ಬುಧವಾರ, ಮಾರ್ಚ್ 3, 2021
19 °C
‘ದೇಶ ಭಾಷೆಗಳು ಮತ್ತು ಅನುವಾದದ ಅನುಸಂಧಾನ’ ವಿಚಾರಸಂಕಿರಣ

ಅನುವಾದ ಎಂದರೆ ಸಂಸ್ಕೃತಿಯ ಹೇರಿಕೆಯಲ್ಲ: ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅನುವಾದ ಎಂದರೆ ಅಧೀನ ಸಂಸ್ಕೃತಿಯ ಮೇಲೆ ಪ್ರಧಾನ ಸಂಸ್ಕೃತಿಯ ಹೇರಿಕೆಯಲ್ಲ’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಜೈನ್ ಡೀಮ್ಡ್ ಟು ಬಿ ಯುನಿವರ್ಸಿಟಿ, ಅಮೆರಿಕದ ಸ್ಟೋನಿ ಬ್ರುಕ್ ವಿಶ್ವವಿದ್ಯಾಲಯ, ಅನುಸೃಷ್ಟಿ ಅನುವಾದ ಕೇಂದ್ರದ ಸಹಯೋಗದಲ್ಲಿ ನಡೆದ ‘ದೇಶ ಭಾಷೆಗಳು ಮತ್ತು ಅನುವಾದದ ಅನುಸಂಧಾನ’  ಅಂತರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಅನುವಾದ ಎಂದರೆ ಎರಡು ಭಾಷೆಗಳ ನಡುವಿನ ಅನುಸಂಧಾನ ಮಾತ್ರವಲ್ಲ. ಅದು, ಸಂಸ್ಕೃತಿಗಳ ನಡುವಿನ ಅನುಸಂಧಾನ’ ಎಂದು ಅವರು ಪ್ರತಿಪಾದಿಸಿದರು. 

‘ಕನ್ನಡ ಪರಂಪರೆಯನ್ನು ಗಮನಿಸಿದರೆ ಸಂಸ್ಕೃತದಿಂದ ಕನ್ನಡಕ್ಕೆ ಅನೇಕ ಕೃತಿಗಳು ಅನುವಾದಗೊಂಡಿವೆ. ಆದರೆ, ಕನ್ನಡದಿಂದ ಸಂಸ್ಕೃತಕ್ಕೆ ಎಷ್ಟು ಕೃತಿಗಳು ಅನುವಾದಗೊಂಡಿವೆ? ಏಕೆ ಅನುವಾದಗೊಂಡಿಲ್ಲ ಎಂಬ ಬಗ್ಗೆ ಆಲೋಚಿಸಬೇಕಾಗಿದೆ. ಜಾಗತಿಕ ನೆಲೆಯಲ್ಲಿ ಭಾಷಾಂತರವನ್ನು ಗಮನಿಸಿದರೆ ಎರಡು ಸಂಸ್ಕೃತಿಗಳ ನಡುವೆ ವಿನಿಮಯ ಎನ್ನುವ ಮಾತು ಎಷ್ಟರಮಟ್ಟಿಗೆ ಸಲ್ಲುತ್ತಿದೆ’ ಎಂದು ಪ್ರಶ್ನಿಸಿದರು.

‘ಜಾಗತಿಕ ನೆಲೆಯಲ್ಲೂ ಸಲ್ಲಬಹುದಾದ ಅನೇಕ ಸಿದ್ಧಾಂತಗಳು ನಮ್ಮಲ್ಲಿ ಇವೆ.  ನಾವು ಬೇರೆಯವರು ಕೊಟ್ಟಿದ್ದನ್ನು ಈವರೆಗೆ ಸ್ವೀಕರಿಸಿದ್ದೇವೆ. ಈಗ ನಾವು ಕೊಡುತ್ತಿದ್ದೇವೆ, ನೀವು ಸ್ವೀಕರಿಸಿ ಎಂದು ಹೇಳುವ ವಿಶ್ವಾಸವನ್ನು ಸ್ಥಳೀಯ ದೇಶಭಾಷೆಗಳು ಪಡೆದುಕೊಳ್ಳುತ್ತಿವೆ. ಇದು ಸಾಂಸ್ಕೃತಿಕವಾಗಿ ಬಹಳ ಮುಖ್ಯವಾದ ಸಂಗತಿ’ ಎಂದರು.

ಸಂಶೋಧಕ ಷ.ಶೆಟ್ಟರ್ ಅವರು, ‌‘ಭಾಷಾಂತರ ನಮಗೆ ಅಪರಿಚಿತ ಅಲ್ಲ. ದೇಶಿ ಭಾಷೆಗಳ ಆರಂಭ ಕಾಲದ ಸಾಹಿತ್ಯವೆಲ್ಲ ಭಾಷಾಂತರವೇ ಆಗಿದ್ದು, ಸ್ವಂತಿಕೆ ಕಡಿಮೆ.  ಭಾಷಾಂತರ ಭಾರತೀಯರಿಗೆ ಮೂಲಭೂತವಾಗಿಯೇ ಕರಗತವಾಗಿತ್ತು’ ಎಂದು ಪ್ರತಿಪಾದಿಸಿದರು.

‘ಎಲ್ಲಿಯವರೆಗೆ ನಮ್ಮ ಸಾಹಿತ್ಯವನ್ನು ನಾವೇ ಅಧ್ಯಯನ ಮಾಡುತ್ತೇವೋ ಅಲ್ಲಿಯವರೆಗೂ ಹೊಸ ಹೊಳಹು ಕಂಡುಕೊಳ್ಳಲು ಕಷ್ಟ. ಬೇರೆ ಭಾಷೆಯ ಸಾಹಿತ್ಯವನ್ನು ಅಧ್ಯಯನ ಆರಂಭಿಸಿದಾಗ ಗೊತ್ತಿಲ್ಲದ ಹೊಸ ಹೊಳಹುಗಳನ್ನು ನಾವು ಗುರುತಿಸಬಹುದು’ ಎಂದರು.

‘ಕನ್ನಡಿಗರಿಗೆ ದೇಶದ ಬೇರೆ ಭಾಷೆಗಳ ಸಾಹಿತ್ಯದ ಪರಿಚಯ ಇದೆ. ನಾನು 10ನೇ ವಯಸ್ಸಿನಲ್ಲಿದ್ದಾಗಲೇ ಬಂಕಿಮಚಂದ್ರ ಚಟರ್ಜಿ ಬಗ್ಗೆ ತಿಳಿದುಕೊಂಡಿದ್ದೆ. ಆದರೆ, ಬಂಗಾಳಿಯ ಕವಿಗಳಿಗೆ ನಮ್ಮ ಕುವೆಂಪು, ದ.ರಾ. ಬೇಂದ್ರೆ ಬಗ್ಗೆ ಗೊತ್ತೇ ಇಲ್ಲ. ಬೇರೆ ಭಾಷೆಯ ಸಾಹಿತ್ಯವನ್ನೂ ನಮ್ಮದಾಗಿ ಮಾಡಿಕೊಳ್ಳುವ ಹಂಬಲ ಇರಬೇಕು’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು