ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯತೆಯ ವಸ್ತುಸಂಗ್ರಹಾಲಯ

Last Updated 19 ಜೂನ್ 2019, 19:30 IST
ಅಕ್ಷರ ಗಾತ್ರ

ಚೆಲುವಾಗಿ ಹೆಣೆದ ಬುಟ್ಟಿ. ಅದರ ಮೇಲೆ ಕಸೂತಿಯಿಂದ ಕಂಗಳಿಸುತ್ತಿದ್ದ ತಟ್ಟೆ. ಇದನ್ನು ನೋಡಿದ ಚಿಣ್ಣರು ಪುಳಕಿತಗೊಂಡರು. ಈ ಬುಟ್ಟಿಯನ್ನು ತಯಾರಿಸುವುದು ಹೇಗೆ? ಯಾವುದಕ್ಕೆ ಇದನ್ನು ಉಪಯೋಗಿಸುತ್ತಾರೆ? ಎಂಬ ಪ್ರಶ್ನೆಗಳ ಸುರಿಮಳೆಗೈದರು.

ಐದು ಅಡಿ ಉದ್ದ, ಆರು ಅಡಿ ಅಗಲವಾದ ಈ ತಟ್ಟೆಯಲ್ಲಿ ದೋಸೆ ಇಟ್ಟುಕೊಂಡು ಬುಟ್ಟಿ ಸುತ್ತಲು ಕೂತುಕೊಂಡು ತಿನ್ನುತ್ತಿದ್ದರಂತೆ. ಈ ರೀತಿಯ ನೈಜ ಕಥೆಗಳನ್ನು ಕೇಳಿದ ಮಕ್ಕಳು ಹೊಸ ವಿಷಯಗಳನ್ನು ಕೇಳಿ ತಿಳಿದುಕೊಂಡರು. ಹೆಸರಘಟ್ಟ ಗ್ರಾಮದಲ್ಲಿ ಸ್ಪರ್ಶ ಸಂಸ್ಥೆ ಆರಂಭಿಸಿರುವ 'ನಿಸರ್ಗ ವಸ್ತು ಸಂಗ್ರಹಾಲಯ' ದಲ್ಲಿ ಇರಿಸಿದ್ದ ವಸ್ತುಗಳು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಚಿಣ್ಣರನ್ನು ಆಕರ್ಷಿಸಿದವು.

ಆಫ್ರಿಕಾ ದೇಶದ ಬಣ್ಣದ ಛತ್ರಿ, ನೇಪಾಳದ ಲೋಹಿತಾಶ್ವರ ಮತ್ತು ತಾರಾ ದೇವತೆಗಳ ವಿಗ್ರಹ, ಕಾಂಬೋಡಿಯ ದೇಶದ ರಾಮಾಯಣ ಸನ್ನಿವೇಶದ ಕಂಚಿನ ಮೂರ್ತಿಗಳು, ಗ್ರೀಕ್ ದೇಶದ ವೈನ್ ಸೆಟ್‌, ಸೌದಿ ಅರೇಬಿಯಾದ ಹಡಗು, ಥಾಯ್ಲೆಂಡ್‌ನಲ್ಲಿ ನೃತ್ಯಕ್ಕಾಗಿ ಬಳಸುತ್ತಿದ್ದ ವಸ್ತುಗಳು, ನೈಜೀರಿಯಾದ ಬಸವನಹುಳು ಕಲ್ಲು ಹೀಗೆ ಹತ್ತು ಹಲವು ವಸ್ತುಗಳು ಗಮನಸೆಳೆದವು.

ಇಥಿಯೋಪಿಯಾ ದೇಶದ ಯುದ್ಧದ ಸನ್ನಿವೇಶದ ಚಿತ್ರ ಸೂಜಿಗಲ್ಲಿನಂತೆ ಚಿಣ್ಣರನ್ನು ಸೆಳೆಯಿತು. ಮದ್ದು ಗುಂಡು, ಬಂದೂಕು ಹಿಡಿದು ನೋಡುತ್ತಿರುವ ಸೈನಿಕರು ಒಂದು ಕಡೆಯಾದರೆ, ಒಂದೇ ಕಣ್ಣಿನಲ್ಲಿ ನೋಡುತ್ತಿರುವ ಮತ್ತೊಂದು ಸೈನಿಕರ ಪಡೆಯನ್ನು ಅತ್ಯಂತ ನಾಜೂಕಾಗಿ ಚಿತ್ರಿಸಲಾಗಿದೆ.

ಬೇರೆ ದೇಶಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸುವ ಸಲುವಾಗಿ ಈ ವಸ್ತು ಸಂಗ್ರಹಾಲಯವನ್ನು ನಡೆಸಲಾಗುತ್ತಿದೆ. ವಿದೇಶದ ಜನರ ರೀತಿ ರಿವಾಜು, ಅವರು ಉಪಯೋಗಿಸುವ ವಸ್ತುಗಳು, ಅವರ ಜೀವನ ಶೈಲಿ,ಇವುಗಳನ್ನು ಮಕ್ಕಳಿಗೆ ಭೋದಿಸಲು ಈ ವಸ್ತುಗಳು ಸಹಕಾರಿಯಾಗುತ್ತವೆ. ಅವರ ಸಂಸ್ಕೃತಿ, ಧರ್ಮ ಆಚರಣೆಗಳನ್ನು ಮಕ್ಕಳಿಗೆ ಮಕ್ಕಳಿಗೆ ತಲುಪಿಸಿದರೆ ಅವರಲ್ಲಿ ಜ್ಞಾನ
ವಿಕಾಸವಾಗುತ್ತದೆ ಎನ್ನುತ್ತಾರೆ ವಸ್ತು ಸಂಗ್ರಹಾಲಯದ ರೂವಾರಿ ಪದ್ಮಿನಿ.

‘ಮಕ್ಕಳ ಬಗ್ಗೆ ಅಧ್ಯಯನ ಮಾಡಲು 84 ದೇಶಗಳಿಗೆ ಪ್ರವಾಸ ಮಾಡಿದ್ದೆ. ಆಗ ಆ ದೇಶಗಳ ಅಪರೂಪದ ವಸ್ತುಗಳನ್ನು ಸಂಗ್ರಹಿಸುತ್ತಿದ್ದೆ. ಅವುಗಳು ಮನೆಯಲ್ಲಿ ಇದ್ದರೆ ಯಾವ ಪ್ರಯೋಜನವೂ ಅಗಲಾರದು. ಮಕ್ಕಳಿಗೆ ಇದನ್ನು ತಲುಪಿಸುವ ಸಲುವಾಗಿ ಸ್ಪರ್ಶ ಸಂಸ್ಥೆಯ ಜೊತೆ ಕೈ ಜೋಡಿಸಿ ವಸ್ತು ಸಂಗ್ರಹಾಲಯ ಮಾಡಿದೆ. ಮಕ್ಕಳಿಗೆ ಇದು ತಲುಪಬೇಕು’ ಎನ್ನುವ ಆಶಯವನ್ನು ಅವರು ವ್ಯಕ್ತಪಡಿಸಿದರು.

ಈ ವಸ್ತು ಸಂಗ್ರಹಾಲಯಕ್ಕೆ ಶಾಲಾ ಮಕ್ಕಳ ಭೇಟಿಗೆ ಮುಕ್ತ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT