ಬುಧವಾರ, ಜುಲೈ 28, 2021
21 °C
ಭಕ್ತರ ಸಂಖ್ಯೆ ವಿರಳ: ಪ್ರಸಾದ ಇಲ್ಲ, ಸ್ಯಾನಿಟೈಸರ್–ಮಾಸ್ಕ್ ಕಡ್ಡಾಯ

ಬೆಂಗಳೂರು: ಎರಡೂವರೆ ತಿಂಗಳ ನಂತರ ತೆರೆದ ದೇಗುಲಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ದೇವಸ್ಥಾನಗಳು ತೆರೆದಿದ್ದು, ಎರಡೂವರೆ ತಿಂಗಳುಗಳ ನಂತರ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

ಗವಿಗಂಗಾಧರೇಶ್ವರಸ್ವಾಮಿ ದೇಗುಲದಲ್ಲಿ ಮೊದಲ ದಿನ ವಿಶೇಷ ಪೂಜೆ ನಡೆಯಿತು. ಹಾಲು, ಮೊಸರು, ಪಂಚಾಮೃತದಿಂದ ಶಿವನಿಗೆ ಅಭಿಷೇಕ ಮಾಡಲಾಯಿತು. ಆದರೆ, ದರ್ಶನಕ್ಕೆ ಜನರ ಸಂಖ್ಯೆ ವಿರಳವಾಗಿತ್ತು. ಮಲ್ಲೇಶ್ವರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಮಹಾಲಕ್ಷ್ಮೀ ಲೇಔಟ್‌ನ ಪ್ರಸನ್ನ ವೀರಾಂಜನೇಯಸ್ವಾಮಿ ದೇಗುಲ, ಮಹಾಲಕ್ಷ್ಮಿ ದೇಗುಲ, ಅಯ್ಯಪ್ಪ ಸ್ವಾಮಿ ದೇಗಲ, ಶ್ರೀನಿವಾಸ ದೇಗುಲ, ರಾಜಾಜಿನಗರ ಕೈಲಾಸವೈಕುಂಠ ಕ್ಷೇತ್ರ, ಬನಶಂಕರಿ ದೇವಸ್ಥಾನ ಸೇರಿ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ಪೂಜೆ ಆರಂಭವಾಗಿವೆ. ಪ್ರಸಾದ ವಿನಿಯೋಗ ಮತ್ತು ಅಭಿಷೇಕಕ್ಕೆ ಅವಕಾಶ ನೀಡಿಲ್ಲ. ದೇವರ ದರ್ಶನವನ್ನಷ್ಟೇ ಮಾಡಿ ಹೋಗಬೇಕು ಭಕ್ತರಿಗೆ ತಿಳಿಸಲಾಗುತ್ತಿದೆ.

ದೇವಸ್ಥಾನ ಪ್ರವೇಶಕ್ಕೂ ಮುನ್ನ ಭಕ್ತರಿಗೆ ಸ್ಯಾನಿಟೈಸರ್‌ ನೀಡಲಾಗುತ್ತಿದೆ. ಕೆಲವು ದೇಗುಲಗಳಲ್ಲಿ ಕೈ ತೋರಿದರೆ ಸ್ಯಾನಿಟೈಸರ್ ಹನಿ ಹಾಕುವ ಸ್ವಯಂ ಚಾಲಿತ ಯಂತ್ರ ಅಳವಡಿಸಿದ್ದರೆ, ಕೆಲವು ದೇಗುಲಗಳಲ್ಲಿ ಕಾಲಿನಲ್ಲಿ ಒತ್ತಿದರೆ ಸ್ಯಾನಿಟೈಸರ್ ಹನಿಯುವಂತೆ ಮಾಡಲಾಗಿದೆ. ಇನ್ನೂ ಹಲವಡೆ ಸಿಬ್ಬಂದಿಯೇ ಸ್ಯಾನಿಸೈಸರ್ ವಿತರಿಸುತ್ತಿದ್ದಾರೆ.

ಇದನ್ನೂ ಓದಿ: 

ಎಲ್ಲಾ ದೇಗುಲಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ಮಾಡಿ ಭಕ್ತರನ್ನು ಒಳಕ್ಕೆ ಬಿಡಲಾಗುತ್ತಿದೆ. 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ದೇಗುಲಕ್ಕೆ ಬರಬಾರದು, ಮಾಸ್ಕ್ ಇಲ್ಲದೆ ಒಳಕ್ಕೆ ಪ್ರವೇಶ ಇಲ್ಲ ಎಂಬ ಫಲಕಗಳನ್ನು ಹಾಕಲಾಗಿದೆ. ದೇವಾಲಯದ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕ್ಕಿ, ಧಾರ್ಮಿಕ ಗ್ರಂಥ, ಪುಸ್ತಕ ಮುಂದಾವುಗಳನ್ನು ಮುಟ್ಟು ಬಾರದು ಎಂದೂ ಸೂಚನೆ ನೀಡಲಾಗುತ್ತಿದೆ.

ತೆರೆಯದ ಇಸ್ಕಾನ್ ದೇವಾಲಯ 

ಎಲ್ಲಾ ದೇವಾಲಯಗಳು ತೆರೆದಿದ್ದರೂ ಇಸ್ಕಾನ್ ದೇವಾಲಯ ಮಾತ್ರ ಸೋಮವಾರ ತೆರೆಯಲಿಲ್ಲ. ಎಲ್ಲಾ ದೇಗುಲಗಳಂತೆ ಇಸ್ಕಾನ್ ಕೂಡ ತೆರೆದಿರುತ್ತದೆ ಎಂದುಕೊಂಡು ಬರುತ್ತಿರುವ ಭಕ್ತರು ಮುಚ್ಚಿರುವ ಗೇಟ್‌ಗಳ ಬಳಿಯೇ ಕೈಮುಗಿದು ವಾಪಸ್ ಹೋಗುತ್ತಿದ್ದಾರೆ.

ಸ್ವಚ್ಛತೆ ಹಾಗೂ ಇನ್ನಿತರ ಕೆಲಸಗಳು ಬಾಕಿ ಇರುವ ಕಾರಣ ಇನ್ನೊಂದು ವಾರ ತೆರೆಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಭಕ್ತರಿಗೆ ಮನವರಿಕೆ ಮಾಡಿಸುತ್ತಿದ್ದಾರೆ.

ಇನ್ನೆರಡು ದಿನ ಒರಿಯನ್ ಮಾಲ್ ತೆರೆಯಲ್ಲ

ಮಾಲ್‌ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಚಟುವಟಿಕೆ ಆರಂಭಿಸಲು ಸಿದ್ಧತೆಗಳು ನಡೆಯುತ್ತಿದೆ. ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಒರಿಯನ್ ಮಾಲ್ ಇನ್ನಿರೆಡು ದಿನ ತೆರೆಯದಿರಲು ಅಲ್ಲಿನ ವ್ಯವಸ್ಥಾಪನಾ ಮಂಡಳಿ ನಿರ್ಧರಿಸಿದೆ.

ಸ್ವಚ್ಚತೆ ಜತೆಗೆ ಮಾರ್ಕಿಂಗ್, ಸ್ಯಾನಿಟೈಸರ್ ಯಂತ್ರ ಅಳವಡಿಕೆ ಹಾಗೂ ಇನ್ನಿತರ ಸಿದ್ಧತೆಗಳು ಬಾಕಿ ಇರುವ ಕಾರಣ ತೆರೆಯುವುದಿಲ್ಲ. ಜೂ.10ರ ನಂತರ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು