ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ರಸ್ತೆ: ತಜ್ಞರ ಸಮಿತಿ ವರದಿ ಇಲ್ಲದೇ ಮೇಲ್ಸೇತುವೆ ಬಂದ್‌?

ಗುಣಮಟ್ಟ ಪರಿಶೀಲನೆಗೆ ತಜ್ಞರ ಸಮಿತಿ ನೇಮಿಸಿಲ್ಲ: ಹೆದ್ದಾರಿ ಪ್ರಾಧಿಕಾರ
Last Updated 20 ಏಪ್ರಿಲ್ 2022, 21:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆ ಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆ ಮೇಲ್ಸೇತುವೆ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆಗೆ ಯಾವುದೇ ತಜ್ಞರ ಸಮಿತಿಯನ್ನೂ ನೇಮಿಸಿಲ್ಲ!

ಹೌದು... ಹೀಗೆಂದು ಸ್ವತಃ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ. ಸುರಕ್ಷತೆ ಮತ್ತು ಗುಣಮಟ್ಟ ಸಂಬಂಧ ತಜ್ಞರ ಸಮಿತಿ ನೀಡಿದ್ದ ವರದಿಯ ದೃಢೀಕೃತ ಪ್ರತಿ ನೀಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಎಲ್‌.ಜೀವನ್‌ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದರು.

ಇದಕ್ಕೆ ಉತ್ತರ ನೀಡಿರುವ ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿಯ ಯೋಜನಾ ನಿರ್ದೇಶಕ ಎ.ಕೆ.ಜನ್‌ ಬಾಜ್, ‘ಈ ರೀತಿಯ ಯಾವುದೇ ಸಮಿತಿಯನ್ನೂ ನೇಮಿಸಿಲ್ಲ’ ಎಂದು ತಿಳಿಸಿದ್ದಾರೆ.

ಪ್ರತಿ ಮಳೆಗಾಲದ ಬಳಿಕ ಸಾಮಾನ್ಯ ವಾಗಿ ಮೇಲ್ಸೇತುವೆ ಸ್ಥಿತಿಗತಿ ಪರಿಶೀಲನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಡೆಸುತ್ತಾರೆ. ಅದರಂತೆಜ.25ರಂದು ಪರಿಶೀಲನೆ ನಡೆಸುತ್ತಿದ್ದಾಗ ಈ ದೋಷ ಪತ್ತೆಯಾಗಿ 56 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಎಲ್ಲಾ ವಾಹನಗಳು ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲೇ ಸಂಚರಿಸಬೇಕಿದ್ದರಿಂದ ವಾಹನಗಳು ಗಂಟೆಗಟ್ಟಲೆ ದಟ್ಟಣೆಯಲ್ಲಿಸಿಲುಕುತ್ತಿದ್ದವು.

ಈ ವಿಷಯವನ್ನು ಕಳೆದವಿಧಾನಸಭೆ ಅಧಿವೇಶನದಲ್ಲಿ ಜೆಡಿಎಸ್ ಶಾಸಕ ಆರ್.ಮಂಜುನಾಥ್ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಈ ಮೇಲ್ಸೇತುವೆಯ 102 ಮತ್ತು 103ನೇ ಕಂಬಗಳ ವ್ಯಾಪ್ತಿಯಲ್ಲಿ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ವರದಿ ನೀಡಿದೆ’ ಎಂದು ತಿಳಿಸಿದ್ದರು.

‘ಮೇಲ್ಸೇತುವೆ ಕಳಪೆ ಕಾಮಗಾರಿ ಯಿಂದ ಕೂಡಿದ್ದು, ದೋಷದಿಂದ ಕೂಡಿರುವ ಕಂಬಗಳ ಮರು ನಿರ್ಮಾ ಣಕ್ಕೆ ಸಲಹೆ ನೀಡಿದೆ’ ಎಂದು ಹೇಳಿದ್ದರು.

ಹಲವು ಅನುಮಾನ: ‘ಆ ವರದಿ ನೀಡುವಂತೆ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ನಾವು ಅರ್ಜಿ ಸಲ್ಲಿಸಿದ್ದೆವು. ಆದರೆ ತಜ್ಞರ ಸಮಿತಿಯನ್ನೇ ನೇಮಿಸಿಲ್ಲ ಎಂಬ ಉತ್ತರ ಬಂದಿದೆ. ಇದನ್ನು ನೋಡಿದರೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ’ ಎಂದು ಕೆಆರ್‌ಎಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್ ಹೇಳಿದರು.

‘ಸಂಚಾರ ನಿರ್ಬಂಧಿಸಲುತಾಂತ್ರಿಕ ಕಾರಣಗಳೇನು, ಸೇತುವೆಯ ಸ್ಥಿತಿಗತಿ ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ನಮ್ಮದಾಗಿತ್ತು. ಸಮಿತಿಯನ್ನೇ ನೇಮಿಸಿಲ್ಲ, ವರದಿಯೂ ಇಲ್ಲ ಎಂಬ ಉತ್ತರ ಬಂದಿದೆ. ಕಳಪೆ ಕಾಮಗಾರಿ ವಿಷಯ ಗಂಭೀರವಾಗಿ ಇರುವುದರಿಂದ ವರದಿ ಇದ್ದರೂ ಎನ್‌ಎಚ್‌ಎಐ ಮುಚ್ಚಿಡುತ್ತಿರಬಹುದು ಅಥವಾ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿರಬಹುದು. ಒಟ್ಟಾರೆ ಎಲ್ಲವೂ ಅಸ್ಪಷ್ಟ. ಜನ ಮಾತ್ರ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವುದು ಮತ್ತು ಸುಂಕ ಕಟ್ಟುವುದು ಮುಂದುವರಿದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT