ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮದ ಆಧಾರವಿಲ್ಲದೆ ಕಟ್ಟುವ ಸಾಮ್ರಾಜ್ಯ ನಿಲ್ಲುವುದಿಲ್ಲ’

ಸಿರಿಗೆರೆಯ ಶ್ರೀಗಳಿಗೆ ಆದಿಕವಿ, ಶಂಕರ್‌ ರಾಮನ್‌ ಅವರಿಗೆ ವಾಗ್ದೇವಿ ಪುರಸ್ಕಾರ ಘೋಷಣೆ
Last Updated 31 ಅಕ್ಟೋಬರ್ 2020, 16:26 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದಿನ ರಾಜಕೀಯ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವಂತಹ ಅನೇಕ ಅಂಶಗಳು ವಾಲ್ಮೀಕಿ ರಾಮಾಯಣದಲ್ಲಿವೆ. ಧರ್ಮದ ಆಧಾರವಿಲ್ಲದೆ ಕಟ್ಟುವ ಯಾವ ಸಾಮ್ರಾಜ್ಯವೂ ನಿಲ್ಲುವುದಿಲ್ಲ ಎಂದು ವಾಲ್ಮೀಕಿ ಮಹರ್ಷಿ ಪ್ರತಿಪಾದಿಸಿದ್ದರು’ ಎಂದು ಬಹುಶ್ರುತ ವಿದ್ವಾಂಸ ಪ್ರೊ.ಕೆ.ಎಸ್. ನಾರಾಯಣಾಚಾರ್ಯ ಹೇಳಿದರು.

ವಾಲ್ಮೀಕಿ ರಾಮಾಯಣದಲ್ಲಿ ಪ್ರತಿಪಾದಿತವಾಗಿರುವ ಅಂದಿನ ಭಾರತದ ಸಾಮಾಜಿಕ, ಭೌಗೋಳಿಕ ಹಾಗೂ ರಾಜಕೀಯ ಸನ್ನಿವೇಶಗಳ ಕುರಿತು ಶನಿವಾರ ಆನ್‌ಲೈನ್‌ನಲ್ಲಿ ಮಾತನಾಡಿದ ಅವರು, ‘ರಾಮಾಯಣ ಎನ್ನುವುದು ಕಟ್ಟುಕಥೆ ಎಂಬ ತಪ್ಪು ಕಲ್ಪನೆಯನ್ನು ಪಾಶ್ಚಾತ್ಯರು ಬಿತ್ತಿದ್ದಾರೆ. ಕೆಲವರು ಹುಚ್ಚು ರಾಮಾಯಣಗಳನ್ನೂ ಬರೆದಿದ್ದಾರೆ. ಆದರೆ, ವಾಲ್ಮೀಕಿ ರಚಿಸಿದ ರಾಮಾಯಣ ದೇಶದ ನಿಜವಾದ ಇತಿಹಾಸ’ ಎಂದು ಹೇಳಿದರು.

‘ರಾವಣ ಶಿವಭಕ್ತ, ಅವನು ವೇದಗಳನ್ನು ಓದಿದ್ದ ಎಂದು ಕೆಲವರು ಬರೆದಿದ್ದಾರೆ. ಆದರೆ, ಇದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಆದರೆ, ರಾವಣನು ಅನೇಕ ದುರಾಚಾರಿ, ದುರ್‌ಬ್ರಾಹ್ಮಣರನ್ನು ಸಾಕಿದ್ದ ಎಂಬ ಉಲ್ಲೇಖ ವಾಲ್ಮೀಕಿ ರಾಮಾಯಣದಲ್ಲಿದೆ. ಹನುಮಂತ ಅಶೋಕ ವನದಲ್ಲಿ ಇದನ್ನು ಕಣ್ಣಾರೆ ಕಂಡಿದ್ದರ ಬಗ್ಗೆ ಅವರು ಬರೆದಿದ್ದಾರೆ’ ಎಂದು ಹೇಳಿದರು.

‘ಕೆಲವು ಅಂಶಗಳು ದಶರಥ ದೊರೆಯು ದುರ್ಬಲನಾಗಿದ್ದ ಎಂಬುದನ್ನು ಹೇಳುತ್ತವೆ. ಆದರೆ, ರಾವಣನ ಬಳಿ 36 ಸಾವಿರ ಕೋಟಿ ಸೈನ್ಯವಿತ್ತು. ಅವನು ಹೆಸರಿಗೆ ಬ್ರಾಹ್ಮಣನಾಗಿದ್ದರೂ ದೊಡ್ಡ ಭಯೋತ್ಪಾದಕನಂತಿದ್ದ. ಇಡೀ ಜಗತ್ತನ್ನು ಆಕ್ರಮಿಸಲು ಅವನು ಸಿದ್ಧನಾಗಿದ್ದ. ಅವನ ಬಳಿ ಅನೇಕ ಬ್ರಾಹ್ಮಣರಿದ್ದರೂ ಅವರು ಸ್ವಭಾವದಲ್ಲಿ, ನಡತೆಯಲ್ಲಿ ರಾಕ್ಷಸರಿದ್ದರು. ಇಂಥವರ ಬಗ್ಗೆ ಬೇರೆ ವ್ಯಾಖ್ಯಾನಿಸುವ ಅಗತ್ಯವಿಲ್ಲ. ಈಗಿನ ನಗರ ನಕ್ಸಲರನ್ನು ಕಣ್ಮುಂದೆ ತಂದುಕೊಳ್ಳಬಹುದು’ ಎಂದೂ ಅವರು ಹೇಳಿದರು.

‘ರಾವಣನನ್ನು ಪರಾಭವಗೊಳಿಸುವುದಕ್ಕಾಗಿಯೇ ದಶರಥನು ರಾಮನನ್ನು ವನವಾಸಕ್ಕೆ ಕಳುಹಿಸಿದ. ರಾಮನು ರಾವಣನಲ್ಲಿನ ಶೈವ ಧನಸ್ಸನ್ನು ಮುರಿದು, ಅವನಲ್ಲಿ ವೈಷ್ಣವ ಪ್ರತಿಷ್ಠಾಪನೆ ಮಾಡಿದ’ ಎಂದು ಹೇಳಿದರು.

‘ಸರಳ ಸಂಸ್ಕೃತದಲ್ಲಿ ವಾಲ್ಮೀಕಿಯು ರಾಮಾಯಣ ರಚಿಸಿದ್ದಾರೆ. ಅವರು, ರಾಮನ ಪುತ್ರರಾದ ಲವ–ಕುಶರಿಗೆ ಸಂಗೀತ ಪಾಠ ಕಲಿಸಿದ ಬಗ್ಗೆಯೂ ರಾಮಾಯಣದಲ್ಲಿ ಉಲ್ಲೇಖವಾಗಿದೆ’ ಎಂದು ನಾರಾಯಣಾಚಾರ್ಯ ಹೇಳಿದರು.

ಪ್ರಶಸ್ತಿ ಘೋಷಣೆ:

ವಾಲ್ಮೀಕಿ ಜಯಂತಿ ಅಂಗವಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಆದಿಕವಿ ಪುರಸ್ಕಾರ ಮತ್ತು ವಾಗ್ದೇವಿ ಪುರಸ್ಕೃತರ ಹೆಸರು ಘೋಷಿಸಲಾಯಿತು.

ತರಳಬಾಳು ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಗೆ ಆದಿಕವಿ ಪುರಸ್ಕಾರ ಘೋಷಿಸಲಾಯಿತು. ಈ ಪುರಸ್ಕಾರವು ₹1 ಲಕ್ಷ ನಗದು, ಪಂಚಲೋಹದ ವಾಲ್ಮೀಕಿ ವಿಗ್ರಹ ಮತ್ತು ಸನ್ಮಾನ ಪತ್ರವನ್ನು ಒಳಗೊಂಡಿದೆ.

ಮನೋರೋಗ ತಜ್ಞ, ಸಂಸ್ಕೃತ ವಿದ್ವಾಂಸ ಶಂಕರ್‌ರಾಮನ್‌ ಅವರಿಗೆ ವಾಗ್ದೇವಿ ಪ್ರಶಸ್ತಿ ಘೋಷಿಸಲಾಯಿತು. ಈ ಪ್ರಶಸ್ತಿಯು ₹1 ಲಕ್ಷ ನಗದು, ಪಂಚಲೋಹದ ಸರಸ್ವತಿ ವಿಗ್ರಹ, ಸನ್ಮಾನ ಪತ್ರವನ್ನು ಒಳಗೊಂಡಿದೆ. ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT