ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಸ್ಟ್ಯಾಂಪ್‌ ವೆಂಡರ್‌ಗಳ ಸೆರೆ

ಕೃಷಿ ಜಮೀನನ್ನು ಲೇಔಟ್‌ಗಳಾಗಿ ಅಭಿವೃದ್ಧಿಪಡಿಸಿ ಮಾರಾಟ ಮಾಡಲು ಸಹಕರಿಸಿದ ಆರೋಪ
Last Updated 19 ನವೆಂಬರ್ 2019, 2:44 IST
ಅಕ್ಷರ ಗಾತ್ರ

ಬೆಂಗಳೂರು: ಹಸಿರು ವಲಯದ ವ್ಯಾಪ್ತಿಯಲ್ಲಿರುವ ಕೃಷಿ ಜಮೀನನ್ನು ನಿಯಮಾವಳಿ ಉಲ್ಲಂಘಿಸಿ ಲೇಔಟ್‌ಗಳಾಗಿ ಅಭಿವೃದ್ಧಿಪಡಿಸಿ ಗ್ರಾಹಕರಿಗೆ ಮಾರಾಟ ಮಾಡಲು ಸಹಕರಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಸ್ಟ್ಯಾಂಪ್‌ ವೆಂಡರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪೀಣ್ಯ 2ನೇ ಹಂತದ ಕೆಂಪೇಗೌಡ ಲೇಔಟ್‌ನ ಆರ್‌. ರಂಗಸ್ವಾಮಿ (49) ಹಾಗೂ ಟಿ. ದಾಸರಹಳ್ಳಿಯ ರವೀಂದ್ರ ನಗರದ ಕೇಶವಪ್ಪ (39) ಬಂಧಿತರು. ದಾಸನಪುರ ಹಾಗೂ ಲಗ್ಗೆರೆ ಉಪ ನೋಂದಣಾಧಿಕಾರಿ ಕಚೇರಿಗಳ ಬಳಿ ಕೆಲಸ ಮಾಡುವ ಆರೋಪಿಗಳು, ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಾನೂನುಬಾಹಿರವಾಗಿ ನಿವೇಶನ ಮಾರಾಟ ಮಾಡಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಸಿರು ನಿವೇಶನಗಳನ್ನು ಗುರುತಿಸಿ ರೈತರಿಂದ ಖರೀದಿಸುತ್ತಿದ್ದರು. ಆನಂತರ ಅದನ್ನು ಸೈಟುಗಳಾಗಿ ಪರಿವರ್ತಿಸುತ್ತಿದ್ದರು. ಗ್ರಾಹಕರಿಗೆ ಮಾರಾಟ ಮಾಡಿಸಲು ಬಂಧಿತರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಕಂದಾಯ ಮತ್ತಿತರ ನಿವೇಶನಗಳನ್ನು ಅಕ್ರಮವಾಗಿ ನೋಂದಣಿ ಮಾಡಿ ಸರ್ಕಾರಕ್ಕೆ ನಷ್ಟ ಮಾಡಿದ ಪ್ರಕರಣದಲ್ಲಿ ಇನ್ನೂ ಕೆಲವು ಸ್ಟ್ಯಾಂಪ್‌ ವೆಂಡರ್‌ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಪುಣೆಗೆ ಪೊಲೀಸರ ತಂಡ

ನಿವೇಶನಗಳ ಅಕ್ರಮ ಮಾರಾಟ ಕುರಿತು ‘ಸಿಡಾಕ್‌’ನಿಂದ ಸಂಪೂರ್ಣ ಮಾಹಿತಿ ಪಡೆಯಲು ಸಿಸಿಬಿ ಇನ್‌ಸ್ಪೆಕ್ಟರ್‌ ದಿವಾಕರ್‌ ನೇತೃತ್ವದ ತಂಡ ಪುಣೆಗೆ ತೆರಳಿದೆ.

ಅಧಿಕಾರಿಗಳು ನಗರಕ್ಕೆ ವಾ‍‍ಪಸಾದ ಬಳಿಕ ವಂಚನೆ ಪ್ರಕರಣದ ಬಗ್ಗೆ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂದುವರಿದ ವಿಚಾರಣೆ

ಅಕ್ರಮದಲ್ಲಿ ಭಾಗಿಯಾದ ಆರೋಪಕ್ಕೆ ಒಳಗಾಗಿರುವ11 ಸಬ್‌ ರಿಜಿಸ್ಟ್ರಾರ್‌ಗಳ ವಿಚಾರಣೆ ಸೋಮವಾರ
ನಡೆಯಿತು.

ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಏಳುಪ್ರಶ್ನೆಗಳನ್ನು ಕೇಳಿದರು. ಆದರೆ, ಈ ಪ್ರಶ್ನೆಗಳಿಗೆ ಯಾರೂಉತ್ತರಿಸಲಿಲ್ಲ ಎಂದೂ ಮೂಲಗಳು ಹೇಳಿವೆ.

ಒಂದೆರಡು ದಿನ ಬಿಟ್ಟು ಪುನಃ ಈ ಅಧಿಕಾರಿಗಳನ್ನು ವಿಚಾರಣೆಗೆ ಕರೆಯಲಾಗುವುದು ಎಂದೂ ಮೂಲಗಳು ತಿಳಿಸಿವೆ.

ಆರೋಪಿ ಅಧಿಕಾರಿಗಳು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಜಾಮೀನು

ಸಿಸಿಬಿ ಪೊಲೀಸರು ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಬೆನ್ನಲ್ಲೇ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಡೇಟಾ ಎಂಟ್ರಿ ಆಪರೇಟರ್‌ಗಳು, ಎಂಜಿನಿಯರ್‌ಗಳು ಮತ್ತಿತರ ಸಿಬ್ಬಂದಿ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನಿವೇಶನಗಳ ಅಕ್ರಮ ನೋಂದಣಿ ಪ್ರಕರಣದಲ್ಲಿ ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT