ಅಕ್ರಮ ಮದ್ಯ ಮಾರಾಟ ತಡೆಗೆ ಟ್ವಿಟರ್ ಅಭಿಯಾನ

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕವು ಭಾನುವಾರ ಟ್ವಿಟರ್ ಅಭಿಯಾನ ಹಮ್ಮಿಕೊಂಡಿತ್ತು.
ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಟ್ವಿಟರ್ ಅಭಿಯಾನದಲ್ಲಿ #StopIllegalLiquorSale ಹಾಗೂ #ImplementHCOrder ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿದ್ದವು.
‘ರಾಜ್ಯದಲ್ಲಿ ಸಂಪೂರ್ಣವಾಗಿ ಅಕ್ರಮ ಮದ್ಯ ನಿಷೇಧ ಆಗಬೇಕು. ಹೈಕೋರ್ಟ್ ಸಹ ಅಕ್ರಮ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದೆ. ಆದರೂ, ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಲೇ ಇದ್ದು, ಗ್ರಾಮೀಣ ಭಾಗಗಳಲ್ಲಿ ರಾಜಾರೋಷವಾಗಿದೆ’ ಎಂದು ಮದ್ಯ ನಿಷೇಧ ಆಂದೋಲನದ ಸ್ವರ್ಣ ಭಟ್ ತಿಳಿಸಿದರು.
‘ನ್ಯಾಯಾಲಯದ ಆದೇಶಕ್ಕೆ ರಾಜ್ಯದಲ್ಲಿ ಕಿಮ್ಮತ್ತಿನ ಬೆಲೆ ಇಲ್ಲ. ಇದಕ್ಕೆ ಅಕ್ರಮ ಮದ್ಯ ಮಾರಾಟವೇ ಉದಾಹರಣೆ. ಇದು ರಾಜ್ಯಕ್ಕೆ ಮಾತ್ರ ಸೀಮಿತವಾಗಿರುವ ಸಮಸ್ಯೆ ಅಲ್ಲ. ರಾಷ್ಟ್ರಮಟ್ಟದಲ್ಲೂ ಈ ಬಗ್ಗೆ ಜಾಗೃತಿ ಮೂಡುವ ಅಗತ್ಯವಿದ್ದು, ಇದಕ್ಕಾಗಿ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದ್ದೇವೆ’ ಎಂದರು.
ಅಭಿಯಾನ ಬೆಂಬಲಿಸಿ ಟ್ವೀಟ್ ಮಾಡಿದ ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್,‘ಅಕ್ರಮ ಮದ್ಯ ಮಾರಾಟ ತಡೆಯಬೇಕೆಂದು ಕೇಳಲು ಅಥವಾ ಮಹಿಳಾ ನಿಯೋಗವನ್ನು ಮುಖ್ಯಮಂತ್ರಿ ಭೇಟಿ ಮಾಡಬೇಕೆಂದು ಒತ್ತಾಯಿಸಲು ಕರ್ನಾಟಕದಲ್ಲಿ ಪ್ರತಿಭಟನೆ ಅಗತ್ಯವೇ?’ ಎಂದು ಆಕ್ರೋಶ ಹೊರಹಾಕಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ‘ರಾಯಚೂರಿನಲ್ಲಿ ಕಳೆದ 18 ದಿನಗಳಿಂದ ಮಹಿಳೆಯರು ಮದ್ಯ ನಿಷೇಧಕ್ಕಾಗಿ ಧರಣಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಕ್ಕಾಪಟ್ಟೆ ಕೆಲಸ. ಏನು ಮಾಡುತ್ತೀರಿ? ಆದರೂ, ಇವರ ಕಡೆ ಸ್ವಲ್ಪ ಗಮನ ಕೊಡಿ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.