ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಭ್ರಷ್ಟಾಚಾರ ತನಿಖೆಗೆ ನಗರಾಭಿವೃದ್ಧಿ ಇಲಾಖೆ ಅಡ್ಡಗಾಲು

Last Updated 27 ಡಿಸೆಂಬರ್ 2021, 19:49 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ನಡೆದಿರುವ ಅಕ್ರಮ ಚಟುವಟಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲು ಅನುಮತಿ ಕೋರಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಲ್ಲಿಸಿರುವ 49 ಪ್ರಸ್ತಾವಗಳನ್ನು ತನ್ನ ಬಳಿಯೇ ಇರಿಸಿಕೊಂಡಿರುವ ನಗರಾಭಿವೃದ್ಧಿ ಇಲಾಖೆ, ತನಿಖೆಗೆ ಅಡ್ಡಗಾಲು ಹಾಕುತ್ತಿದೆ.

ಸಾರ್ವಜನಿಕರು ನೀಡಿದ್ದ ದೂರುಗಳನ್ನು ಆಧರಿಸಿ ಪ್ರಾಥಮಿಕ ತನಿಖೆ ನಡೆಸಿದ್ದ ಎಸಿಬಿ, ಆರೋಪಿತ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಅನುಮತಿ ಕೋರಿದ್ದ 24 ಪ್ರಕರಣಗಳ ಕುರಿತು ನಗರಾಭಿವೃದ್ಧಿ ಇಲಾಖೆ ಹಲವು ತಿಂಗಳಿಂದ ಪ್ರತಿಕ್ರಿಯಿಸಿಲ್ಲ.

ನವೆಂಬರ್‌ 19ರಿಂದ 23ರವರೆಗೆ ಸ್ವಯಂಪ್ರೇರಿತ ಕಾರ್ಯಾಚರಣೆ ನಡೆಸಿದ್ದ ತನಿಖಾ ಸಂಸ್ಥೆ, ಬಿಡಿಎನಲ್ಲಿ ನಡೆದಿರುವ ನೂರಾರು ಕೋಟಿ ಮೊತ್ತದ ಭ್ರಷ್ಟಾಚಾರ ಪ್ರಕರಣಗಳನ್ನು ಪತ್ತೆಹಚ್ಚಿತ್ತು.

ಈ ಸಂಬಂಧ 25 ಪ್ರಕರಣಗಳನ್ನು ದಾಖಲಿಸಲು ಅನುಮತಿ ಕೋರಿ ಎಸಿಬಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ನಗರಾಭಿವೃದ್ಧಿ ಇಲಾಖೆಗೆ ನವೆಂಬರ್‌ ಕೊನೆಯ ವಾರ ಮತ್ತು ಡಿಸೆಂಬರ್‌ ಮೊದಲ ವಾರ ಸರಣಿ ಪತ್ರಗಳನ್ನು ಬರೆದಿದ್ದಾರೆ. ಆದರೆ, ಯಾವುದೇ ಪ್ರಕರಣದಲ್ಲೂ ಈವರೆಗೆ ತನಿಖೆಗೆ ಅನುಮತಿ ನಿಡಿಲ್ಲ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಕುರಿತು ತನಿಖೆ ನಡೆಸುವುದಾಗಿ ಎಸಿಬಿ ದಾಳಿ ನಡೆದ ಮರುದಿನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳ ಕುರಿತು ತಾವೇ ದೂರು ನೀಡಿದ್ದಾಗಿ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಹೇಳಿದ್ದರು. ಆದರೆ, ಒಂದೂವರೆ ತಿಂಗಳಿನಿಂದ ಎಸಿಬಿ ಅಧಿಕಾರಿಗಳು ಸರಣಿಯೋಪಾದಿಯಲ್ಲಿ ಪತ್ರಗಳನ್ನು ಬರೆಯುತ್ತಿದ್ದರೂ ಸರ್ಕಾರದ ಕಡೆಯಿಂದ ಉತ್ತರವೇ ಬಂದಿಲ್ಲ.

20 ಕೆಎಎಸ್‌ ಅಧಿಕಾರಿಗಳು: ಬಿಡಿಎನಲ್ಲಿ ಭೂಸ್ವಾಧೀನ, ಪರಿಹಾರ ಪಾವತಿ, ನಿವೇಶನಗಳ ಹಂಚಿಕೆ, ಸಗಟು ನಿವೇಶನಗಳ ಮಂಜೂರಾತಿ, ಭೂಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಡಿನೋಟಿಫಿಕೇಷನ್‌ ಸೇರಿದಂತೆ ಹಲವು ಬಗೆಯ ಅಕ್ರಮಗಳು ನಡೆದಿರುವುದನ್ನು ಎಸಿಬಿ ತನಿಖಾ ತಂಡ ಪತ್ತೆಮಾಡಿದೆ. ಒಟ್ಟು 20 ಕೆಎಎಸ್‌ ಅಧಿಕಾರಿಗಳು ಸೇರಿದಂತೆ 70ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನೌಕರರು ತನಿಖೆಯ ವ್ಯಾಪ್ತಿಗೆ ಬರಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕಡತಗಳ ವಿಲೇವಾರಿಯ ನೇರ ಅಧಿಕಾರ ಹೊಂದಿದ್ದ ಕೆಎಎಸ್‌ ಅಧಿಕಾರಿಗಳ ವಿರುದ್ಧ ಪ್ರಬಲವಾದ ಸಾಕ್ಷ್ಯಾಧಾರಗಳಿವೆ. ಅವುಗಳ ಆಧಾರದಲ್ಲೇ ಎಫ್‌ಐಆರ್‌ ದಾಖಲು ಮಾಡಲು ಅನುಮತಿ ಕೋರಲಾಗಿದೆ. ಬಿಡಿಎ ಆಯುಕ್ತರು ಮತ್ತು ಅಧ್ಯಕ್ಷರ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ಕೆಲವು ಐಎಎಸ್‌ ಅಧಿಕಾರಿಗಳೂ ತನಿಖೆಯ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ ಎಂಬುದು ತನಿಖಾ ಸಂಸ್ಥೆಯ ಮೂಲಗಳಿಂದ ಗೊತ್ತಾಗಿದೆ.

ನೆನಪೋಲೆಗೂ ಉತ್ತರವಿಲ್ಲ: ಅನುಮತಿ ವಿಳಂಬವಾಗುತ್ತಿರುವುದರಿಂದ ತನಿಖೆಗೆ ಹಿನ್ನಡೆಯಾಗುತ್ತಿರುವ ಕುರಿತು ಎಸಿಬಿಯ ಹಿರಿಯ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದೆ ನೆನಪೋಲೆ ರವಾನಿಸಿದ್ದಾರೆ.

ಹಳೆಯ 24 ಪ್ರಕರಣಗಳು ಬಾಕಿ ಇರುವುದನ್ನು ಪತ್ರದಲ್ಲಿ ಉಲ್ಲೇಖಿಸಿರುವ ತನಿಖಾ ಸಂಸ್ಥೆಯ ಅಧಿಕಾರಿಗಳು, ಹೊಸ 25 ಪ್ರಕರಣಗಳನ್ನೂ ಪ್ರಸ್ತಾಪಿಸಿದ್ದಾರೆ. ಒಟ್ಟು 49 ಪ್ರಕರಣಗಳಲ್ಲೂ ತನಿಖೆ ಮುಂದುವರಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ನೀಡಿ ಆದೇಶ ಹೊರಡಿಸುವಂತೆ ಕೋರಿದ್ದಾರೆ ಎಂದು ಗೊತ್ತಾಗಿದೆ.

ಎಸಿಬಿ ವಶದಲ್ಲಿ ಕಡತಗಳ ರಾಶಿ

ನವೆಂಬರ್‌ 19ರಿಂದ 23ರವರೆಗೆ ಬಿಡಿಎ ಕೇಂದ್ರ ಕಚೇರಿ ಮತ್ತು ವಿಭಾಗ ಕಚೇರಿಗಳಲ್ಲಿ ಶೋಧ ನಡೆಸಿದ್ದ ಎಸಿಬಿ ಅಧಿಕಾರಿಗಳು, ಸಾವಿರಾರು ಕಡತಗಳನ್ನು ವಶಪಡಿಸಿಕೊಂಡಿದ್ದರು. ಭ್ರಷ್ಟಾಚಾರ, ಅಕ್ರಮ ನಡೆದಿರುವುದಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯವಿರುವ ಪ್ರಕರಣಗಳಿಗೆ ಸಂಬಂಧಿಸಿದ ನೂರಾರು ಕಡತಗಳನ್ನು ತನಿಖಾ ತಂಡ ತನ್ನ ಬಳಿ ಇರಿಸಿಕೊಂಡಿದೆ.

‘ಕಡತಗಳ ಪರಿಶೀಲನೆ ಮುಕ್ತಾಯಗೊಂಡು ಹಲವು ದಿನಗಳಾಗಿವೆ. ಇನ್ನು ಎಫ್ಐಆರ್‌ ದಾಖಲಿಸಿ ತನಿಖೆ ಮುಂದುವರಿಸಬೇಕಿದೆ. ಕಡತಗಳನ್ನು ಎಸಿಬಿ ಕಚೇರಿಯಲ್ಲೇ ಇರಿಸಿಕೊಂಡು ಸಕ್ಷಮ ಪ್ರಾಧಿಕಾರದ ಅನುಮತಿಗಾಗಿ ಕಾಯಲಾಗುತ್ತಿದೆ’ ಎನ್ನುತ್ತವೆ ತನಿಖಾ ಸಂಸ್ಥೆಯ ಮೂಲಗಳು.

‘ಮಾಹಿತಿ ಪಡೆದು ಸೂಕ್ತ ಕ್ರಮ’

‘ತನಿಖೆಗೆ ಅನುಮತಿ ಕೋರಿ ಎಸಿಬಿ ಸಲ್ಲಿಸುವ ಪ್ರಸ್ತಾವಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವ ಕ್ರಮವಿದೆ. ಬಿಡಿಎ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ತನಿಖೆಗೆ ಅನುಮತಿ ಕೋರಿರುವ ಕಡತಗಳು ಬಾಕಿ ಇರುವುದು
ನನ್ನ ಗಮನಕ್ಕೆ ಬಂದಿಲ್ಲ. ನಗರಾಭಿವೃದ್ಧಿ ಇಲಾಖೆಯಿಂದ ಮಾಹಿತಿ ಪಡೆದು, ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ರಾಜ್ಯ
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT