ಶನಿವಾರ, ನವೆಂಬರ್ 23, 2019
18 °C
ಗುಂಡಿಮಯ ರಸ್ತೆಗಳು, ದೂಳಿನ ಸಮಸ್ಯೆ, * ಸಂಚಾರ ದಟ್ಟಣೆ ಕಿರಿಕಿರಿ

ವರ್ತೂರು ವಾರ್ಡ್‌: ಅಪಘಾತಗಳ ತವರು

Published:
Updated:

ಬೆಂಗಳೂರು: ಮಹಾನಗರದ ಹೊರವಲಯದಲ್ಲಿ ಇರುವುದು ಮಾತ್ರವಲ್ಲದೆ, ಮೂಲಸೌಲಭ್ಯಗಳಿಂದಲೂ ದೂರವಾಗಿರುವ ಕ್ಷೇತ್ರ ಮಹದೇವಪುರ. ಇಲ್ಲಿ ಅಂತರ್ಜಲ ಬತ್ತಿಹೋಗಿದೆ. ಕೆರೆಗಳು ಕಲುಷಿತಗೊಂಡಿವೆ. ನೀರು ಪೂರೈಕೆಗಾಗಿ ಪೈಪ್‌ ಅಳವಡಿಸಲು ರಸ್ತೆ ಅಗೆಯಲಾಗಿದೆ.

ಇಂತಹ ಹದಗೆಟ್ಟ ರಸ್ತೆಗಳನ್ನು ಗುಂಡಿಗಳು ಆವರಿಸಿವೆ. ಬಿಸಿಲಿದ್ದರೆ ದೂಳು, ಮಳೆ ಬಂದರೆ ಕೆಸರು. ಜೊತೆಗೆ, ಸಂಚಾರ ದಟ್ಟಣೆಯಿಂದ ಬೇಸತ್ತಿದ್ದಾರೆ ಎನ್ನುತ್ತಾರೆ ನಿವಾಸಿಗಳು.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ 33 ಗ್ರಾಮಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಮುಗಿದ ಕಡೆ, ಮನೆಗಳಿಗೆ ಸಂಪರ್ಕ ನೀಡಬೇಕಾಗಿದೆ. ಕೆಲವು ಗ್ರಾಮಗಳಲ್ಲಿ ಒಳಚರಂಡಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.

ಈ ಪೈಕಿ, ವರ್ತೂರು ವಾರ್ಡ್‌ (149) ವ್ಯಾಪ್ತಿಯ ರಸ್ತೆಗಳಲ್ಲಿ ಸಂಚರಿಸಲು ಎಂಟೆದೆ ಬೇಕಾಗುತ್ತದೆ. ಅಷ್ಟೊಂದು ಹದಗೆಟ್ಟಿವೆ. ಬಳಗೆರೆ ಕ್ರಾಸ್‌, ಹೇರೋಹಳ್ಳಿ ರಸ್ತೆ, ಕುಂದಲಹಳ್ಳಿ ಸೇರಿದಂತೆ ಈ ವಾರ್ಡ್‌ನ ಎಲ್ಲ ಮುಖ್ಯ ರಸ್ತೆಗಳಲ್ಲಿ ಒಳಚರಂಡಿ ಮತ್ತು ನೀರಿನ ಪೈಪ್‌ ಅಳವಡಿಕೆಗೆ ರಸ್ತೆಯನ್ನು ಅಗೆಯಲಾಗಿದೆ. ಆದರೆ, ಕಾಮಗಾರಿ ಮುಗಿದ ನಂತರ ಸರಿಯಾಗಿ ದುರಸ್ತಿ ಮಾಡುವ ಕೆಲಸವಾಗಿಲ್ಲ.

ದೂಳು ಸಮಸ್ಯೆ: ‘ವಿಪರೀತ ದೂಳು ಏಳುತ್ತಿದ್ದು, ಮನೆಯಿಂದ ಹೊರಗೆ ಬರಲು ಮನಸಾಗುವುದೇ ಇಲ್ಲ. ಮಕ್ಕಳನ್ನು ಪದೇ ಪದೇ ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಇದೆ. ಆಸ್ಪತ್ರೆಯಲ್ಲಿ ಮಕ್ಕಳಿಗೆ ಮೂಗಿನಲ್ಲಿ ಹಾಕಲು ಅವರು ಯಾವುದೋ ಲಿಕ್ವಿಡ್ ಬರೆದುಕೊಡುತ್ತಾರೆ. ಆದರೂ, ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಸ್ಕೂಟಿಯಲ್ಲಿ ಹೋಗುತ್ತಿದ್ದರೆ ಕಣ್ಣುಗಳು ಕೆಂಪಾಗುತ್ತವೆ’ ಎಂದು ಗೃಹಿಣಿ ಸಂಧ್ಯಾರಾಣಿ ಸಮಸ್ಯೆ ಹೇಳಿಕೊಂಡರು.

‘ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ಸ್ಕೂಟಿಯಲ್ಲಿ ಹೋಗು ತ್ತಿದ್ದರು. ಗುಂಡಿ ತಪ್ಪಿಸಲು ಹೋಗಿ ಸ್ವಲ್ಪ ಬಲಕ್ಕೆ ವಾಲಿದರು. ಹಿಂದಿನಿಂದ ಬರುತ್ತಿದ್ದ ನೀರಿನ ಲಾರಿಯ ಚಕ್ರಕ್ಕೆ ಸ್ಕೂಟಿ ಸಿಕ್ಕಿಕೊಂಡು ಸ್ವಲ್ಪ ದೂರದ
ವರೆಗೆ ಹೋಯಿತು. ಮಹಿಳೆಯ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದರು’ ಎಂದು ಅವರು ನೆನಪು ಮಾಡಿಕೊಂಡರು.

ಬಳಗೆರೆ ಕ್ರಾಸ್‌ನಿಂದ ಮಾರತ್ತಹಳ್ಳಿ ಸೇತುವೆವರೆಗಿನ ರಸ್ತೆಗಳ ಸ್ಥಿತಿ ಹೀಗೆಯೇ ಇದೆ. ಪ್ರತಿಭಟನೆ ಮಾಡಿದಾಗ ಬಂದು ಜಲ್ಲಿ ಹಾಕಿ ಅಥವಾ ವೈಟ್‌ಮಿಕ್ಸ್‌ ಹಾಕಿ ಹೋಗುತ್ತಾರೆ. ಆದರೆ, ದೊಡ್ಡ ವಾಹನಗಳು ಸಂಚರಿಸಿದ ತಕ್ಷಣ ಮತ್ತೆ ರಸ್ತೆ ಹಾಳಾಗುತ್ತದೆ. ರಸ್ತೆಯ ಒಂದು ಬದಿ ಒಳಚರಂಡಿ ಕಾಮಗಾರಿಗಾಗಿ ಅಗೆದರೆ, ಮತ್ತೊಂದು ಬದಿಯಲ್ಲಿ ಇನ್ನೊಂದು ಕಾಮಗಾರಿಗೆ ಅಗೆಯುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.

ಕುಡಿಯುವ ನೀರಿನ ಸಮಸ್ಯೆ:  ‘ವರ್ತೂರು ವಾರ್ಡ್‌ನ ಪಟೇಲ್‌ ಬಡಾವಣೆ ಮೊದಲ ಐದು ಕ್ರಾಸ್‌ಗಳಲ್ಲಿ ನಾಲ್ಕು ವರ್ಷಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಕೊಳವೆಬಾವಿ ಕೊರೆಸಿ ನೀರು ಸೌಲಭ್ಯ ಕಲ್ಪಿಸಿ ಎಂದರೆ ಅಂತರ್ಜಲ ಇಲ್ಲ. ನೀರು ಸಿಗುವುದಿಲ್ಲ ಎನ್ನುತ್ತಾರೆ. ಆದರೆ, ಆರನೇ ಕ್ರಾಸ್‌ನಿಂದ ಹತ್ತನೇ ಕ್ರಾಸ್‌ನವರೆಗೆ ನೀರು ಪೂರೈಸಲಾಗುತ್ತಿದೆ. ಅಂದರೆ, ಬಿಜೆಪಿ ಮುಖಂಡ ಮನೆಗಳ ಸುತ್ತ–ಮುತ್ತ ನೀರು ಪೂರೈಕೆ ಆಗುತ್ತಿದೆ. ಕಾಂಗ್ರೆಸ್‌ ಬೆಂಬಲಿಸುವ , ಬಿಜೆಪಿ ಬೆಂಬಲಿಸದವರ ಮನೆಗಳಿರುವ ಪ್ರದೇಶಗಳಲ್ಲಿ ನೀರು ಕೊಡುತ್ತಿಲ್ಲ’ ಎಂದು ಸ್ಥಳೀಯರೊಬ್ಬರು ದೂರಿದರು.

ಗುಂಡಿಯಿಂದ ಮಹಿಳೆ ಸಾವು 

ಬಳಗೆರೆ ಕ್ರಾಸ್‌ನಲ್ಲಿ ನಿತ್ಯ ಐದಾರು ಅಪಘಾತಗಳು ಆಗುತ್ತವೆ. ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರು ಮಗುವನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದರು. ರಸ್ತೆಯಲ್ಲಿ ಗುಂಡಿ ಇದ್ದುದರಿಂದ ಅದನ್ನು ತಪ್ಪಿಸಲು ಸ್ವಲ್ಪ ಬದಿಗೆ ಸ್ಕೂಟಿ ತಿರುಗಿಸಿದರು. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಸಾವಿಗೀಡಾದರು

– ಪ್ರದೀಪ್‌, ಪಟೇಲ್‌ ಬಡಾವಣೆ ನಿವಾಸಿ 

ರೋಗಿಗಳನ್ನು ಕರೆದೊಯ್ಯಲು ಭಯವಾಗುತ್ತದೆ

ನಾನು ತಿಂಗಳ ಹಿಂದೆ ಹೊಸ ಆಟೊ ಖರೀದಿಸಿದೆ. ಈ ರಸ್ತೆಯಲ್ಲಿ ಸಂಚರಿಸಿ, ಆಟೊ ಸಂಪೂರ್ಣ ಹಾಳಾಗಿ ಹೋಗಿದೆ. ರೋಗಿಗಳು ಬಾಡಿಗೆಗೆ ಬಂದರೆ ಕರೆದುಕೊಂಡು ಹೋಗಲು ಭಯವಾಗುತ್ತದೆ. ಗರ್ಭಿಣಿಯರೇನಾದರೂ ಆಟೊ ಏರಿದರೆ ಆಟೊದಲ್ಲಿಯೇ ಹೆರಿಗೆ ಆಗಿಬಿಡುತ್ತದೆ. ಅಪಘಾತಗಳು ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದೆ

– ಮಧುಸೂದನ್‌, ಆಟೊ ಚಾಲಕ 

ಪ್ರತಿಕ್ರಿಯಿಸಿ (+)