ಶುಕ್ರವಾರ, ಜುಲೈ 30, 2021
25 °C
ರಾಜಕಾಲುವೆ ಬಳಿ ಮೂತ್ರ ವಿಸರ್ಜಿಸಲು ಹೋದಾಗ ದುರ್ಘಟನೆ

ವಿದ್ಯುತ್ ಹರಿದು ಇಬ್ಬರು ಕಾರ್ಮಿಕರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ನಾಲಾ ರಸ್ತೆಯ ರಾಜಕಾಲುವೆಗೆ ಅಳವಡಿಸಿದ್ದ ತಂತಿ ಬೇಲಿಯಲ್ಲಿ ವಿದ್ಯುತ್ ಹರಿದು ಇಬ್ಬರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.

‘ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬಯಲುಮಚ್ಚಡ ಗ್ರಾಮದ ಕರಿಯಪ್ಪ (35) ಹಾಗೂ ನೀರಮಾನ್ವಿ ಗ್ರಾಮದ ನಾಗರಾಜು (20) ಮೃತರು. ಮಂಗಳವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಹೈಟೆನ್ಶನ್ ತಂತಿ ಇರುವ ಜಾಗದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ಹೇಳಿದರು.

‘ಕಾರ್ಮಿಕ ಕರಿಯಪ್ಪ, ಪತ್ನಿ ಹಾಗೂ ಮಕ್ಕಳ ಜೊತೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಿದ್ದರು. ಅವಿವಾಹಿತರಾದ ನಾಗರಾಜು, ಸ್ನೇಹಿತರ ಜೊತೆ ಕೊಠಡಿ ಮಾಡಿಕೊಂಡು ನೆಲೆಸಿದ್ದರು. ಕೆಲ ವರ್ಷಗಳ ಹಿಂದೆ ಇಬ್ಬರೂ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಬಿಬಿಎಂಪಿ ವತಿಯಿಂದ ನಡೆಯುತ್ತಿದ್ದ ರಾಜಕಾಲುವೆ ಸ್ವಚ್ಛತಾ ಕೆಲಸದಲ್ಲಿ ಕಾರ್ಮಿಕರಾಗಿ ಸೇರಿಕೊಂಡಿದ್ದರು.’

‘ಮೃತ ಕಾರ್ಮಿಕರು ಸ್ನೇಹಿತರ ಜೊತೆಯಲ್ಲೇ ಕೆಲಸದ ಸ್ಥಳಕ್ಕೆ ಒಟ್ಟಾಗಿ ಬರುತ್ತಿದ್ದರು. ಮೇಲ್ವಿಚಾರಕರು ಕಾರ್ಮಿಕರಿಗೆ ಕೆಲಸ ಹಂಚಿಕೆ ಮಾಡುತ್ತಿದ್ದರು. ಕೆಲಸ ಮುಗಿದ ಬಳಿಕ ಸ್ನೇಹಿತರೆಲ್ಲರೂ ಸೇರಿ ಮನೆಯತ್ತ ಹೋಗುತ್ತಿದ್ದರು’ ಎಂದೂ ತಿಳಿಸಿದರು.

ಮೂತ್ರ ವಿಸರ್ಜನೆ ವೇಳೆ ಅವಘಡ: ’ಟಿ. ದಾಸರಹಳ್ಳಿ ಬಳಿಯ ಮಲ್ಲಸಂದ್ರದ ರಾಜಕಾಲುವೆ ಸ್ವಚ್ಛತೆ ಕೆಲಸ ಮುಗಿಸಿದ್ದ ಕರಿಯಪ್ಪ ಹಾಗೂ ನಾಗರಾಜು, ಮನೆಯತ್ತ ಹೊರಟಿದ್ದರು. ನಾಲಾ ರಸ್ತೆಯ ರಾಜಕಾಲುವೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರನ್ನೂ ತಮ್ಮೊಂದಿಗೆ ಕರೆದೊಯ್ಯಲು ಸ್ಥಳಕ್ಕೆ ಹೋಗಿದ್ದರು’ ಎಂದು ಡಿಸಿಪಿ ತಿಳಿಸಿದರು.

‘ಸ್ನೇಹಿತರನ್ನು ಭೇಟಿಯಾಗಿ, ಮನೆಗೆ ಹೋಗೋಣವೆಂದು ಹೇಳಿದ್ದರು. ಸ್ನೇಹಿತರು ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅದೇ ಸಂದರ್ಭದಲ್ಲಿ ಕರಿಯಪ್ಪ, ರಾಜಕಾಲುವೆ ತಂತಿ ಬೇಲಿ ಬಳಿ ಮೂತ್ರ ವಿಸರ್ಜನೆ ಮಾಡಲು ಹೋಗಿದ್ದರು. ಅವಾಗಲೇ ತಂತಿ ಬೇಲಿ ಮುಟ್ಟಿದ್ದರು.’

‘ತಂತಿ ಬೇಲಿಯಲ್ಲಿ ಹರಿಯುತ್ತಿದ್ದ ವಿದ್ಯುತ್ ತಾಗಿ ಕರಿಯಪ್ಪ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ರಕ್ಷಣೆಗೆ ಹೋದ ನಾಗರಾಜು ಅವರಿಗೂ ವಿದ್ಯುತ್ ತಗುಲಿತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಸ್ಥಳದಲ್ಲಿದ್ದ ಸ್ನೇಹಿತರು, ವಿದ್ಯುತ್ ತಾಗಿರುವುದನ್ನು ಗಮನಿಸಿ ದೂರ ಸರಿದು ಪ್ರಾಣ ಉಳಿಸಿಕೊಂಡಿದ್ದಾರೆ’ ಎಂದೂ ಹೇಳಿದರು.

ವಿದ್ಯುತ್ ತಗುಲಿ ಮೃತ ಪ್ರಕರಣಗಳು

l2020ರ ನವೆಂಬರ್ 2ರಂದು ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಅಂದ್ರಹಳ್ಳಿ ಬಳಿಯ ವಾಲ್ಮೀಕಿ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಪಕ್ಕವೇ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಕಾರ್ಮಿಕ ವಿಷ್ಣುಕುಮಾರ್ (25) ಎಂಬುವರು ಮೃತಪಟ್ಟಿದ್ದರು.

l2020ರ ಜೂನ್ 15ರಂದು ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲ್ಸೇತುವೆ ನಿರ್ಮಾಣದ ವೇಳೆ ವಿದ್ಯುತ್ ತಂತಿ ತಗುಲಿ ಒಡಿಶಾದ ಕಾರ್ಮಿಕ ಸುರ್ಜಾದಾಸ್ (35) ಮೃತಪಟ್ಟಿದ್ದರು.

l 2020ರ ಜುಲೈ 20ರಂದು ಕಾವಲ್ ಬೈರಸಂದ್ರ ಕಾವೇರಿನಗರದ ರಸ್ತೆ ಪಕ್ಕದಲ್ಲಿದ್ದ ಹಳೇ ವಿದ್ಯುತ್‌ ಕಂಬ ಮುಟ್ಟಿ ಎಂಟು ವರ್ಷದ ಫಾತಿಮಾ ಮೃತಪಟ್ಟಿದ್ದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು