ಬುಧವಾರ, ನವೆಂಬರ್ 20, 2019
21 °C
₹ 29.99 ಲಕ್ಷ ಮೌಲ್ಯದ ಚಿನ್ನ ಜಪ್ತಿ

ಟ್ರಾಲಿ ಬ್ಯಾಗ್‌ ಚಕ್ರ, ಗುದದ್ವಾರದಲ್ಲಿ ಚಿನ್ನದ ಗಟ್ಟಿ ಕಳ್ಳಸಾಗಣೆ: ಇಬ್ಬರ ಬಂಧನ

Published:
Updated:

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ಬಂಧಿತರಿಂದ ₹ 29.99 ಲಕ್ಷ ಮೌಲ್ಯದ 774 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕೊಲ್ಕತ್ತಾ ನಿವಾಸಿ ಆಗಿರುವ ಪ್ರಯಾಣಿಕ, ಅ. 30ರಂದು ನಿಲ್ದಾಣಕ್ಕೆ ಬಂದಿಳಿದಿದ್ದ. ಟ್ರಾಲಿ ಬ್ಯಾಗ್‌ನ ಎರಡು ಸಣ್ಣ ಚಕ್ರದೊಳಗೆ 417 ಗ್ರಾಂ ತೂಕದ 12 ಚಿನ್ನದ ಗಟ್ಟಿಯನ್ನು ಬಚ್ಚಿಟ್ಟುಕೊಂಡಿದ್ದ. ತಪಾಸಣೆ ವೇಳೆ  ಸಿಕ್ಕಿಬಿದ್ದ’ ಎಂದರು.

‘ಭಟ್ಕಳದ ನಿವಾಸಿಯಾದ ಇನೊಬ್ಬ ಪ್ರಯಾಣಿಕ ದುಬೈನಿಂದ ಬಂದಿದ್ದ. ಆತ ಗುದದ್ವಾರ ಹಾಗೂ ಸಾಕ್ಸ್‌ಗಳಲ್ಲಿ ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟುಕೊಂಡಿದ್ದ. ನಿಲ್ದಾಣದಿಂದ ಹೊರಬರುವಾಗ ಆತನ ನಡೆ ಬಗ್ಗೆ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದಿತ್ತು. ವಶಕ್ಕೆ ಪಡೆದು ವೈದ್ಯರಿಂದ ತಪಾಸಣೆ ನಡೆಸಿದಾಗ ಚಿನ್ನವಿರುವುದು ಪತ್ತೆ ಆಯಿತು. ಆತನ ಬಳಿ 357 ಗ್ರಾಂ ಚಿನ್ನ ಸಿಕ್ಕಿದೆ’ ಎಂದು ಅಧಿಕಾರಿ ಹೇಳಿದರು.

ಪ್ರತಿಕ್ರಿಯಿಸಿ (+)