ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ನಾಯಕರಾಗಿ ಬಸವಣ್ಣನ ಹೆಸರು ಘೋಷಿಸಿ: ವಸಂತಕುಮಾರ್

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಒತ್ತಾಯ
Last Updated 7 ಜೂನ್ 2022, 20:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಬಸವಣ್ಣನವರ ಹೆಸರು ಘೋಷಿಸುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಇಲ್ಲಿ ಒತ್ತಾಯಿಸಿದರು.

ವಿ.ಸೋಮಣ್ಣ ಪ್ರತಿಷ್ಠಾನ ಹಾಗೂ ಬಸವ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ಚಿತ್ರದುರ್ಗದ ಮುರುಘರಾಜೇಂದ್ರ ಬೃಹ್ಮನ್ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಅಭಿನಂದನೆ ಹಾಗೂ ‘ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ’ ಎಂಬ ಡಿ.ಲಿಟ್‌ (ಡಾಕ್ಟರ್‌ ಆಫ್‌ ಲಿಟರೇಚರ್‌) ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕ ಮೇರು ಪ್ರಜ್ಞೆಯಾಗಿರುವ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡುವಂತೆ ಮುರುಘಾ ಶರಣರು ಸಹ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡುವಂತೆ ಕೋರಿದರು.

‘ಕೋವಿಡ್‌ಗೆ ಲಸಿಕೆ ಬಂದಿದೆ. ಮನಸ್ಸಿಗೆ ಹಾಗೂ ಸಮುದಾಯಕ್ಕೆ ಕಾಯಿಲೆ ಬಂದರೆ ಔಷಧ ನೀಡುವವರು ಯಾರು’ ಎಂದು ಪ್ರಶ್ನಿಸಿದ ಅವರು, ‘ಸಂತರ ಸಂದೇಶಗಳಲ್ಲಿ ಮನಸ್ಸಿನ ಕಾಯಿಲೆಗಳಿಗೆ ಪರಿಹಾರವಿದೆ. ಆದರೆ, ಸಂದೇಶಗಳನ್ನು ಯಾರೂ ಪಾಲಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಮ್ಮನ್ನೇ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ವಿಮರ್ಶೆಗೆ ಒಳಗಾಗದಿದ್ದರೆ ಕ್ರೂರಿ ಆಗುತ್ತೇವೆ. ಧರ್ಮವು ಕೇಡಲ್ಲ; ಅಮೃತ. ಧರ್ಮ, ಮತ ಎರಡೂ ಒಂದೇ ಎಂದು ಭಾವಿಸಿರುವುದೇ ಈ ಸಮಾಜದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಕಾರಣ. ನುಡಿದಂತೆಯೇ ಬದುಕಬೇಕು. ಅದು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮುರುಘಾ ಶರಣರು ಮಾತನಾಡಿ, ‘ಸಂತೋಷ, ಸಂಘರ್ಷ ಹಾಗೂ ಶೋಷಣೆಯಲ್ಲೂ ಸಾಹಿತ್ಯ ರಚನೆಯಾಗುತ್ತದೆ. ಅಂಬೇಡ್ಕರ್‌
ಅವರು ಶೋಷಣೆಯನ್ನೇ ಏಣಿ ಮಾಡಿಕೊಂಡು ಮೇಲೆದ್ದವರು. ಶೋಷಣೆಯ ನೋವು ಉಣ್ಣುತ್ತಲೇ ಸಂವಿಧಾನ ರಚಿಸಿ, ಎಲ್ಲರಿಗೂ ದಾರಿದೀಪವಾದರು’ ಎಂದು ಹೇಳಿದರು.

‘ಸಮಾಜದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಅಸಮಾನತೆಯಿದೆ. ಮಹನೀಯರು ಹೋರಾಟ ನಡೆಸಿದರೂ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ’ ಎಂದು ಹೇಳಿದರು.

ಸಾಹಿತಿ ಡಾ.ಓ.ಎಲ್‌.ನಾಗಭೂಷಣ್‌ ಮಾತನಾಡಿ, ‘ಬದಲಾವಣೆ ಎಂಬುದು ಮಾತಿಗಷ್ಟೆ ಸೀಮಿತವಾಗಿದೆ’ ಎಂದು ಹೇಳಿದರು.

‘ಮುರುಘಾ ಶರಣರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವರು. ಸಾಮಾಜಿಕ ಮೌಲ್ಯಗಳನ್ನು ಉಳಿಸಲು ಶ್ರಮಿಸುತ್ತಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಷಿ ಹೇಳಿದರು.

ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ ವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

*
ನಾನೂ ವೈಯಕ್ತಿಕ ಸಂಘರ್ಷ, ಸವಾಲುಗಳನ್ನು ಎದುರಿಸುತ್ತಿದ್ದೇನೆ. ಅದರಿಂದ ಶೀಘ್ರವೇ ಹೊರಬರುತ್ತೇನೆ.
-ಶಿವಮೂರ್ತಿ ಮುರುಘಾ ಶರಣರು, ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT