ನೇಣು ಹಾಕಿಕೊಂಡು ಸೆಕ್ಯುರಿಟಿ ಗಾರ್ಡ್ ಆತ್ಮಹತ್ಯೆ

7

ನೇಣು ಹಾಕಿಕೊಂಡು ಸೆಕ್ಯುರಿಟಿ ಗಾರ್ಡ್ ಆತ್ಮಹತ್ಯೆ

Published:
Updated:

ಬೆಂಗಳೂರು: ಮಿಲ್ಲರ್ಸ್ ರಸ್ತೆಯ ‘ಕ್ಲಬ್ ಮಹೇಂದ್ರ’ ಕಟ್ಟಡದ ಆವರಣದಲ್ಲಿ ಸೆಕ್ಯುರಿಟಿ ಗಾರ್ಡ್ ಮಹಮದ್ ಸಾಜನ್ ಅಲಿ (35) ಅವರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

10 ವರ್ಷಗಳಿಂದ ಆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಅಲಿ, ನಾಲ್ಕನೇ ಮಹಡಿಯ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದರು. ಕಟ್ಟಡದ ಪಕ್ಕದಲ್ಲೇ ಬೃಹತ್ ಅರಳಿ ಮರವಿದ್ದು, ಅದರ ಕೊಂಬೆಗಳು ಮಹಡಿಗೆ ಚಾಚಿಕೊಂಡಿವೆ.

ರಾತ್ರಿ ಕೊಂಬೆಗೆ ಪಂಚೆ ಕಟ್ಟಿರುವ ಅಲಿ, ಬಳಿಕ ಕುತ್ತಿಗೆ ಬಿಗಿದುಕೊಂಡು ಮಹಡಿಯಿಂದ ಹಾರಿದ್ದಾರೆ. ದೇಹ ತುಂಬ ಎತ್ತರದಲ್ಲಿ ನೇತಾಡುತ್ತಿದ್ದರಿಂದ ಬೆಳಿಗ್ಗೆ 10 ಗಂಟೆಯಾದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಆ ನಂತರ ಸ್ಥಳೀಯರೊಬ್ಬರು ನೋಡಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ವಿಧಾನಸೌಧದ ಪೊಲೀಸರು, ಶವವನ್ನು ಕೆಳಗಿಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

‘ಅಲಿ ಅವಿವಾಹಿತ. ಆತನ ಪೋಷಕರು ಅಸ್ಸಾಂನಲ್ಲಿದ್ದಾರೆ. ತಮ್ಮ ಕುಟುಂಬಕ್ಕೆ ಪಡಿತರ ಚೀಟಿ ಸಿಕ್ಕಿಲ್ಲವೆಂದು ಬೇಸರಗೊಂಡಿದ್ದ. ಈ ಸಂಬಂಧ ಅಸ್ಸಾಂನಲ್ಲಿ ಸಂಬಂಧಪಟ್ಟ ಇಲಾಖೆಗಳ ಕಚೇರಿಗೆ ಹೋಗಿಬಂದರೂ ಪ್ರಯೋಜನವಾಗಿರಲಿಲ್ಲ. ಆ ವಿಚಾರವನ್ನು ನಮ್ಮ ಬಳಿ ಹೇಳಿಕೊಂಡಿದ್ದ. ಅದೇ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಮೃತರ ಸ್ನೇಹಿತರು ಹೇಳಿಕೆ ಕೊಟ್ಟಿರುವುದಾಗಿ ವಿಧಾನಸೌಧ ಪೊಲೀಸರು ಹೇಳಿದರು.

ಇನ್ನೊಬ್ಬರು ಆತ್ಮಹತ್ಯೆ: ಕನ್ನಿಂಗ್‌ಹ್ಯಾಂ ರಸ್ತೆಯ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ ನಿಂಗಯ್ಯ (42) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆ ಗಣಿಗನೂರು ಗ್ರಾಮದ ನಿಂಗಯ್ಯ, ಮೂರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದರು.  ಕಟ್ಟಡದ ಹಿಂಭಾಗದ ಶೆಡ್‌ನಲ್ಲೇ ನೆಲೆಸಿದ್ದ ಅವರು, ಶುಕ್ರವಾರ ಬೆಳಗಿನ ಪಾಳಿ ಮುಗಿಸಿಕೊಂಡು ಶೆಡ್‌ಗೆ ತೆರಳಿ ನೇಣು ಹಾಕಿಕೊಂಡಿದ್ದಾರೆ.

ಶನಿವಾರ ಬೆಳಿಗ್ಗೆ ಇನ್ನೊಬ್ಬ ಕಾವಲುಗಾರ ಶಿವಾನಂದ್ ಶೆಡ್‌ಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಅವರ ಕುಟುಂಬ ಸದಸ್ಯರ ಬಗ್ಗೆಯೂ ಮಾಹಿತಿ ಇಲ್ಲ ಎಂದು ಹೈಗ್ರೌಂಡ್ಸ್ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !