ಬುಧವಾರ, ಅಕ್ಟೋಬರ್ 21, 2020
21 °C
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಸಲಹೆ

ವಾರ್ಡ್ ಸಮಸ್ಯೆ ತ್ವರಿತ ಇತ್ಯರ್ಥಕ್ಕೆ ವಿದ್ಯಾರ್ಥಿಗಳ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಮಸ್ಯೆಗಳನ್ನು ಬೂತ್ ಮಟ್ಟದಲ್ಲೇ ಬಗೆಹರಿಸಲು ಆಸಕ್ತ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನಿಯೋಜನೆ ಮಾಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿ ಬೆಳೆಸುವುದರ ಜೊತೆಗೆ ಸಮಸ್ಯೆಗಳನ್ನು ತ್ವರಿತವಾಗಿ  ಬಗೆಹರಿಸಲು ಸಾಧ್ಯ’ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಸಲಹೆ ನೀಡಿದರು.

ತಿಂಗಳ ಮೊದಲ ಶನಿವಾರ ವಿವಿಧ ವಾರ್ಡ್‌ಗಳಲ್ಲಿ ನೋಡಲ್‌ ಅಧಿಕಾರಿಗಳು ವಾರ್ಡ್‌ ಸಭೆ ನಡೆಸುವುದನ್ನು ಬಿಬಿಎಂಪಿ ಕಡ್ಡಾಯ ಮಾಡಿದೆ. ಹಲಸೂರು ವಾರ್ಡ್‌ನ ಸಭೆಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (ಆರ್‌ಡಬ್ಲ್ಯುಎ) ಪ್ರತಿನಿಧಿಗಳ ಜೊತೆ ಆಡಳಿತಾಧಿಕಾರಿಯವರು ಶನಿವಾರ ಸಮಾಲೋಚನೆ ನಡೆಸಿದರು‌.

‘ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್‌ ಕೂಡ 40ಸಾವಿರದಿಂದ ರಿಂದ 50 ಸಾವಿರ ಜನಸಂಖ್ಯೆಯ ಸಣ್ಣ ನಗರದಂತೆ. ಇಲ್ಲಿ ಸ್ಥಳೀಯ ಸಮಸ್ಯೆಗಳು ತ್ವರಿತವಾಗಿ ನಿವಾರಿಸಲು ಅಧಿಕಾರಿಗಳ ಜೊತೆ ಸ್ಥಳೀಯರು ಹಾಗೂ ಆರ್‌ ಡಬ್ಲ್ಯುಎ ಪ್ರತಿನಿಧಿಗಳು ಕೈಜೋಡಿಸಬೇಕು. ಕಾನೂನು ತೊಡಕುಗಳಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮ ವಹಿಸಬೇಕು’ ಎಂದರು.

ರಸ್ತೆ ದುರಸ್ತಿ, ರಸ್ತೆ ಬದಿ ಬಿದ್ದಿರುವ ಭಗ್ನಾವೇಶ ತೆರವು, ಪಾದಚಾರಿ ಮಾರ್ಗಗಳ ದುರಸ್ತಿ  ಹಾಗೂ ಅನಧಿಕೃತ ಒತ್ತುವರಿ ತೆರವು, ಸಾರ್ವಜನಿಕ ಸ್ಥಳಗಳಲ್ಲಿ ಸುರಿದ ಕಸ ತೆರವು, ಬೀದಿದೀಪ ಅಳವಡಿಕೆ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ರಸ್ತೆ ಬದಿ ಅನಧಿಕೃತವಾಗಿ ನಿಲ್ಲಿಸುವ ವಾಹನಗಳ ತೆರವು, ಒಳಚರಂಡಿ ಕೊಳವೆ ದುರಸ್ತಿ ಸೇರಿದಂತೆ ಇನ್ನಿತರ ಸ್ಥಳೀಯ ಸಮಸ್ಯೆಗಳಿಗೆ ತಳ ಮಟ್ಟದ ಯೋಜನೆ ರೂಪಿಸಿ ಜಾರಿಗೊಳಿಸಬೇಕು ಎಂದು ಗೌರವ್‌ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದಾಗಿ ಕೆಲವು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಆಗುತ್ತಿಲ್ಲ. ಪಾಲಿಕೆ, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು, ಆರ್‌ಡಬ್ಲ್ಯುಎ ಪ್ರತಿನಿಧಿಗಳಿರುವ ವಾಟ್ಸ್‌ಆ್ಯಪ್‌ ಬಳಗ ರಚಿಸಿಕೊಂಡು ಸ್ಥಳೀಯ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಹಲಸೂರು ಕೆರೆ, ಅಂಗಳ ಸ್ವಚ್ಚ ಹಾಗೂ ಸುಂದರವಾಗಿರುವಂತೆ ಕ್ರಮ ವಹಿಸಬೇಕು. ಕೆರೆಯ ಬಳಿ ವಾಯುವಿಹಾರಕ್ಕೆ ಬರುವವರಿಗಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸಬೇಕು. ಕೆರೆ ಸುತ್ತಮುತ್ಲಿನತ ಭಗ್ನಾವೇಶಗಳನ್ನು ತೆರವುಗೊಳಿಸಬೇಕು. ಕೆರೆಗೆ ಒಳಚರಂಡಿಯ ನೀರು ಸೇರದಂತೆ ನೋಡಿಕೊಳ್ಳಬೇಕು. ರಾಜಕಾಲುವೆಗಳಿಗೆ ಶೌಚನೀರು ಸೇರುವ ಬಗ್ಗೆ ಸ್ಥಳೀಯರು ದೂರು ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ವಾರ್ಡ್‌ನ ಸೂಕ್ಷ್ಮ ಪ್ರದೇಶಗಳನ್ನು ಗುರಿತಿಸಿ ತ್ವರಿತವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರಸ್ತೆ ಬದಿ ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಲು ಸೂಕ್ತ ಕ್ರಮವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾರ್ಡ್‌ನ ನೋಡಲ್ ಅಧಿಕಾರಿ ಸರ್ಫರಾಜ್ ಖಾನ್, ‘ಹಲಸೂರು ಕರೆಯನ್ನು ಸ್ವಚ್ಛಗೊಳಿಸಲಾಗುವುದು. ವಾರ್ಡ್‌ನಲ್ಲಿ ನಾಲ್ಕು ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಪೌರಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಮಸ್ಟರಿಂಗ್‌ ಕೇಂದ್ರಗಳಲ್ಲಿ ಸುವಿಧಾ ಕ್ಯಾಬಿನ್‌ ಸ್ಥಾಪಿಸಲಾಗುವುದು’ ಎಂದರು.

ಬೀದಿದೀಪಗಳ ಸ್ವಿಚ್‌ಗಳನ್ನು ಕೆಲವರು ಹಾಳುಮಾಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ದೂರಿದರು. ಅಂತಹವರನ್ನು ಪತ್ತೆ ಹಚ್ಚಿ  ಕ್ರಮವಹಿಸುವಂತೆ ಮಾರ್ಷಲ್‌ಗೆ ನೋಡಲ್‌ ಅಧಿಕಾರಿ ಸೂಚನೆ ನೀಡಿದರು.

ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.