ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡದ ಚಾವಣಿಯಲ್ಲಿದ್ದ ನೀರಿನ ಟ್ಯಾಂಕ್ ಗೋಡೆ ಸಮೇತ ಕುಸಿದು ರಸ್ತೆಬದಿಯ ಎಗ್‌ರೈಸ್ ಮಳಿಗೆ ಮೇಲೆ ಬಿದ್ದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಳ್ಳುಗಾಡಿಯ ಎಗ್‌ರೈಸ್ ಮಳಿಗೆ ಮಾಲೀಕ ಅರುಳ್ (50) ಹಾಗೂ ಗ್ರಾಹಕ ಕಮಲ್ ಮೃತರು.
ಶಿವಾಜಿನಗರ ಬಸ್ ನಿಲ್ದಾಣ ಬಳಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
'ನಾಲ್ಕು ಅಂತಸ್ತಿನ ಕಟ್ಟಡದ ಕೆಳಭಾಗದ ರಸ್ತೆಬದಿಯಲ್ಲಿ ತಳ್ಳುಗಾಡಿಯಲ್ಲಿ ಎಗ್‌ರೈಸ್ ಮಳಿಗೆ ಇತ್ತು. ಇದೇ ಕಟ್ಟಡದ ಚಾವಣಿಯಲ್ಲಿ ಗೋಡೆಗಳನ್ನು ನಿರ್ಮಿಸಿ ನೀರಿನ ಟ್ಯಾಂಕ್ ಇರಿಸಲಾಗಿತ್ತು. ಈ ಟ್ಯಾಂಕ್ ಬುಧವಾರ ನೀರು ಭರ್ತಿ ಆಗಿತ್ತು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
'ಬುಧವಾರ ರಾತ್ರಿ ಏಕಾಏಕಿ ಗೋಡೆ ಸಮೇತ ಟ್ಯಾಂಕ್ ಕುಸಿದು ರಸ್ತೆಯಲ್ಲಿದ್ದ ತಳ್ಳುಗಾಡಿ ಮೇಲೆ ಬಿದ್ದಿತು. ದೊಡ್ಡದಾದ ಶಬ್ದ ಬಂತು. ರಕ್ಷಣೆಗೆ ಹೋದಾಗ, ಎಲ್ಲೆಂದರಲ್ಲಿ ನೀರು ಇತ್ತು. ಅವಶೇಷಗಳಡಿ ಜನ ಸಿಲುಕಿದ್ದರು' ಎಂದರು.
'ಸ್ಥಳದಲ್ಲಿಯೇ ಇಬ್ಬರು ಮೃತಟ್ಟರು. ಉಳಿದವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು' ಎಂದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, 'ಅವಘಡದ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನೀರಿನ ಟ್ಯಾಂಕ್ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ್ದರಿಂದ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ' ಎಂದರು.