ಶನಿವಾರ, ಸೆಪ್ಟೆಂಬರ್ 18, 2021
29 °C

ಆ. 15ಕ್ಕೆ ಬಡವರಿಗೆ 5,000 ಮನೆ ಹಂಚಿಕೆ: ವಿ. ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದಲ್ಲಿ ಬಡವರಿಗಾಗಿ ನಿರ್ಮಿಸುತ್ತಿರುವ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಈಗಾಗಲೇ ಪೂರ್ಣಗೊಂಡಿರುವ 5 ಸಾವಿರ ಮನೆಗಳನ್ನು ಅರ್ಹರಿಗೆ ಇದೇ ಆಗಸ್ಟ್‌ 15ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಸ್ತಾಂತರಿಸಲಿದ್ದಾರೆ’ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಈ ವಸತಿ ಯೋಜನೆಗೆ ಸಂಬಂಧಿಸಿದಂತೆ ರಾಜೀವ್‍ ಗಾಂಧಿ ವಸತಿ ನಿಗಮಕ್ಕೆ ಸರ್ಕಾರಿ ಜಮೀನು ಮಂಜೂರಾತಿ ಹಾಗೂ ಹಸ್ತಾಂತರ ಕುರಿತಂತೆ ಮಂಗಳವಾರ ನಡೆದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯೋಜನೆಯ ಮೊದಲನೇ ಹಂತದಲ್ಲಿ 313 ಎಕರೆ ಸರ್ಕಾರಿ ಜಮೀನಿನಲ್ಲಿ 46,499 ಬಹುಮಹಡಿ ವಸತಿಗೃಹಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. 45,148 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ’ ಎಂದರು.

‘41,011 ಬಹುಮಹಡಿ ಮನೆಗಳ ನಿರ್ಮಾಣದ ಕಾಮಗಾರಿ ಆರಂಭಿಸಲಾಗಿದ್ದು, ಈ ಪೈಕಿ 848 ಮನೆಗಳ ಮೇಲ್ಛಾವಣಿ ಮತ್ತು 8,757 ಮನೆಗಳ ಪ್ಲಿಂತ್ ಪೂರ್ಣಗೊಂಡಿದೆ. 7,721 ಮನೆಗಳ ನಿರ್ಮಾಣ ತಳಪಾಯ ಹಂತದಲ್ಲಿದೆ. 9,943 ಮನೆಗಳ ತಳಪಾಯದ ಮಣ್ಣು ಅಗೆತದ ಹಂತದಲ್ಲಿದ್ದು, 13,742 ಮನೆಗಳ ಜಮೀನು ಸಮತಟ್ಟು ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಆನ್‍ಲೈನ್ ಮೂಲಕ ಈವರೆಗೆ 48,615 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಫಲಾನುಭವಿಗಳು ತಮ್ಮ ಇಚ್ಛೆಯಂತೆ ಫ್ಲ್ಯಾಟ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯೋಜನೆಯ ಎರಡನೆಯ ಹಂತದಲ್ಲಿ 53,501 ಬಹುಮಹಡಿ ಮನೆಗಳನ್ನು ನಿರ್ಮಿಸಲಾಗುವುದು. ಈ ಪೈಕಿ 2,928 ಮನೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದರು.

‘ನಗರ ಜಿಲ್ಲೆಯ ಎಲ್ಲ ಶಾಸಕರಿಗೂ ತಮ್ಮ ವ್ಯಾಪ್ತಿಯಲ್ಲಿ ಶೇ 50ರಷ್ಟು ಮನೆಗಳನ್ನು ಅರ್ಹ ಬಡವರಿಗೆ ವಿತರಿಸಲು ಅವಕಾಶ ಮಾಡಿಕೊಡಲಾಗುವುದು. ಬಡವರಿಗೆ ಕಡಿಮೆ ಬೆಲೆಯಲ್ಲಿ ಮನೆಗಳನ್ನು ನೀಡಲಾಗುತ್ತಿದ್ದು, ತಲಾ ₹ 7 ಲಕ್ಷ ನಿಗದಿಪಡಿಸಿದ್ದ ದರವನ್ನು ₹ 5 ಲಕ್ಷಕ್ಕೆ ಇಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ₹ 4.20 ಲಕ್ಷ ನಿಗದಿಪಡಿಸಲು ಚಿಂತನೆ ನಡೆದಿದೆ’ ಎಂದರು.

ಸಭೆಯ ಬಳಿಕ ಶಾಸಕರಾದ ಮುನಿರತ್ನ ಮತ್ತು ಆರ್‌.ಮಂಜುನಾಥ್ ಅವರು ಕೊಳಚೆ ನಿರ್ಮೂಲನಾ ಮಂಡಳಿ ತಮ್ಮ ಕ್ಷೇತ್ರಗಳಲ್ಲಿ ನಿರ್ಮಿಸುತ್ತಿರುವ ಮನೆಗಳ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು, ವಸತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳ ತಂಡವು ಸ್ಥಳಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದರು. ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್ ಸಭೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು