ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಕಾರು ಉರುಳಿಬಿದ್ದು, ಶನಿವಾರ ತಡರಾತ್ರಿ ಅಪಘಾತ ಸಂಭ ವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
‘ಮತ್ತಿಕೆರೆಯ ಕಾರ್ತಿಕ್ ಜೈನ್ (23) ಹಾಗೂ ಆದರ್ಶ್ ಕುಮಾರ್ (23) ಮೃತರು. ಇವರಿಬ್ಬರು, ಸ್ನೇಹಿತರ ಜೊತೆ ನಂದಿಬೆಟ್ಟಕ್ಕೆ ಹೋಗಿ ವಾಪಸು ನಗರಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಯಲಹಂಕ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದ ಕಾರ್ತಿಕ್ ಹಾಗೂ ಆದರ್ಶ್, ಮೂವರು ಸ್ನೇಹಿತರ ಜೊತೆ ಶನಿವಾರ ರಾತ್ರಿ ಕಾರಿನಲ್ಲಿ ನಂದಿಬೆಟ್ಟಕ್ಕೆ ಹೋಗಿದ್ದರು. ಅಲ್ಲಿಂದ ತಡರಾತ್ರಿ ನಗರಕ್ಕೆ ವಾಪಸು ಬರುತ್ತಿದ್ದರು.’
‘ಚಾಲಕ ನಿದ್ರೆ ಮಂಪರಿನಲ್ಲಿದ್ದರು. ನಿರ್ಲಕ್ಷ್ಯ ಹಾಗೂ ಅತೀ ವೇಗವಾಗಿ ಕಾರು ಚಲಾಯಿಸಿದ್ದರು. ಪಾಲನಹಳ್ಳಿ ಗೇಟ್ ಬಳಿ ನಿಯಂತ್ರಣ ತಪ್ಪಿದ್ದ ಕಾರು, ರಸ್ತೆ ವಿಭಜಕಕ್ಕೆ ಗುದ್ದಿ ಉರುಳಿಬಿದ್ದಿತ್ತು’ ಎಂದು ಪೊಲೀಸರು ತಿಳಿಸಿದರು.
‘ಅಪಘಾತದಲ್ಲಿ ತೀವ್ರ ಗಾಯಗೊಂಡು ಕಾರ್ತಿಕ್ ಹಾಗೂ ಆದರ್ಶ್ ಮೃತಪಟ್ಟಿದ್ದಾರೆ. ಮೂವರು ಸ್ನೇಹಿತರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.