ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುವೆಂಪು ಶ್ರೀರಾಮಾಯಣ ದರ್ಶನಂ ವಚನ ದೀಪಿಕೆ’ ಕೃತಿ ಬಿಡುಗಡೆ

Last Updated 29 ಡಿಸೆಂಬರ್ 2021, 16:32 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂತರಂಗದ ವಿಕಾಸ ಆಗದೆ ಬಹಿರಂಗದ ವಿಕಾಸ ಆಗದು. ನೆಮ್ಮದಿ ಮತ್ತು ಆತ್ಮಾನಂದ ಇರುವುದು ಸಾಹಿತ್ಯದಲ್ಲಿ ಮಾತ್ರ’ ಎಂದು ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಗಾಂಧಿ ಸಾಹಿತ್ಯ ಪ್ರತಿಷ್ಠಾನ, ಶೇಷಾದ್ರಿಪುರ ಸಂಜೆ ಪದವಿ ಕಾಲೇಜು, ಉದಯ ಪ್ರಕಾಶನದ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕುವೆಂಪು ಜನ್ಮ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ಜಿ. ಕೃಷ್ಣಪ್ಪ ಅವರ ‘ಕುವೆಂಪು ಶ್ರೀರಾಮಾಯಣ ದರ್ಶನಂ ವಚನ ದೀಪಿಕೆ’ ಗದ್ಯಾನುವಾದ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಬಹಿರಂಗದ ಕಡೆಗೆ ಇರುವ ತಹ ತಹ ಅಂತರಂಗದ ವಿಕಾಸದ ಕಡೆಗೆ ಇಲ್ಲವಾಗಿದೆ. ಅಂತರಂಗ ವಿಕಾಸ ಆಗದಿದ್ದರೆ ಅದು ಕೇವಲ ಒಣ ವ್ಯಾಪಾರ ಆಗಲಿದೆ. ಮನಸ್ಸಿಗೆ ನೆಮ್ಮದಿ, ಬುದ್ಧಿಗೆ ವಿಚಾರ ಮತ್ತು ಹೃದಯಕ್ಕೆ ಆತ್ಮಾನಂದ ಸಿಗುವುದು ಸಾಹಿತ್ಯದಲ್ಲಿ ಮಾತ್ರ. ಕುವೆಂಪು ರಾಮಾಯಣ ದರ್ಶನಂ ಓದಿದರೆ ಈ ಆತ್ಮಾನಂದ ಸಿಗಲಿದೆ’ ಎಂದು ಹೇಳಿದರು.

‘ಕುವೆಂಪು ರಾಮಾಯಣ ದರ್ಶನಂ ಬಳಿಕ ಎಷ್ಟೋ ಕಾವ್ಯಗಳು ಬಂದರೂ ಅದರ ಮಟ್ಟಕ್ಕೆ ಏರಲು ಆಗಿಲ್ಲ. ಅದನ್ನು ಓದಲು ಸಾಕಷ್ಟು ಪೂರ್ವ ತಯಾರಿ ಬೇಕಾಗುತ್ತದೆ. ಅದರ ಒಳ ಹೊಕ್ಕು ಅಧ್ಯಯನ ನಡೆಸಿರುವ ಜಿ. ಕೃಷ್ಣಪ್ಪ ಅವರು ಗದ್ಯ ರೂಪಕ್ಕೆ ತರುವ ಮೂಲಕ ಜನರಿಗೆ ಶ್ರೀ ರಾಮಾಯಣ ದರ್ಶನಂ ಅನ್ನು ಇನ್ನಷ್ಟು ಹತ್ತಿರವಾಗಿಸಿದ್ದಾರೆ’ ಎಂದು ಬಣ್ಣಿಸಿದರು.

‘ಈ ಕೃತಿ ರಚನೆ ಮಾಡಲು ಕೃಷ್ಣಪ್ಪನವರು ಹಲವು ವರ್ಷಗಳ ಕಾಲ ತಪಸ್ಸಿನಂತೆ ಕೆಲಸ ಮಾಡಿದ್ದಾರೆ. ರಾಮಾಯಣ ದರ್ಶನಂ ಅರ್ಥ ಮಾಡಿಕೊಳ್ಳಲು ಬೇಕಾದ ನಿಘಂಟನ್ನೂ ಅವರು ಈ ಪುಸ್ತಕದಲ್ಲಿ ನೀಡಿದ್ದಾರೆ. 750 ಪುಟಗಳ ಪುಸ್ತಕದಲ್ಲಿ ನಿಘಂಟಿಗಾಗಿಯೇ 100 ಪುಟಗಳನ್ನು ಮೀಸಲಿಟ್ಟಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಈ ಕೃತಿ ಮೈಲಿಗಲ್ಲಾಗಲಿದೆ’ ಎಂದು ಆಶಿಸಿದರು.

ಕೃತಿ ಪರಿಚಯಿಸಿದ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ, ‘ಕುವೆಂಪು ರಾಮಾಯಣ ದರ್ಶನವನ್ನು ಹಲವರು ಗದ್ಯಾನುವಾದ ಮಾಡಿದ್ದಾರೆ. ಶ್ರೀ ರಾಮಾಯಣ ದರ್ಶನಂ ಓದಿದಷ್ಟೇ ರಸಾಸ್ವಾದವನ್ನು ಜಿ. ಕೃಷ್ಣಪ್ಪ ಅವರ ಗದ್ಯಾನುವಾದದ ಕೃತಿ ನೀಡುತ್ತಿದೆ. ಕುವೆಂಪು ಅವರು ಇಳಿದಷ್ಟೇ ಆಳಕ್ಕಿಳಿಯಲು ಮತ್ತು ಎತ್ತರಕ್ಕೇರಲು ಜಿ. ಕೃಷ್ಣಪ್ಪ ಪ್ರಯತ್ನಿಸಿದ್ದಾರೆ’ ಎಂದು ಹೇಳಿದರು.

ಬಿಡುಗಡೆಯಾದ ಪುಸ್ತಕವನ್ನು ಜಿ. ಕೃಷ್ಣಪ್ಪ ಅವರು ಮಲ್ಲೇಪುರಂ ಜಿ. ವೆಂಕಟೇಶ್ ಪತ್ನಿ ಭವಾನಿ ವೆಂಕಟೇಶ್ ಅವರಿಗೆ ಅರ್ಪಿಸಿದರು.

ಕುವೆಂಪು ಶ್ರೀ ರಾಮಾಯಣ ದರ್ಶನಂ ವಚನ ದೀಪಿಕೆ

ಕೃತಿಕಾರ; ಡಾ. ಜಿ. ಕೃಷ್ಣಪ್ಪ

ಮುದ್ರಕರು; ಅನ್ನಪೂರ್ಣ ಪಬ್ಲಿಷಿಂಗ್ ಹೌಸ್

ಪುಸ್ತಕದ ದರ; ₹800

ಪುಟ: 750 ಪುಟಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT