ಭಾನುವಾರ, ಮೇ 22, 2022
29 °C

ಎರಡು ಬಾರಿ ಜೈಲು ಶಿಕ್ಷೆ: ಮತ್ತೆ ಕೊಲೆಗೈದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಲೆ ಪ್ರಕರಣಗಳಲ್ಲಿ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿ, ಮತ್ತೆ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. 

ಆರ್ಮುಗಂ (48) ಬಂಧಿತ ಆರೋಪಿ. ಬನಶಂಕರಿ 6ನೇ ಹಂತದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ ಈತ ಕಾವಲುಗಾರನಾಗಿ ಕೆಲಸಕ್ಕೆ ಸೇರಿದ್ದ.

ಅದೇ ಕಟ್ಟಡದಲ್ಲಿ ಕೆಲಸಕ್ಕೆಂದು ಆರೋಪಿಯೇ ಕರೆತಂದಿದ್ದ ಧಾರವಾಡ ಮೂಲದ ಮೆಹಬೂಬ್‌ ಸಾಬ್ (45) ಎಂಬುವರ ಜೊತೆಗೆ ಹಣದ ವಿಚಾರಕ್ಕಾಗಿ ಜ.28ರ ರಾತ್ರಿ ಜಗಳವಾಗಿತ್ತು. ಈ ವೇಳೆ  ಮೆಹಬೂಬ್‌ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಎರಡು ಬಾರಿ ಜೈಲು ಶಿಕ್ಷೆ: ‘ಆರೋಪಿ ತಮಿಳುನಾಡಿನ ತಿರುವಣ್ಣಾಮಲೈಯವನಾಗಿದ್ದು, ಅಲೆಮಾರಿಯಾಗಿ ಜೀವನ ನಡೆಸುತ್ತಿದ್ದ. 1998ರಲ್ಲಿ ಮೈಸೂರಿನ ದೇವರಾಜ ನಗರ ಠಾಣಾ ವ್ಯಾಪ್ತಿಯಲ್ಲಿ ತನ್ನ ಅಣ್ಣನ ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಹೊರಬಂದ ನಂತರ 2004ರಲ್ಲಿ ಬೆಂಗಳೂರಿನ ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ತನ್ನ ಹೆಂಡತಿಯ ತಲೆಗೆ ಕಲ್ಲಿನಿಂದ ಹೊಡೆದು, ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ 14 ವರ್ಷಗಳ ಜೈಲುಶಿಕ್ಷೆಗೂ ಗುರಿಯಾಗಿದ್ದ. ಐದು ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ನಂತರ, ಗಾರೆ ಕೆಲಸ ಮಾಡಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು