ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಯಶಸ್ವಿ ಹೆರಿಗೆ

ಸತತ 77 ದಿನಗಳ ಚಿಕಿತ್ಸೆ ಒದಗಿಸಿದ ವಾಣಿವಿಲಾಸ ಆಸ್ಪತ್ರೆ ವೈದ್ಯರು
Published 22 ಆಗಸ್ಟ್ 2024, 15:50 IST
Last Updated 22 ಆಗಸ್ಟ್ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ಮಿದುಳಿನಲ್ಲಿ ರಕ್ತಸ್ರಾವವಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಾಗಿದ್ದ ಗರ್ಭಿಣಿಗೆ ಇಲ್ಲಿನ ವಾಣಿವಿಲಾಸ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿ, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಸತತ 77 ದಿನಗಳವರೆಗೆ ಚಿಕಿತ್ಸೆ ಒದಗಿಸಿದ್ದಾರೆ. ಇದರಿಂದಾಗಿ ಮಹಿಳೆ ಚೇತರಿಸಿಕೊಂಡಿದ್ದಾರೆ.

ತುಮಕೂರಿನ ಮಂಚಲಕುಪ್ಪೆಯ ಒಂಬತ್ತು ತಿಂಗಳ ಗರ್ಭಿಣಿಗೆ ರಕ್ತದೊತ್ತಡ ಹೆಚ್ಚಾಗಿ, ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು. ಸ್ಥಳೀಯ ಆಸ್ಪತ್ರೆಗೆ ತೆರಳಿದ್ದ ಅವರು, ಶಿಫಾರಸು ಆಧಾರದಲ್ಲಿ ಕಳೆದ ಜೂನ್‌ 5ರಂದು ವಾಣಿವಿಲಾಸ ಆಸ್ಪತ್ರೆಗೆ ಬಂದಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 30 ವರ್ಷದ ಮಹಿಳೆಗೆ ವೈದ್ಯರು ಅದೇ ದಿನ ಸಿಸೇರಿಯನ್ ಮಾಡಿ, ಗಂಡು ಮಗುವನ್ನು ಹೊರತೆಗೆದಿದ್ದರು. ಬಳಿಕ ಮಹಿಳೆಯನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಿ, ಅಲ್ಲಿ ಚಿಕಿತ್ಸೆ ನೀಡಿದ್ದರು. ಈಗ ಮಹಿಳೆ ಸಂಪೂರ್ಣ ಚೇತರಿಸಿಕೊಂಡಿದ್ದು, ಮಗುವೂ ಆರೋಗ್ಯದಿಂದ ಇದೆ.

‘ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಗೆ ಹನ್ನೊಂದು ದಿನ ವೆಂಟಿಲೇಟರ್ ಸಂಪರ್ಕ ಕಲ್ಪಿಸಲಾಗಿತ್ತು. ಬಳಿಕ ‘ಟ್ರಾಕಿಯೊಸ್ಟೊಮಿ’ ಸಹಾಯದಿಂದ ಕೃತಕ ಗಾಳಿ ನೀಡಲಾಯಿತು. ಇದರಿಂದಾಗಿ ನಿಧಾನವಾಗಿ ಅವರಿಗೆ ಪ್ರಜ್ಞೆ ಮರಳಿತು. ಆಸ್ಪತ್ರೆಗೆ ದಾಖಲಾದಾಗ ಅವರ ಕೈ-ಕಾಲುಗಳಿಗೆ ಸ್ವಾಧೀನ ಇರಲಿಲ್ಲ. ಫಿಸಿಯೊಥೆರಪಿ ಸಹಾಯದಿಂದ ಅವರು ಚೇತರಿಸಿಕೊಂಡರು. ಈಗ ಯಾರ ಸಹಾಯವಿಲ್ಲದೆ ಅವರು ಎದ್ದು ಓಡಾಡುತ್ತಾರೆ. ಇದನ್ನು ವೈದ್ಯಕೀಯ ಕ್ಷೇತ್ರದ ಚಮತ್ಕಾರವೆಂದೇ ಭಾವಿಸಿದ್ದೇವೆ’ ಎಂದು ಚಿಕಿತ್ಸೆ ನೀಡಿದ ವೈದ್ಯಕೀಯ ತಂಡದ ಡಾ. ಇಂದುಮತಿ ತಿಳಿಸಿದರು. 

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ. ಸವಿತಾ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ್, ಘಟಕದ ಮುಖ್ಯಸ್ಥರಾದ ಡಾ. ಅಶೋಕ್ ಕುಮಾರ್ ದೇವೂರ್, ವೈದ್ಯಕೀಯ ವಿಭಾಗದ ಡಾ. ರವಿಶಂಕರ್ ಹಾಗೂ ಅರಿವಳಿಕೆ ಸೇರಿ ವಿವಿಧ ವಿಭಾಗಗಳ ವೈದ್ಯರನ್ನು ಒಳಗೊಂಡ ತಂಡವು ಮಹಿಳೆಗೆ ಚಿಕಿತ್ಸೆ ನೀಡಿದೆ. ಈ ಅವಧಿಯಲ್ಲಿ ಮಗುವಿಗೆ ಆಸ್ಪತ್ರೆಯ ‘ಅಮೃತಧಾರೆ’ ಎದೆಹಾಲು ಬ್ಯಾಂಕಿನ ಮೂಲಕ ಅಗತ್ಯ ಹಾಲನ್ನು ಒದಗಿಸಿ, ಆರೈಕೆ ಮಾಡಲಾಗಿದೆ.

‘ವೈದ್ಯರು ಸಕಾಲಕ್ಕೆ ಅಗತ್ಯ ಚಿಕಿತ್ಸೆ ಒದಗಿಸಿ, ತಾಯಿ–ಮಗುವನ್ನು ರಕ್ಷಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿಗೆ ಸಂಜೀವಿನಿ ಎಂಬುದು ನಮ್ಮ ಪ್ರಕರಣದಲ್ಲಿ ಸಾಬೀತಾಗಿದೆ’ ಎಂದು ಕುಟುಂಬಸ್ಥರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT