ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ನೇ ದಿನಕ್ಕೆ ಮುಷ್ಕರ: ಮೇಣದ ಬತ್ತಿ ಬೆಳಗಿ ಪ್ರತಿಭಟನೆ

ಬಸ್‌ಗಳ ಸಂಖ್ಯೆ ಕ್ರಮೇಣ ಹೆಚ್ಚಳ * ಬಸ್‌ ಹಾನಿಗೊಳಿಸಿದವರ ವಿರುದ್ಧ ಎಫ್‌ಐಆರ್‌
Last Updated 15 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿ ಒಂಬತ್ತನೇ ದಿನವಾದ ಗುರುವಾರ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

‘ನಮ್ಮ ಬದುಕನ್ನು ಸರ್ಕಾರ ಕತ್ತಲಲ್ಲಿ ಇಟ್ಟಿದ್ದು, 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಮೂಲಕ ಬೆಳಕನ್ನು ನೀಡಬೇಕು’ ಎಂದು ನೌಕರರು ಒತ್ತಾಯಿಸಿದರು.

ನೌಕರರ ಸಂಘದ ಕಚೇರಿಗಳ ಮುಂದೆ, ಆಯಾ ನಗರದ ಪ್ರಮುಖ ವೃತ್ತಗಳಲ್ಲಿ ದೀಪ ಬೆಳಗಿ ಪ್ರತಿಭಟಿಸಿದರು. ಈ ಸ್ಥಳಗಳಲ್ಲಿ ಪ್ರತಿಭಟನಕಾರರಿಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚಾಗಿತ್ತು. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಹೆಚ್ಚು ಜನ ಒಂದೆಡೆ ಸೇರದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಸಾರಿಗೆ ನೌಕರರ ಮಹಾ ಒಕ್ಕೂಟದ ಜೊತೆಗೆ, ಕನ್ನಡ ಪರ ಸಂಘಟನೆಗಳ ಸದಸ್ಯರೂ ಪ್ರತಿಭಟನೆಗೆ ಕೈ ಜೋಡಿಸಿದರು.

ಕಠಿಣ ಕ್ರಮ ಮುಂದುವರಿಕೆ:ಮನವೊಲಿಕೆಯ ಜತೆ ಜತೆಗೇ ವಜಾ, ಅಮಾನತು, ವರ್ಗಾವಣೆಯಂತಹ ಕ್ರಮಗಳನ್ನೂ ರಾಜ್ಯ ಸರ್ಕಾರ ಮುಂದುವರಿಸಿದೆ. ಎಸ್ಮಾ ನಿಯಮಗಳ ಅಡಿಯಲ್ಲಿಯೂ ಕ್ರಮ ಕೈಗೊಳ್ಳುತ್ತಿದೆ.

ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದ ಸರ್ಕಾರ, ಸಾರ್ವಜನಿಕವಾಗಿ ನೌಕರರಿಗೆ ನೋಟಿಸ್‌ ಜಾರಿ ಮಾಡಿತ್ತು.

ಕೆಲಸಕ್ಕೆ ಹಾಜರಾಗದ, ಖುದ್ದಾಗಿ ಬಂದು ಸಮಜಾಯಿಷಿ ನೀಡದ ನೌಕರರ ವಿರುದ್ಧ ಕಠಿಣ ಕ್ರಮಗಳನ್ನು ಸರ್ಕಾರ ಮುಂದುವರಿಸುವ ಸಾಧ್ಯತೆಯೂ ದಟ್ಟವಾಗಿದೆ. ಮುಷ್ಕರ ಪ್ರಾರಂಭವಾದಾಗಿನಿಂದ ಈವರೆಗೆ ಕೆಎಸ್‌ಆರ್‌ಟಿಸಿಯು 15 ನೌಕರರನ್ನು ಅಮಾನತುಗೊಳಿಸಿದ್ದರೆ, 85 ನೌಕರರು ವಜಾಗೊಂಡಿದ್ದಾರೆ. ಆಯಾ ನಿಗಮಗಳಲ್ಲಿಯೂ ಕಡ್ಡಾಯ ನಿವೃತ್ತಿ ನೀಡುವ, ನೋಟಿಸ್‌ ಕೊಡುವ ಕಾರ್ಯ ನಡೆಯುತ್ತಿದೆ.

ಇನ್ನೊಂದೆಡೆ, ಕಾರ್ಯಾಚರಿಸುತ್ತಿರುವ ಬಸ್‌ಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗುರುವಾರ ನಾಲ್ಕು ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳು ಸಂಚರಿಸಿವೆ.

ಬಸ್‌ಗೆ ಹಾನಿ–ಕ್ರಮ:ಸರ್ಕಾರಿ ಬಸ್‌ಗಳಿಗೆ ಹಾನಿ ಮಾಡುತ್ತಿರುವ ಪ್ರತಿಭಟನಕಾರರು ಮತ್ತು ನೌಕರರ ವಿರುದ್ಧ ಎಸ್ಮಾ ಅಡಿ ಎಫ್‌ಐಆರ್‌ ದಾಖಲಿಸಲಾಗುತ್ತಿದೆ. ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ 67 ಬಸ್‌ಗಳಿಗೆ ಆದ ಹಾನಿಗೆ ಸಂಬಂಧಿಸಿದಂತೆ 131 ಎಫ್‌ಐಆರ್‌ ದಾಖಲಾಗಿದೆ. 279 ನೌಕರರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, 69 ನೌಕರರನ್ನು ಬಂಧಿಸಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ನೌಕರರು ಮತ್ತು ಅವರ ಕುಟುಂಬದವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾರಿಗೆ ನೌಕರರಿಗೆ ನಟ ಯಶ್‌ ಬೆಂಬಲ

ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ, ನೌಕರರ ಒಕ್ಕೂಟಕ್ಕೆ ಪತ್ರ ಬರೆದಿರುವ ಚಿತ್ರನಟ ಯಶ್‌, ‘ನಾನೂ ಚಾಲಕನ ಮಗನಾಗಿದ್ದು, ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಅರಿವಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಅವರೊಂದಿಗೆ ಮಾತನಾಡಿದ್ದೇನೆ’ ಎಂದು ತಿಳಿಸಿದ್ದಾರೆ.

‘ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಮಗ. ಹಾಗಾಗಿ ಸಾರಿಗೆ ನೌಕರರ ಕಷ್ಟ ಏನೆಂಬುದು ನನಗೆ ತಿಳಿದಿದೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು ನನ್ನನ್ನು ಬಹುವಾಗಿ ಕಾಡುತ್ತಿವೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಮಸ್ಯೆಗೆ ಮತ್ತೊಂದು ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿಗೆ ಮುಕ್ತವಾಗಿ ಮಾತುಕತೆ ನಡೆಸುವುದು ಪರಿಹಾರವಾಗಬಲ್ಲದು. ವಿರಸ ಬಿಟ್ಟು ಸಾಮರಸ್ಯದಿಂದ ಮುನ್ನಡೆಯೋಣ’ ಎಂದು ಹೇಳಿದ್ದಾರೆ.

ಮುಷ್ಕರಕ್ಕೆ ಬೆಂಬಲ ಕೋರಿ ಸಾರಿಗೆ ನೌಕರರ ಒಕ್ಕೂಟವು ಯಶ್‌ ಅವರಿಗೆ ಪತ್ರ ಬರೆದಿತ್ತು.

ಶಾಸಕರ ಮನೆ ಮುಂದೆ ಧರಣಿ ಇಂದು

ಮುಷ್ಕರ ಆರಂಭವಾದಾಗಿನಿಂದಲೂ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರ ಒಕ್ಕೂಟವು, ರಾಜ್ಯದ ಎಲ್ಲ ಶಾಸಕರ ಮನೆ ಮುಂದೆ ಶುಕ್ರವಾರ ಬೆಳಿಗ್ಗೆ ಧರಣಿ ನಡೆಸಲು ನಿರ್ಧರಿಸಿದೆ.

‘ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದೂ ಹೇಳಿದೆ.

1927 ಸಾರಿಗೆ ಸಿಬ್ಬಂದಿಗೆ ವೇತನ ಪಾವತಿ

ಕಲಬುರ್ಗಿ: ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದ 1927 ಸಿಬ್ಬಂದಿಗೆ ಗುರುವಾರ ಮಾರ್ಚ್‌ ತಿಂಗಳ ವೇತನ ನೀಡಲಾಗಿದ್ದು, ಒಟ್ಟು ₹ 3.40 ಕೋಟಿ ಪಾವತಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್‌ ತಿಳಿಸಿದ್ದಾರೆ.

ಗುರುವಾರ ಕೂಡ 657 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಇದರೊಂದಿಗೆ 321 ಖಾಸಗಿ ಬಸ್‌, 194 ನೆರೆ ರಾಜ್ಯಗಳ ಸರ್ಕಾರಿ ಬಸ್‌, 2271 ಇತರೆ ಖಾಸಗಿ ವಾಹನಗಳು ಸಂಚರಿಸಿವೆ. ಸಂಸ್ಥೆಗೆ ಇದೂವರೆಗೆ
₹40.50 ಕೋಟಿ ನಷ್ಟವಾಗಿದೆ. ಆದ್ದರಿಂದ ಎಲ್ಲ ಸಿಬ್ಬಂದಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದೂ ಕೂರ್ಮಾರಾವ್‌ ಮತ್ತೊಮ್ಮೆ ಕೋರಿದ್ದಾರೆ.

ಇದರ ಮಧ್ಯೆ ಉಪಚುನಾವಣೆಗಳು ನಡೆಯುತ್ತಿರುವ ಕ್ಷೇತ್ರಗಳಿಗೂ ಬಸ್‌ ನೀಡಲಾಗಿದೆ. ಬೆಳಗಾವಿಗೆ 240, ಮಸ್ಕಿಗೆ 25 ಹಾಗೂ ಬಸವಕಲ್ಯಾಣಕ್ಕೆ 45 ಬಸ್‌ಗಳನ್ನು ಒದಗಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಗುರುವಾರ ಕಾರ್ಯಾಚರಣೆ ನಡೆಸಿದ ಬಸ್‌ಗಳ ವಿವರ

ಕೆಎಸ್‌ಆರ್‌ಟಿಸಿ;2,006

ಬಿಎಂಟಿಸಿ;707

ಎನ್‌ಇಕೆಆರ್‌ಟಿಸಿ;786

ಎನ್‌ಡಬ್ಲ್ಯುಕೆಆರ್‌ಟಿಸಿ; 644

ಒಟ್ಟು;4,143

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT