ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಕಾಡಿನೊಳಗೆ ಸಿಕ್ಕಿತು ಲೋಡು ಕಸ

ಕಸ ಹೆಕ್ಕಲು ಆರ್‌ಎಫ್‌ಒ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮದಾನ
Last Updated 4 ಜೂನ್ 2020, 23:16 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಪ್ರಾಣಿಗಳಿಗೆ ಮಾನವನ ಹಸ್ತಕ್ಷೇಪವಿಲ್ಲದ ನೆಲೆ ಕಲ್ಪಿಸುವ ಉದ್ದೇಶದಿಂದ ಘೋಷಿಸಿರುವ ರಾಷ್ಟ್ರೀಯ ಉದ್ಯಾನಗಳೂ ಪ್ಲಾಸ್ಟಿಕ್‌, ಬಟ್ಟೆಬರೆ ಮುಂತಾದ ಕಸಗಳಿಂದ ಮುಕ್ತವಾಗಿಲ್ಲ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೋಡಿಹಳ್ಳಿ ವಲಯದ ವ್ಯಾಪ್ತಿಯ ಕಾಡನ್ನು ಪ್ಲಾಸ್ಟಿಕ್‌ ಮತ್ತಿತರ ಮಾನವ ಜನ್ಯ ಕಶ್ಮಲಗಳಿಂದ ಮುಕ್ತಗೊಳಿಸಲು ಇಲ್ಲಿನ ಸಿಬ್ಬಂದಿಯ ತಂಡ ರಜಾ ದಿನಗಳಲ್ಲಿ ಶ್ರಮದಾನ ನಡೆಸುವ ಮೂಲಕ ಗಮನ ಸೆಳೆದಿದೆ.

ಕೋಡಿಹಳ್ಳಿಯ ವಲಯ ಅರಣ್ಯಾಧಿಕಾರಿ ಎಚ್‌.ವಿ.ಪ್ರಶಾಂತ್‌ ತಮ್ಮ ವ್ಯಾಪ್ತಿಯ ಕಾಡನ್ನು ಮಾನವಜನ್ಯ ಕಸಗಳಿಂದ ಮುಕ್ತಗೊಳಿಸಲು ಪಣ ತೊಟ್ಟಿದ್ದಾರೆ. ತಮ್ಮ ಅಧೀನದ ಸುಮಾರು 40 ಸಿಬ್ಬಂದಿಯನ್ನು ಹುರಿದುಂಬಿಸಿ, ಸ್ವಯಂಪ್ರೇರಿತವಾಗಿ ಅವರ ಜೊತೆ ಸೇರಿಕೊಂಡು ರಜಾದಿನಗಳಲ್ಲಿ ಕಾಡುಮೇಡುಗಳನ್ನು ಅಲೆದು ಕಸ ಹೆಕ್ಕುವ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಶನಿವಾರ, ಭಾನುವಾರ ಸುಮಾರು ಒಂದು ಟ್ರಕ್‌ ಲೋಡ್‌ನಷ್ಟು ಪ್ಲಾಸ್ಟಿಕ್‌, ಗಾಜಿನ ಬಾಟಲಿ, ಬಟ್ಟೆ ಬರೆಯಂತಹ ಕಸವನ್ನು ಸಂಗ್ರಹಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ಈ ಉತ್ಸಾಹ ವನ್ಯಜೀವಿ ಕಾರ್ಯಕರ್ತರ ಮೆಚ್ಚುಗೆಗೂ ಪಾತ್ರವಾಗಿದೆ.

‘ಕೋಡಿಹಳ್ಳಿ ವಲಯದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯಾನದೊಳಗೆ ಬಿಳಿಕಲ್‌ಬೆಟ್ಟ ಹಾಗೂ ಸುಂಡಗಟ್ಟ ಪ್ರದೇಶಗಳನ್ನು ನಾವು ಸ್ವಚ್ಛಗೊಳಿಸಿದ್ದೇವೆ. ಬಿಳಿಕಲ್‌ ಬೆಟ್ಟದಲ್ಲಿ ರಂಗನಾಥಸ್ವಾಮಿ ಗುಡಿ ಹಾಗೂ ಸುಂಡಗಟ್ಟದಲ್ಲಿ ಮಹದೇಶ್ವರ ಗುಡಿಗಳಿವೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ನೂರಾರು ಮಂದಿ ಭಾಗವಹಿಸುತ್ತಾರೆ. ಈ ವೇಳೆ ಪ್ಲಾಸ್ಟಿಕ್‌ ಸೇರಿದಂತೆ ಸಾಕಷ್ಟು ಕಸ ಕಾಡು ಸೇರುತ್ತದೆ. ಇಲ್ಲಿ ರಾಷ್ಟ್ರೀಯ ಉದ್ಯಾನದ ಮೂಲಕ ಮರಳವಾಡಿ– ಹುಣಸನಹಳ್ಳಿ– ತಮಿಳುನಾಡು ಸಂಪರ್ಕಿಸುವ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಈ ಹೆದ್ದಾರಿಯನ್ನು ಬಳಸುವವರೂ ಕಸ ಎಸೆಯುತ್ತಾರೆ’ ಎನ್ನುತ್ತಾರೆ ಪ್ರಶಾಂತ್‌.

‘ರಾಷ್ಟ್ರೀಯ ಉದ್ಯಾನದ ಒಳಗೆ ಮೊದಲಿಂದಲೂ ಇರುವ ಕಂದಾಯಗ್ರಾಮಗಳ ನಿವಾಸಿಗಳು ಬಳಸಿ ಎಸೆಯುವ ಕಸವೂ ಹಳ್ಳ ಕೊಳ್ಳಗಳ ಮೂಲಕ ಕಾಡು ಸೇರಿ ವನ್ಯಪ್ರಾಣಿಗಳ ಸಹಜ ಆವಾಸವನ್ನು ಕಲುಷಿತಗೊಳಿಸುತ್ತಿವೆ.ಪ್ಲಾಸ್ಟಿಕ್‌ನಂತಹ ಕಸದಿಂದ ಕಾಡುಪ್ರಾಣಿಗಳ ಸಹಜ ನೆಲೆಗೆ ಏನೆಲ್ಲ ಆಪತ್ತು ಇದೆ ಎಂಬುದು ನಮಗೆ ಗೊತ್ತು. ಹಾಗಾಗಿ ಅವುಗಳನ್ನು ತೆರವುಗೊಳಿಸಲು ಮುಂದಾದೆವು’ ಎಂದು ಅವರು ತಿಳಿಸಿದರು.

‘ಕೆಲವು ಸಂಘ ಸಂಸ್ಥೆಗಳು ಆಗೊಮ್ಮೆ ಈಗೊಮ್ಮೆ ಕಾಡಿನೊಳಗೆ ಕಸ ಹೆಕ್ಕಲು ಶ್ರಮದಾನ ನಡೆಸುತ್ತವೆ. ಅವರಿಗೆ ಕಾಡಿನ ಸಂಪೂರ್ಣ ಪರಿಚಯ ಇರುವುದಿಲ್ಲ. ಹಾಗಾಗಿ ನಮ್ಮ ಸಿಬ್ಬಂದಿಯನ್ನೇ ಬಳಸಿ ಶ್ರಮದಾನ ನಡೆಸಿದೆವು. ಕಾಡೊಳಗೆ ಯಾವರೀತಿಯ ಕಸ ಸೇರಿಕೊಳ್ಳುತ್ತದೆ ಎಂಬುದು ನಮಗೂ ಮನದಟ್ಟಾಯಿತು. ಭವಿಷ್ಯದಲ್ಲಿ ಇಂತಹ ಕಸ ಕಾಡು ತಲುಪದಂತೆ ತಡೆಯಲು ಪರ್ಯಾಯ ಕ್ರಮ ಕೈಗೊಳ್ಳುವುದಕ್ಕೂ ಇದರಿಂದ ನೆರವಾಗಲಿದೆ’ ಎಂದು ಅವರು ವಿವರಿಸಿದರು.

‘ಕಸ ಹೆಕ್ಕುವುದಕ್ಕಿಂತ ಕಾಡಿನೊಳಗೆ ಕಸ ಸೇರದಂತೆ ತಡೆಯುವುದೇ ಸೂಕ್ತ ವಿಧಾನ. ಆದರೆ ಅದು ಅಷ್ಟು ಸುಲಭವಲ್ಲ. ಜನರ ಮನವೊಲಿಸಿ ಮುಂದಿನ ವರ್ಷದಿಂದ ಜಾತ್ರೆ ವೇಳೆ ಪ್ಲಾಸ್ಟಿಕ್‌ನಂತಹ ಉತ್ಪನ್ನಗಳನ್ನು ಕಾಡಿನೊಳಗೆ ತರದಂತೆ ನಿರ್ಬಂಧಿಸುವ ಉದ್ದೇಶವಿದೆ. ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವಂತೆ ಜಾಗೃತಿ ಮೂಡಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಇತರ ವಲಯಗಳ ಸಿಬ್ಬಂದಿಗೂ ಮಾದರಿ’
‘ಎಲ್ಲೆಡೆ ಇಂದು ಪ್ಲಾಸ್ಟಿಕ್ ಬಳಕೆ ಮಿತಿಮೀರಿದ್ದು, ಕಾಡಿನೊಳಗಿನ ಜೀವಜಗತ್ತಿಗೂ ಇದು ಮಾರಕವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕೋಡಿಹಳ್ಳಿ ವಲಯದ ಆರ್‌ಎಫ್‌ಒ ತಮ್ಮ ಸಿಬ್ಬಂದಿ ಜೊತೆ ಸೇರಿ ಇಡೀ ವಲಯವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುತ್ತಿರುವುದು ಪ್ರಶಂಸನೀಯ. ಇದು ಇತರ ವಲಯಗಳ ಸಿಬ್ಬಂದಿಗೂ ಮಾದರಿ. ಪರಿಸರ ದಿನಾಚರಣೆ ನಿಮಿತ್ತ ವನ್ಯಜೀವಿಗಳಿಗೆ ಇದಕ್ಕಿಂತ ಉತ್ತಮ ಕೊಡುಗೆ ಬೇರೆ ಇರಲಾರದು’ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌ ಶಂಕಿನಮಠ ‘ಪ್ರಜಾವಾಣಿ’ಗೆ ತಿಳಿಸಿದರು.

**
ಕಾಡಿನೊಳಗೆ ಕಸ ಹೆಕ್ಕಲು ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೇ ಶ್ರಮಾದಾನ ನಡೆಸುವುದು ನಡೆಸುವುದು ನಿಜಕ್ಕೂ ಶ್ಲಾಘನೀಯ. ಜನರೂ ಬೇಕಾಬಿಟ್ಟಿ ಕಸ ಎಸೆಯದೆ ಕಾಡಿನ ಸಹಜತೆ ಕಾಪಾಡಲು ಕೈಜೋಡಿಸಬೇಕು
-ಭಾನುಪ್ರಕಾಶ್‌, ಬನ್ನೇರುಘಟ್ಟ ನೇಚರ್‌ ಕನ್ಸರ್ವೇಷನ್‌ ಟ್ರಸ್ಟ್‌ನ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT