಮೀಸಲಾತಿ ಮಸೂದೆಯು ಸಂಸತ್ತಿನಲ್ಲಿ ಮಂಡನೆಯಾದ 28 ವರ್ಷಗಳ ಬಳಿಕ ಅನುಮೋದನೆ ದೊರಕಿದೆ. ಅದೂ, ಮುಂದೆಂದೋ ಜಾರಿಯಾಗುವ ಷರತ್ತಿನೊಂದಿಗೆ. 2011ರ ಜನಗಣತಿಯ ದತ್ತಾಂಶಗಳ ಆಧಾರದಲ್ಲೇ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬರಲಿ. ಅದರ ಜೊತೆಯಲ್ಲೇ ಲಿಂಗತ್ವ ಅಲ್ಪಸಂಖ್ಯಾತರಿಗೂ ರಾಜಕೀಯ ಮೀಸಲಾತಿ ದೊರಕಲಿ’ ಎಂದು ಆಗ್ರಹಿಸಿದರು.

ನಿಖರ ದತ್ತಾಂಶ ಅಗತ್ಯ: ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಭಾರತದಲ್ಲಿ ನಿಖರವಾದ ದತ್ತಾಂಶಗಳ ಕೊರತೆ ಇದೆ. ಬಹುತೇಕ ಸಂದರ್ಭಗಳಲ್ಲಿ ಇಂತಹ ದತ್ತಾಂಶಗಳು ಬಂಡವಾಳಾಹಿಗಳ ಪ್ರಭಾವದಿಂದ ರೂಪುಗೊಂಡಿರುತ್ತವೆ. ಈಗ ರಾಜಕೀಯ ಮೀಸಲಾತಿ ಪಡೆಯುವುದಕ್ಕೆ ಪೂರಕವಾಗಿ ನಿಖರವಾದ ದತ್ತಾಂಶಗಳನ್ನು ಸಂಗ್ರಹಿಸುವ ಅಗತ್ಯವಿದೆ’ ಎಂದರು.

‘ವಿಧಾನ ಪರಿಷತ್‌ ಮತ್ತು ರಾಜ್ಯಸಭೆಗಳಲ್ಲಿ ನಾಮನಿರ್ದೇಶನದ ಮೂಲಕ ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು. ಈಗ ಅಧಿಕಾರ ಹಿಡಿದವರ ಸುತ್ತ ಠಳಾಯಿಸುವ ಸಾಹಿತಿಗಳು, ಬರಹಗಾರರು ಸೇರಿದಂತೆ ನಮ್ಮ ಸ್ನೇಹಿತರೇ ಆ ಹುದ್ದೆ ಪಡೆಯಲು ನಡೆಸುತ್ತಿರುವ ಕಸರತ್ತು ನೋಡಿದರೆ ಮುಜುಗರವಾಗುತ್ತದೆ’ ಎಂದು ಹೇಳಿದರು.

ಸಂವಾದ ನಿರ್ವಹಣೆ ಮಾಡಿದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಎಂ.ಎಸ್‌. ಆಶಾದೇವಿ, ‘ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಸಮರ್ಪಕವಾಗಿ ಅರಿವು ಮೂಡಿಸುವಲ್ಲಿ ನಾವು ಇನ್ನೂ ಸಫಲವಾಗಿಲ್ಲ. ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿ  ಶೋಚನೀಯವಾಗಿದೆ’ ಎಂದರು.

ರಾಜ್ಯ ಅಂತರ್ಲಿಂಗಿ ಅಸೋಸಿಯೇಷನ್‌ನ ಅಬೇದಾ ಬೇಗಂ ಮತ್ತು ಶೈನಾಜ್‌ ಬೇಗಂ ಸಭೆಯನ್ನು ಉದ್ಘಾಟಿಸಿದರು. ಒಂದೆಡೆ ಸಂಘಟನೆಯ ಟ್ರಸ್ಟಿ ಮಾಳವಿಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಪ್ರಮುಖರಾದ ಅಕ್ಕೈ ಪದ್ಮಶಾಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT