ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತ್ತಷ್ಟು ನಗರಗಳಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ’

ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್ಸ್‌ ನಿಗಮದ ಅಧ್ಯಕ್ಷ ಡಿ.ಎಸ್‌. ವೀರಯ್ಯ
Last Updated 7 ಡಿಸೆಂಬರ್ 2020, 20:48 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಸಾಗಣೆ ಉದ್ಯಮಕ್ಕೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಗಮದಿಂದ ರಾಜ್ಯದ ಮತ್ತಷ್ಟು ನಗರಗಳಲ್ಲಿ ಬೃಹತ್‌ ಪ್ರಮಾಣದ ಟ್ರಕ್‌ ಟರ್ಮಿನಲ್‌ಗಳನ್ನು ನಿರ್ಮಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಡಿ.ಎಸ್‌. ವೀರಯ್ಯ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಗಮದಿಂದ ದಾವಣಗೆರೆ, ಹರಿಹರ, ಶಿವಮೊಗ್ಗ, ವಿಜಯಪುರ, ಮಂಗಳೂರು, ಬೀದರ್‌, ಕಲಬುರ್ಗಿ, ಚಿತ್ರದುರ್ಗ, ಹಿರಿಯೂರು ಸೇರಿದಂತೆ ಹಲವು ಕಡೆಗಳಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸುವ ಪ್ರಸ್ತಾವವಿದೆ. ಈ ಉದ್ದೇಶಕ್ಕಾಗಿ ಜಮೀನು ಗುರುತಿಸುವಂತೆ ವಿವಿಧ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ‘ ಎಂದರು.

ಬೆಂಗಳೂರಿನ ಯಶವಂತಪುರದಲ್ಲಿ 39 ಎಕರೆ ವಿಸ್ತೀರ್ಣದ ಟರ್ಮಿನಲ್‌ ಇದ್ದು, ನಿತ್ಯವೂ 1,500ರಿಂದ 2,000 ಲಾರಿಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಈ ಟರ್ಮಿನಲ್‌ನಲ್ಲಿ ಮೂಲಸೌಕರ್ಯ ಹೆಚ್ಚಿಸಲಾಗುವುದು. ಸಮೀಪದಲ್ಲೇ ಬೃಹತ್‌ ಭವನವೊಂದನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಹುಬ್ಬಳ್ಳಿ ನಗರದಲ್ಲಿ ಟ್ರಕ್‌ ಟರ್ಮಿನಲ್‌ ಮತ್ತು ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣಕ್ಕೆ ನಿಗಮಕ್ಕೆ 56 ಎಕರೆ 13 ಗುಂಟೆ ಜಮೀನು ಹಂಚಿಕೆಯಾಗಿದೆ. ಅಲ್ಲಿ ಶೀಥಲೀಕರಣ ವ್ಯವಸ್ಥೆಯನ್ನು ಒಳಗೊಂಡ ಟರ್ಮಿನಲ್‌ ನಿರ್ಮಿಸಲಾಗುವುದು. ಹೊಸಪೇಟೆಯಲ್ಲಿ 37 ಎಕರೆ 12 ಗುಂಟೆ ಜಮೀನು ಲಭ್ಯವಿದ್ದು, ಖಾಸಗಿ ಸಹಭಾಗಿತ್ವದಲ್ಲಿ ₹ 12 ಕೋಟಿ ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಮೈಸೂರು– ನಂಜನಗೂಡು ವರ್ತುಲ ರಸ್ತೆಯಲ್ಲಿ ನಿಗಮಕ್ಕೆ 16 ಎಕರೆ 20 ಗುಂಟೆ ಜಮೀನು ಲಭ್ಯವಿದೆ. ಮೊದಲ ಹಂತದಲ್ಲಿ ₹ 15.60 ಕೋಟಿ ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಿಸಲಾಗಿದೆ. ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ 7 ಎಕರೆ 26 ಗುಂಟೆ ವಿಸ್ತೀರ್ಣದಲ್ಲಿ ₹ 7.71 ಕೋಟಿ ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಿಸಲಾಗಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರದಲ್ಲಿ 13 ಎಕರೆ 28 ಗುಂಟೆ ವಿಸ್ತೀರ್ಣದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT