ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಗೀತಕ್ಕೆ ಹೆಣ್ಣಿನ ಶ್ರುತಿ–ಲಯ

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ಯಾರು ಕೃಷಿ ಮಾಡಿ ಕೃಷನಾಗುವನೋ ಅವನು ಕೃಷಿಕ – ಅಂತ ಭಾಷಣಕಾರರೋರ್ವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಪರ ವಿರೋಧ ಅನಿಸಿಕೆಗಳು ಏನಿದ್ದರೂ ಇವತ್ತಿನ ಪರಿಸ್ಥಿತಿ ನೋಡುವಾಗ ಮಾತ್ರ ಈ ವಿಚಾರವನ್ನು ಅಲ್ಲಗಳೆಯುವ ಹಾಗಿಲ್ಲ.

ಈ ಹಿಂದೆ ಕೃಷಿ ಎಂದರೆ ಬದುಕಿನ ಮೂಲ ಸೆಲೆಯಾಗಿತ್ತು. ಭೂಮಾಲಿಕನಿಗೆ ಸಮಾಜದಲ್ಲಿ ಅಪಾರ ಮನ್ನಣೆಯಿತ್ತು. ಸಾಕಷ್ಟು ಆಸ್ತಿವಂತರಿಗೆ ತಮ್ಮ ಮಗಳನ್ನು ಧಾರೆಯೆರೆದು ಕೊಡಲು ಹೆಣ್ಣನ್ನು ಹೆತ್ತವರು ತಾ ಮುಂದು, ತಾ ಮುಂದು ಎಂದು ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ಜಮೀನುದಾರರ ಮನೆಗೆ ಸೊಸೆಯಾಗಿ ಮಗಳು ಹೋದಳೆಂದು ಗತ್ತಿನಿಂದ ಬೀಗುತ್ತಿದ್ದರು. ಹಾಗಾಗಿ ಆಗೆಲ್ಲ ಸರ್ಕಾರಿ ನೌಕರಿ ಅಥವಾ ಇತರ ನೌಕರಿಗಳಲ್ಲಿರುವವರಿಗೆ ತಮ್ಮ ಮಗಳನ್ನು ಕೊಡಬೇಕೆಂಬ ಯಾವ ಹುಚ್ಚು ಆಸೆಯೂ ಹೆತ್ತವರಿಗೆ ಇರಲಿಲ್ಲ.

ಯಾಕೆಂದರೆ, ಸರ್ಕಾರಿ ನೌಕರರು ಯಾರದೊ ಕೈ ಕೆಳಗೆ ದುಡಿಯಬೇಕು, ಇನ್ನೊಬ್ಬರಿಂದ ಬರುವ ಹಣಕ್ಕೆ ಕೈ ಚಾಚಬೇಕು, ಇವೆಲ್ಲಾ ಉಸಾಬರಿ ಬೇಡ, ನಮ್ಮದು ಯಾವೊತ್ತು ಕೊಡುವ ಕೈಗಳು ಆಗಿರಬೇಕೇ ವಿನಾ ಚಾಚುವ ಕೈಗಳು ಆಗಿರಬಾರದೆಂಬ ಧೋರಣೆಯಿಂದ ತಮ್ಮ ಮಗಳಿಗೆ ಕೃಷಿ ಕುಟುಂಬದ ನೆಂಟಸ್ತಿಕೆಯನ್ನು ಹುಡುಕಿ ಹೊಂದಿಸಿ ಜೋಡಿಸುತ್ತಿದ್ದರು.

ಬೆಳ್ಳಂಬೆಳಗ್ಗೇ ಎಷ್ಟೊಂದು ಆಳುಗಳು ದುಡಿಯೋದಿಕ್ಕೆ? ಕೆಲಸಗಾರರಿಗೆ ಕೊರತೆಯೇ ಇರಲಿಲ್ಲ. ಸಂಬಳಕ್ಕಾಗಿ ಅವರು ಚೌಕಾಶಿ ಮಾಡಿದವರೂ ಅಲ್ಲ. ಮನೆಯೊಡತಿ ಎರಡು ಹೊತ್ತು ಅಡುಗೆ ಬೇಯಿಸಿ ಅವರಿಗೆ ಹೊಟ್ಟೆ ತುಂಬಾ ಅನ್ನ ಕೊಟ್ಟರಷ್ಟೇ ಮುಗಿಯಿತು. ಕೆಲಸಗಾರರಿಗೂ ಅಷ್ಟೇ, ಹೊಟ್ಟೆ ತುಂಬಿದ ಮೇಲೆ ಬೇರೆ ಚಿಂತೆ ಇರಲಿಲ್ಲ. ಅತಿಯಾದ ರೊಕ್ಕದ ವ್ಯಾಮೋಹ ಇರಲಿಲ್ಲ.

ದಿನವಿಡೀ ದುಡಿತ, ಬೆವರಿಳಿಸಿ ದಿನವಿಡೀ ದುಡಿದರೂ ಅವರಿಗೆ ಸಿಗುವ ಸಂಬಳ ತೀರಾ ಅತ್ಯಲ್ಪ. ಆದರೂ ಕೊರಗಿಲ್ಲ. ಕೊರಗಿದ್ದರೂ ತೋರಿಸಿಕೊಳ್ಳುವ ಹಾಗಿರಲಿಲ್ಲ. ಶಾಲೆಗೆ ಹೋಗುವ ಮಕ್ಕಳ ಬಟ್ಟೆ, ಫೀಸ್‌ ನೋಡಿಕೊಂಡರಷ್ಟೇ ಮುಗಿಯಿತು. ಹುಷಾರು ತಪ್ಪಿದಾಗ ಮಾತ್ರ ದುಡಿದ ಹಣಕ್ಕೆ ಓಡಿ ಬರುತ್ತಿದ್ದರು.

ಪೇಟೆ ಪಟ್ಟಣದ ಯಾವ ಗೌಜಿ ಗದ್ದಲಗಳು ಹಳ್ಳಿಯ ಮನಸುಗಳನ್ನು ತಾಕುತ್ತಿರಲಿಲ್ಲ. ಆಗಿನ ಜನರು ಅದೆಷ್ಟು ಮುಗ್ಧರು ಅಂತ ಈಗ ಅನ್ನಿಸತೊಡಗಿದೆ. ತಮಗೆ ದಕ್ಕಬೇಕಾದ ಕನಿಷ್ಠ ವೇತನದ ಪರಿಜ್ಞಾನವೂ ಅವರಲ್ಲಿರಲಿಲ್ಲ. ಕೆಲಸಕ್ಕೊಂದು ತಾವು ಸಿಗಬೇಕಿತ್ತು. ಆ ಮೂಲಕ ಹೊಟ್ಟೆಗೆ, ಬಟ್ಟೆಗೆ, ಸೂರಿಗೆ ಹೊಂದಿಕೆಯಾದರಷ್ಟೆ ಅವರ ತೃಪ್ತಿ ಮುಗಿದು ಬಿಡುತ್ತಿತ್ತು.

ಬದಲಾದ ಕಾಲ ಎಷ್ಟೊಂದು ಬದಲಾವಣೆಗಳನ್ನು ತಂದಿದೆ. ಕೆಲವು ವಿಚಾರಗಳಲ್ಲಿ ಬದಲಾವಣೆ ಒಳ್ಳೆಯದೆ. ‘ಬಂದೇ ಬರುತಾವ ಕಾಲ’ ಅಂತ ನಮ್ಮ ಹಿರಿಯರು ಸುಮ್ಮನೆ ಮಾತು ಜೋಡಿಸಲಿಲ್ಲ. ಕಾಲ ಕೂಡಿ ಬಂದಾಗ, ಎಲ್ಲವೂ ತಿರುವು ಮುರುವು ಆಗುತ್ತದೆ ಎಂಬುದು ಇವತ್ತಿನ ಪ್ರಸ್ತುತ ವಿಷಯದಲ್ಲಂತೂ ಅಕ್ಷರಶಃ ಸತ್ಯ. ದಿನವಿಡೀ ದುಡಿದು ಕಾಸಿಲ್ಲದೆ ಒದ್ದಾಡುವ ಪರಿಸ್ಥಿತಿಗೆ ಯಾರೂ ತಯಾರಿಲ್ಲ. ಎಲ್ಲಾ ವಿದ್ಯಾವಂತರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.

ಆದರೆ ತಮ್ಮದೇ ಜಾಗದಲ್ಲಿ ಕೈ–ಕಾಲು ಕೆಸರು ಮಾಡಿಕೊಂಡು ದುಡಿಯುವ ಆಸಕ್ತಿ ಇವತ್ತು ಯಾರಿಗೂ ಇಲ್ಲ. ಇದು ಬಹು ದೊಡ್ಡ ಅಪಮಾನವೆಂದೇ ಪರಿಭಾವಿಸುತ್ತಾರೆ. ಎಲ್ಲರೂ ಹಳ್ಳಿಯ ಬೇಲಿಯಾಚೆ ಜಿಗಿದು ನಗರದ ಸ್ವಚ್ಛಂದತೆಗೆ ಮಾರು ಹೋಗುತ್ತಿದ್ದಾರೆ. ತಮ್ಮ ಮೂಲ ಬೇರುಗಳನ್ನು ಮರೆಯುತ್ತಿದ್ದಾರೆ. ಇದು ಅಪಾಯಕಾರಿ ಸಂಗತಿ.

ಇಂತಹ ಹೊತ್ತಲ್ಲೇ ಕೃಷಿ ಜೀವನದಲ್ಲೊಂದು ಕಂಪನ ಉಂಟಾಗಿ ಹಳ್ಳಿಯ ಜನಜೀವನದಲ್ಲಿ ಬಿರುಗಾಳಿಯ ಅಲೆ ಎದ್ದದ್ದು. ಪಟ್ಟಣ ಸೇರಿ ಸೂಟು ಬೂಟು ಹಾಕಿಕೊಂಡು ಅಪರೂಪಕ್ಕೊಮ್ಮೆ ಹಳ್ಳಿಗೆ ಬಂದರಷ್ಟೆ ಇವತ್ತು ಅವನಿಗೆ ರಾಜ್ಯ ಮರ್ಯಾದೆ ಎಂಬುದು ಸತ್ಯ. ಇವತ್ತು ಹಳ್ಳಿಯ ಕೃಷಿಹುಡುಗನನ್ನು ಮಾತನಾಡಿಸುವವರೇ ಇಲ್ಲ. ಅವನಿಗೆ ಹೆಣ್ಣು ಕೊಡಲು ಹಾತೊರೆಯುವವರು ತೀರಾ ಕಡಿಮೆಯೇ ಅನ್ನುವಂತ ಸ್ಥಿತಿಗೆ ನಾವು ಇವತ್ತು ಬಂದು ಮುಟ್ಟಿದ್ದೇವೆ.

ಯಾಕೆಂದರೆ ಕೆಲಸಗಾರರು ಸಿಗುತ್ತಿಲ್ಲ. ಸಿಕ್ಕ ಕೆಲಸಗಾರರ ಸಂಬಳ ಸರ್ಕಾರಿ ನೌಕರಿಯಲ್ಲಿರುವ ನೌಕರನಿಗಿಂತ ಕಡಿಮೆಯೇನಿಲ್ಲ ಎಂಬಂತಿದೆ. ಕೃಷಿ ಉತ್ಪನ್ನಗಳ ಬೆಲೆ ಪಾತಳ ಮುಟ್ಟಿದರೂ, ಕೂಲಿ ಕಾರ್ಮಿಕರ ವೇತನ ಮುಗಿಲು ಮುಟ್ಟಿದೆ. ಇವೆರಡರ ಅಸಮತೋಲನದಿಂದ ಕೃಷಿ ಜೀವನ ಕಂಗೆಟ್ಟಿದೆ. ಸಾಸಿವೆ ಡಬ್ಬಿ, ಕೊತ್ತಂಬರಿ ಡಬ್ಬಿಗಳಲ್ಲಿ ಗಟ್ಟಿಗೊಳ್ಳುತ್ತಿದ್ದ ಹೆಂಗಳೆಯರ ಆದಾಯದ ಆಧಾರಕ್ಕೆ ಬಲವಾದ ಹೊಡೆತ ಬೀಳುತ್ತಿದೆ.

ಬಂದ ಉಳಿತಾಯವನ್ನೆಲ್ಲಾ ಕೆಲಸಗಾರರಿಗೆ ಕೊಟ್ಟು ಬರಿಗೈ ದಾಸನಾಗುವ ಭೂ ಒಡೆಯನ ಮೇಲೆ ಯಾರಿಗೂ ಕನಿಕರ ಹುಟ್ಟದೇ ಇರಲಿಕ್ಕೆ ಸಾಧ್ಯ ಇಲ್ಲ. ಇರುವ ಆಸ್ತಿಯನ್ನ ನೋಡಿಕೊಳ್ಳದಿದ್ದರೆ ವಿಧಿಯಿಲ್ಲ. ದಮ್ಮಯ್ಯ ಹಾಕಿದರೂ ಕೆಲಸಗಾರರು ಸಿಗುತ್ತಿಲ್ಲ. ಅವರೆಲ್ಲರೂ ಈಗ ಬೇಡಿಕೆಯ ಸಾಲಿನಲ್ಲಿ ನಿಂತಿದ್ದಾರೆ. ಒತ್ತಾಯ ಮಾಡಿ ಅವರುಗಳಿಗೆ ರಾಜ ಮರ್ಯಾದೆ ಕೊಟ್ಟು ಬರ ಮಾಡಿಕೊಳ್ಳಬೇಕು. ನಸುಕಿನಲ್ಲಿಯೇ ಅವರ ಮನೆ ಬಾಗಿಲಿನ ಮುಂದೆ ಝಂಡಾ ಹೂಡಬೇಕು.

ತುಸು ತಡವಾದರೂ ಮತ್ಯಾರದೋ ಮನೆಯಿಂದ ಅವರಿಗೆ ಬುಲಾವು ಬಂದಿರುತ್ತದೆ. ಇವತ್ತು ಕಾಲ್ನಡಿಗೆ ಮರೆವಿಗೆ ಸಂದಿರುವಾಗ, ಅವರು ಕೂಲಿ ಕೆಲಸಕ್ಕೆ ಬರುವುದು ಅಂದ ಮಾತ್ರಕ್ಕೆ ನಡೆದು ಬರುವ ಸಂಗತಿಯೇ ಇಲ್ಲ.

ಜೀಪೋ ಕಾರೋ ಬೈಕೋ – ಯಾವುದೋ ಒಂದು ವಾಹನದಲ್ಲಿ ಅವರನ್ನು ಕರೆತರಬೇಕು. ಜೊತೆಕೆಲಸಗಾರರೂ ಸಾಕಷ್ಟಿರಬೇಕು. ಅದೂ ನಿಗದಿತ ವೇಳಾಪಟ್ಟಿಗೆ ಅನುಸಾರವಾಗಿ ಮಾತ್ರ ಅವರು ಕೆಲಸ ಮಾಡಲು ಸಿದ್ಧ. ಇಷ್ಟು ನಿಬಂಧನೆಗೆ ಒಪ್ಪಿದರೆ ಮಾತ್ರ ಅವರು ಕೆಲಸಕ್ಕೆ ರೆಡಿ. ನಮಗೆ ಬೇರೆ ವಿಧಿ ಇಲ್ಲ.

ಇನ್ನು ಮನೆಯೊಡತಿಯ ಕಷ್ಟ ಸಾಮಾನ್ಯವೇನಲ್ಲ. ಎಲ್ಲದರ ಹೊಡೆತ ಬೀಳುವುದು ಮೊದಲಿಗೆ ಹೆಣ್ಣುಮಕ್ಕಳ ಮೇಲೆಯೇ. ನಾಳೆ ಕೆಲಸಕ್ಕೆ ಇಂತಿಷ್ಟು ಜನ ಬರುತ್ತಾರೆ ಅಂತ ನಿಘಂಟು ಹೇಳಿದ್ದಕ್ಕೆ, ಅನ್ನ, ಸಾಂಬಾರು, ಬೆಳಗ್ಗಿನ ತಿಂಡಿ ಎಲ್ಲಾ ರಾಶಿ ಮಾಡಿಟ್ಟರೂ ಕೆಲಸಗಾರರ ಸುಳಿವೇ ಇಲ್ಲ. ಹಾಗಂತ ಮಾರನೆ ದಿನ ಅದನ್ನು ಬಿಸಿಮಾಡಿ ಕೊಡುವ ಹಾಗಿಲ್ಲ.

ಹಾಗಾಗಿ ಎಷ್ಟೋ ಭಾರಿ ಅವಳ ಶ್ರಮವೆಲ್ಲ ನಿರರ್ಥಕವಾಗಿಬಿಡುತ್ತದೆ. ಇನ್ನು ಯಾಕೆ ಬರಲಿಲ್ಲ ಅಂತ ಗದರುವ ಹಾಗಿಲ್ಲ. ನಾಳೆ ಮತ್ತೆ ನಮ್ಮ ಮನೆ ಬಾಗಿಲಿಗೆ ಅವರು ಬರಬೇಕೆಂದರೆ ಯಾವ ಸಮಯದಲ್ಲೂ ನಾವು ತಾಳ್ಮೆ ಕಳೆದುಕೊಳ್ಳುವಂತಿಲ್ಲ. ಪ್ರತಿನಿತ್ಯ ಅವರ ಮನೆಯ ಮುಂದೆ ಸೊಂಟ ಬಗ್ಗಿಸಿ ನಿಲ್ಲಲೇ ಬೇಕು. ಕೆಲಸಗಾರರ ಅಭಾವದಿಂದಾಗಿ ಮನೆ, ಮಕ್ಕಳು, ಹಟ್ಟಿ, ದನ–ಕರು, ತೋಟ – ಇವುಗಳೆಲ್ಲದರ ಕೆಲಸದ ಜವಾಬ್ದಾರಿ ಸಹಜವಾಗಿ ಹೆಣ್ಣುಮಕ್ಕಳ ಮೇಲೆ ಬೀಳುತ್ತದೆ.

ಆಕೆ ಪುರುಸೊತ್ತಿಲ್ಲದೆ ದುಡಿಯಬೇಕಾಗುತ್ತದೆ. ಅಷ್ಟಕ್ಕೂ ಅವಳಿಗೆ ಯಾವ ವೇತನವನ್ನು ಯಾರೂ ಕೊಡಲು ಸಿದ್ಧರಿಲ್ಲ. ಒಂದೊಮ್ಮೆ ನನ್ನ ಗೆಳತಿಯೊಬ್ಬಳು ಹೇಳಿದ ಮಾತು ಇನ್ನೂ ಹಸಿಯಾಗಿದೆ.

ಕೆಲವು ವರ್ಷಗಳ ಹಿಂದೆಯಷ್ಟೇ ಬಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳ ಮೂಲಕ ಹೆಣ್ಣುಮಕ್ಕಳಿಗೊಂದು ಒಂದು ಗಂಟೆ ಅವಧಿಯವರೆಗಾದರೂ ಹೊರಗೆ ಹೋಗಿ ಕಲೆಯುವ ಯೋಗ ಒದಗಿ ಬಂದಿತ್ತು; ಮತ್ತು ಆ ಮೂಲಕ ಸಣ್ಣ ಮಟ್ಟಿನ ಉಳಿತಾಯ ಅವಳ ಹೆಸರಿನಲ್ಲೇ ಜಮೆ ಆಗುವ ಖುಷಿಗೆ ಒಂದು ರೀತಿಯ ಸಂತೋಷ ಅನುಭವಿಸಿದ್ದು ಕೂಡ ಸುಳ್ಳಲ್ಲ.

ತದನಂತರ ಹಣ ಕುಟುಂಬ ಖರ್ಚಿಗೆ ವಿನಿಯೋಗವಾಗುತ್ತಿದ್ದದ್ದು ಬೇರೆ ಮಾತು. ಉಳಿತಾಯವೆಂದರೆ ದೊಡ್ಡ ಮೊತ್ತದ ಹಣ ಅಂತ ಅಂದು ಕೊಂಡರೆ ಅದು ನಮ್ಮ ತಪ್ಪು ಕಲ್ಪನೆಯಾದೀತು. ವಾರಕ್ಕೆ 20 ರೂಪಾಯಿ. ನಮ್ಮ ದುಡಿತಕ್ಕೆ ವಾರಕ್ಕೆ ಉಳಿತಾಯ ಕೇವಲ ಇಷ್ಟೇಯೇ ಅಂತ ಕೇಳಿದ್ದಕ್ಕೆ, ಇನ್ನು ನೀನು ಊಟ ಮಾಡೋದಿಲ್ಲವಾ – ಅಂತ ಅವಳತ್ತೆ ಕೇಳಿದ್ದರಂತೆ! ಯಾರದೋ ಮನೆಯ ಮಗಳು ಬಂದ ಮನೆಗೆ ಮಗಳಂತೂ ಆಗಲಾರಳು. ಆದರೆ ಸೊಸೆಯೂ ಆಗಲಾರಳಲ್ಲ – ಎಂಬ ಕಟು ಸತ್ಯ ಅರಗಿಸಿಕೊಳ್ಳಲಾಗದ್ದು.

ಹಾಗೇ ನೋಡಿದರೆ ದುಪ್ಪಟ್ಟು ಕೆಲಸ ಹೆಣ್ಣುಮಕ್ಕಳದ್ದೆ. ಗಂಡಸರು ಒಂದಷ್ಟು ದಿನ ಕೆಲಸ ಮಾಡಿ ಹೆಂಗಸರಿಗೆ ಆ ಕೆಲಸದ ಮೇಲೆ ಹಿಡಿತ ಸಿಕ್ಕಿದ ಮೇಲೆ ಗಂಡಸರು ಪ್ಯಾಂಟು–ಶರ್ಟು ಕೋಸಿ ಆ ಕೆಲಸ, ಈ ಕೆಲಸ ಅಂತ ಗಂಭೀರ ಮುಖಮುದ್ರೆಯಲ್ಲಿ ಹೊರಟು ಬಿಟ್ಟರೆ, ಬಾಕಿ ಉಳಿದ ಎಲ್ಲಾ ಕೆಲಸಗಳ ನಿರ್ವಹಣೆ ಅವಳ ಮೇಲೆ. ಅವಳಿಗೆ ನೆಮ್ಮದಿಯಲ್ಲೊಂದು ಮದುವೆಯಿಲ್ಲ, ನಾಮಕರಣವಿಲ್ಲ.

ಎಲ್ಲಿಗೆ ಹೋದರೂ ಗಡಿಬಿಡಿಯಲ್ಲಿ ಮನೆಗೆ ಬರಬೇಕು. ಸಂಜೆಗೆ ಮುಂದೆ ಡೈರಿಗೆ ಹಾಲು ಹಾಕಬೇಕು. ಇವೆಲ್ಲ ಹೊಣೆ ಅವಳ ಮೇಲೆ ಬಿದ್ದಿರುವಾಗ ಅವಳ ಮೊಗದ ನಗು ಮಾಸಿರುತ್ತದೆ. ಕೆನ್ನೆಯ ಹೊಳಪು ಕುಂದಿರುತ್ತದೆ. ಅಕಾಲಿಕವಾಗಿ ವೃದ್ಧಾಪ್ಯ ಆವರಿಸಿಬಿಟ್ಟಿರುತ್ತದೆ.

ಇನ್ನು ಹಳ್ಳಿಮನೆಯಲ್ಲಿ ತನ್ನ ಆಸಕ್ತಿಗಳನ್ನು ಮುಂದುವರಿಸಿಕೊಂಡು ಹೋಗುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಸಮಯದ ಅಭಾವವೂ ಮನೋಭಾವದ ಕೊರತೆಯೂ ಅಡ್ಡಿ ಬರುತ್ತದೆ. ಕೂಡು ಕುಟುಂಬದ ಹಳ್ಳಿಮನೆಗಳಲ್ಲಿ ಇಂತಹ ಆಸಕ್ತಿಗಳನ್ನು ಆರದಂತೆ ಕಾಯ್ದಿಟ್ಟುಕೊಳ್ಳುವುದು ಒಂದು ದೊಡ್ಡ ಪವಾಡವೇ.

ಬರವಣಿಗೆಯಲ್ಲಿ ಆಸಕ್ತಿಯಿರುವ ಗೆಳತಿಯೊಬ್ಬಳು ತನ್ನ ಬಿಡುವಿನ ವೇಳೆಯಲ್ಲಿ ತನ್ನ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿದ್ದೇ ಮಹಾ ಅಪರಾಧವಾಗಿ ಬಿಟ್ಟಿತ್ತು! ತದನಂತರ ಬಂದವರು ಹೋದವರ ಎದುರು ಅವಳಿಗೆ ಬರವಣಿಗೆ ಬಿಟ್ಟು ಬೇರೇನು ಕೆಲಸ ಇಲ್ಲ, ರಾಶಿ ರಾಶಿ ಕೆಲಸ ಬಿದ್ದಿರುವಾಗ ಬರವಣಿಗೆಯಿಂದ ಎಷ್ಟು ಲಾಭ ಇದೆ ಅಂತ ಗೊಣಗಿಕೊಳ್ಳುವುದ್ದನ್ನು ಕೇಳಿ ಅವಳು ಬರವಣಿಗೆಗೆ ಇತಿಶ್ರೀ ಹಾಕಿಬಿಟ್ಟಿದ್ದಳು.

ಮತ್ತೊಬ್ಬ ಗೆಳತಿಯದ್ದೂ ಇದೇ ಕತೆ. ಎಂ.ಎ., ಬಿ.ಎಡ್. ಮುಗಿಸಿದ ಆಕೆಯನ್ನು ಪಕ್ಕದ ಶಾಲೆಯವರು ಪಾಠ ಮಾಡಲು ಕರೆದದ್ದೇ ತಡ, ಇವಳು ಖುಷಿಯಿಂದ ಬೀಗಿಬಿಟ್ಟಿದ್ದಳು. ಅದೇ ಖುಷಿಯಲ್ಲಿ ಮನೆಮಂದಿಯೊಂದಿಗೆ ಹೇಳಿದಾಗ; ಅದೆಲ್ಲಾ ಬೇಕಿಲ್ಲಾ, ಅಲ್ಲಿ ದುಡಿಯೋದಕ್ಕಿಂತ, ಇಲ್ಲೇ ದುಡಿದರೇ ಅದಕ್ಕಿಂತ ಹೆಚ್ಚು ಹಣ ಗಳಿಸಬಹುದು ಎಂದಿದ್ದರಂತೆ.

ಅದು ಸರಿ, ಹಾಗಿದ್ದರೆ ಅಷ್ಟು ಹಣವಾದರೂ ನನಗೆ ಕೊಡಿ ಅಂತ ಧೈರ್ಯ ವಹಿಸಿ ಕೇಳಿದ್ದಕ್ಕೆ ದೊಡ್ಡ ಕುರುಕ್ಷೇತ್ರವೇ ಆಗಿ ‘ಬಂದ ಹೆಣ್ಣುಮಕ್ಕಳು ಹಾಗಿರಬೇಕು, ಹೀಗಿರಬೇಕು, ತನ್ನ ಮನೆಯಂತ ಪ್ರೀತಿ ಇರಬೇಕು...’ ಅಂತೆಲ್ಲಾ ದೊಡ್ಡ ಉಪದೇಶವನ್ನೇ ಕೊಟ್ಟು, ಈಗ ಕೆಲಸ ಮಾಡಿದರೆ ಮುಂದೆ ಇದೆಲ್ಲಾ ನಿಮ್ಮದೇ ತಾನೇ? ಅಂತ ಭಾವನಾತ್ಮಕ ಲೇಪ ಹೊದಿಸಿ ಆ ಹೊಸ ಕೆಲಸದ ಉತ್ಸಾಹಕ್ಕೆ ಬಿಸಿನೀರು ಹಾಕಿ ಬಿಟ್ಟಿದ್ದರು. ಎಲ್ಲ ಮರೆತಂತೆ ನಮ್ಮ ಹೆಣ್ಣುಮಕ್ಕಳು ಹಳೇ ಕೆಲಸವನ್ನೇ ಹೊಸತೆಂಬಂತೆ ಮಾಡತೊಡಗುತ್ತಾರೆ.

ಹೌದು, ನಮ್ಮ ಕೃಷಿಕ ಮಹಿಳೆಯರು ಇದೆಲ್ಲಾ ನಮ್ಮದೇ ಅಂತ ಕೊನೆಯ ತನಕ ದುಡಿಯುತ್ತಲೇ ಇರುತ್ತಾಳೆ. ಅಸಲಿಗೆ ಯಾವುದೂ ಯಾವೊತ್ತಿಗೂ ಅವಳದ್ದು ಆಗಲಿಕ್ಕೆ ಸಾಧ್ಯವಿಲ್ಲವೆಂಬುದು ಅಷ್ಟೇ ಕಠೋರ ಸತ್ಯ. ಹಳ್ಳಿಯ ಮಹಿಳೆಗೆ ಕುಳಿತು ಬರೆಯುವುದಕ್ಕೆ ಅವಕಾಶವಿಲ್ಲವೆಂದ ಮೇಲೆ ಹಾಡಲು ಕುಣಿಯಲು ಸಾಧ್ಯವೇ? ತವರುಮನೆಗೆ ಹೋಗಬೇಕೆಂದರೂ ಮಕ್ಕಳ ಬೇಸಿಗೆರಜೆ ಬರಬೇಕು.

ಮತ್ತೆ ಗಡಿಬಿಡಿಯಲ್ಲಿ ಬರಬೇಕು. ಹೆಚ್ಚು ಕಡಿಮೆ ಹಳ್ಳಿಮನೆಗೆ ಕೊಟ್ಟ ಹುಡುಗಿ ತೆರೆಮರೆಗೆ ಸರಿದು ಬಿಟ್ಟಿರುತ್ತಾಳೆ ಅಥವಾ ತನ್ನ ಓರಗೆಯ ಗೆಳತಿಯರು, ಅಕ್ಕತಂಗಿಯರು ಪೇಟೆಯಿಂದ ಯಾವುದೇ ಜವಾಬ್ದಾರಿಗಳಿಲ್ಲದೇ ಆರಾಮವಾಗಿ ಕಾರಿನಲ್ಲಿ ಝುಂ ಅಂತ ಬರುವಾಗ ಇವಳಿಗೆ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ಜೊತೆಗೆ ಬ್ಯಾಗನ್ನು ಹೆಗಲಿಗೆ ಹೇರಿಕೊಂಡು ರಶ್ಶಿನ ಬಸ್ಸಿನಲ್ಲಿ ಪಡಿಪಾಟಲು ಪಟ್ಟುಕೊಂಡು ಬಂದು ಅವರಿವರು ಹೇಳುವ ಪ್ರಶ್ನೆಗೆ ಉತ್ತರ ಹೇಳುವುದಕ್ಕಿಂತ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿರುವುದೇ ಅವಳಿಗೆ ಹೆಚ್ಚು ಹಿತದಂತೆ ತೋರುತ್ತದೆ.

ಪರಿಸ್ಥಿತಿ ಹೀಗಿರುವಾಗ ಹಳ್ಳಿಯ ಹೈದನ ಕೊರಳಿಗೆ ಹೂಮಾಲೆ ಹಾಕಲು ಯಾವ ವಧು ಈಗ ಕಾಯುತ್ತಾ ನಿಂತಿರುತ್ತಾಳೆ? ಹಾಗಿರುತ್ತಾ ದಿನವಿಡೀ ಆಟಕ್ಕುಂಟು, ಲೆಕ್ಕಕ್ಕಿಲ್ಲ – ಅಂತ ದುಡಿಯುತ್ತಾ ಜೀವ ಸವೆಸುವ ಬಹು ದೊಡ್ಡ ಉದಾರ ತ್ಯಾಗಕ್ಕೆ ಯಾವ ಹುಡುಗಿಯರು ಮನ ಮಾಡಿ ಮುಂದಾಗುತ್ತಾರೆ ನೀವೇ ಹೇಳಿ?

ತಿರುಗುವ ಕಾಲಚಕ್ರದಲ್ಲಿ ಬದಲಾವಣೆಗಳು ಸಹಜ. ಶಾಶ್ವತವಲ್ಲದ ಈ ಬದುಕಿನಲ್ಲಿ ಯಾವ ವೃತ್ತಿಯೂ, ಅದರ ಸ್ಥಾನಮಾನಗಳೂ ಸ್ಥಿರವಲ್ಲ. ಹಾಗಿರುವಾಗ ಕೃಷಿ ನಮ್ಮ ಬದುಕಿನ ಮೂಲಧಾತು. ಇಲ್ಲಿ ಸಿಗುವ ನೆಮ್ಮದಿ, ಸಂತೃಪ್ತಿ, ಆರೋಗ್ಯ, ಜೀವನದ ನಿಜವಾದ ಸೌಂದರ್ಯ ಎಲ್ಲಿಯೂ ದೊರಕಲಾರದು.

ಈ ಭಾವ ಅರಿತುಕೊಂಡರೆ, ನಮ್ಮೊಳಗಿನ ಬಾಂಧವ್ಯ ಚೆನ್ನಾಗಿದ್ದರೆ, ಮಹಿಳೆ ಎಲ್ಲದರಲ್ಲೂ ಸಮಾನ ಪಾಲುದಾರಳಾಗಿ ಅವಳಿಗೂ ಒಂದು ಸ್ವತಂತ್ರ ಅಸ್ಮಿತೆ ಮತ್ತು ಅಸ್ತಿತ್ವ ಇದೆ ಅಂತ ಪರಿಗಣಿಸಿ ಗೌರವಿಸಿದರೆ ಕೃಷಿ ಕೂಡ ಖುಷಿ ಕೊಡಬಲ್ಲದು. ನಿರ್ಮಲ ಪರಿಸರದ ನಡುವೆ ನಮ್ಮ ಹೆಣ್ಣುಮಕ್ಕಳೂ ಸಂತೃಪ್ತಿಯ ಜೀವನ ನಡೆಸಬಲ್ಲರು. ಭೂಮಿ ಮತ್ತು ಬದುಕು – ಎರಡೂ ಹಸನಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT