ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಶವವನ್ನು ಫ್ರೀಜರ್‌ನಲ್ಲಿಟ್ಟ ಮಗ

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ತಾಯಿಗೆ ಸಿಗುವ ಪಿಂಚಣಿಯನ್ನು ಪಡೆಯುವ ಸಲುವಾಗಿ, ಆಕೆಯ ಶವವನ್ನು ಮೂರು ವರ್ಷಗಳವರೆಗೆ ರಾಸಾಯನಿಕ ಸಿಂಪಡಿಸಿ ಕಾಪಾಡಿಕೊಂಡು ಬಂದಿರುವ ಆರೋಪಹೊತ್ತ ಮಗನೀಗ ಪೊಲೀಸರ ಅತಿಥಿಯಾಗಿದ್ದಾನೆ.

ಇಲ್ಲಿಯ ಬೆಹಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ‘ಪಿಂಚಣಿ ಪಡೆಯಲು ಹೆಬ್ಬೆರಳಿನ ಗುರುತಿನ ಅವಶ್ಯಕತೆ ಇರುವ ಕಾರಣ, ನಿರುದ್ಯೋಗಿ ಮಗ ಶವವನ್ನು ಮಾಂಸ ತುಂಬಿಡುವ ಫ್ರೀಜರ್‌ನಲ್ಲಿ ಇಟ್ಟಿರುವ ಶಂಕೆ ಇದೆ’ ಎಂದು ಪೊಲೀಸರು ಹೇಳಿದ್ದಾರೆ.

ಬೀನಾ ಮುಜುಮ್‌ದಾರ್‌ ಎಂಬುವವರ ಮಗ ಸುಭಬ್ರತಾ (ಸುಮಾರು 50 ವರ್ಷ) ಈ ಕೃತ್ಯ ಎಸಗಿದವನು. ಬೀನಾ, ಕೇಂದ್ರ ಆಹಾರ ನಿಗಮದಲ್ಲಿ ನೌಕರಿ ಮಾಡುತ್ತಿದ್ದರು. ಇವರಿಗೆ ಪಿಂಚಣಿ ಹಣ ಬರುತ್ತಿತ್ತು.

ಪತ್ರಕರ್ತನೊಬ್ಬ ವಿಶೇಷ ವರದಿ ಮಾಡುವ ಸಂಬಂಧ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಮನೆಯಿಂದ ಕೆಟ್ಟ ರೀತಿಯ ವಾಸನೆ ಬರುತ್ತಿರುವ ಬಗ್ಗೆ ಪತ್ರಕರ್ತನಿಗೆ ಸ್ಥಳೀಯರು ಮಾಹಿತಿ ನೀಡಿದರು. ‘ಮೂರು ವರ್ಷಗಳ ಹಿಂದೆ ಈ ಕುಟುಂಬದ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ನಮಗೆ ತಿಳಿದಿದೆ. ಆದರೆ ಅವರ ಶವಸಂಸ್ಕಾರದ ಬಗ್ಗೆಯಾಗಲೀ, ಇತರ ಮಾಹಿತಿಯಾಗಲೀ ನಮಗೆ ಗೊತ್ತಿಲ್ಲ’ ಎಂದು ಸ್ಥಳೀಯರು ಹೇಳಿದರು.

ನಂತರ ಪತ್ರಕರ್ತ ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲು ಮಾಡಿದ. ಎರಡು ಮಹಡಿಗಳ ಆ ಮನೆಯ ಕೆಳ ಮಹಡಿಯಲ್ಲಿ ಶವವನ್ನು ಇಟ್ಟಿರುವುದು ಪೊಲೀಸರು ತನಿಖೆ ನಡೆಸಿದಾಗ ಕಾಣಿಸಿತು. ‘ಅಲ್ಲಿ ಎರಡು ಫ್ರಿಜ್‌ಗಳು ಇದ್ದವು. ಒಂದರಲ್ಲಿ ಈ ಶವವಿತ್ತು. ಇನ್ನೊಂದು ಖಾಲಿ ಇತ್ತು. ಇನ್ನೊಂದು ಫ್ರಿಜ್‌ ಯಾಕೆ ಇಟ್ಟಿದ್ದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಫ್ರೀಜರ್‌ನಲ್ಲಿ ಇಡಲು ಅನುಕೂಲ ಆಗುವಂತೆ ಮಹಿಳೆಯ ದೇಹವನ್ನು ಕತ್ತರಿಸಲಾಗಿದೆ. ಒಳಗಡೆ ಇರುವ ಭಾಗಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇದು ಮಗನ ಕೃತ್ಯವೇ ಇರಬೇಕು ಎಂದು ಭಾವಿಸಿದ್ದೇವೆ.

ಮಹಿಳೆಯ ಗಂಡನ ಬಗ್ಗೆಯೂ ಸಂಶಯವಿದ್ದು ಅವರನ್ನೂ ವಿಚಾರಿಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT