ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದ ದರ ನಿರಂತರ ಹೆಚ್ಚಳ: ತುಟ್ಟಿಯಾದ ತರಕಾರಿ

ಚಿಲ್ಲರೆ–ಸಗಟು ದರಗಳಲ್ಲಿ ವ್ಯತ್ಯಾಸ
Last Updated 19 ನವೆಂಬರ್ 2021, 16:57 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಲದಲ್ಲೇ ತರಕಾರಿ ಕೊಳೆಯುತ್ತಿದ್ದು, ಇತ್ತ ಮಾರುಕಟ್ಟೆಯಲ್ಲಿ ತರಕಾರಿಯೇ ಇಲ್ಲದೆ ದರ ಗಣನೀಯ ಏರಿಕೆಯಾಗಿದೆ. ಬಹುತೇಕ ತರಕಾರಿ ದರಗಳು ಕೆ.ಜಿಗೆ ₹50ರ ಗಡಿ ದಾಟಿವೆ.

ಕೆ.ಆರ್‌.ಮಾರುಕಟ್ಟೆಯ ಮಳಿಗೆಗಳಲ್ಲಿತರಕಾರಿ ದರಗಳು ಕಳೆದ ವಾರಕ್ಕಿಂತ ತುಸು ಹೆಚ್ಚಾಗಿವೆ. ಆದರೆ, ನಗರದ ವಿವಿಧ ಬಡಾವಣೆಗಳಲ್ಲಿನ ತರಕಾರಿ ಅಂಗಡಿಗಳಲ್ಲಿ ಟೊಮೆಟೊ, ಕ್ಯಾರೆಟ್‌ ಸೇರಿ ಹಲವು ತರಕಾರಿಗಳು ಕೆ.ಜಿಗೆ ₹80ರವರೆಗೆ ಮಾರಾಟ ಆಗುತ್ತಿವೆ.

ಬೆಳ್ಳುಳ್ಳಿ, ಶುಂಠಿ, ಬೀನ್ಸ್‌, ಬದನೆ, ಬೆಂಡೆಕಾಯಿ ದರಗಳು ವಾರದಿಂದ ನಿರಂತರವಾಗಿ ಬೆಲೆ ಏರಿಕೆ ಕಂಡಿದ್ದು, ಈರುಳ್ಳಿ, ಹೂವು ಕೋಸು, ಬೀಟ್‌ರೂಟ್‌, ಮೂಲಂಗಿ ಸೇರಿದಂತೆ ಹಲವು ತರಕಾರಿಗಳು ತಲಾ ಕೆ.ಜಿಗೆ ₹50ರಂತೆ ಶುಕ್ರವಾರ ಮಾರಾಟವಾದವು.

‘ಸಗಟು ಮಾರುಕಟ್ಟೆಗಳಲ್ಲೂ ದರಗಳು ಏರಿದ್ದು, ಇಲ್ಲಿಂದ ತರಕಾರಿ ಖರೀದಿಸುವ ಚಿಲ್ಲರೆ ವ್ಯಾಪಾರಿಗಳು ವಿಪರೀತವಾಗಿ ದರ ಏರಿಸಿ ಮಾರುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ದರ ಹೆಚ್ಚಳ ಅವರಿಗೂ ಅನಿವಾರ್ಯ. ಇದೇ ರೀತಿ ಮಳೆ ಮುಂದುವರಿದರೆ, ಮುಂದಿನ ವಾರವೂ ಬೆಲೆ ಮತ್ತಷ್ಟು ಏರಿಕೆಯಾಗಬಹುದು’ ಎನ್ನುತ್ತಾರೆ ದಾಸನಪುರ ಎಪಿಎಂಸಿ ತರಕಾರಿಸಗಟು ವ್ಯಾಪಾರಿ ಕುಮಾರ್.

‘ಗುರುವಾರ ಹಲವು ತರಕಾರಿಗಳ ಸಗಟು ಧಾರಣೆ ಏರಿಕೆಯಾಗಿತ್ತು. ಆದರೆ, ಶುಕ್ರವಾರ ಕೆಲವು ತರಕಾರಿಗಳ ದರ ದಿಢೀರ್‌ ಕಡಿಮೆಯೂ ಆಯಿತು. ವಾರದಿಂದ ಇದೇ ರೀತಿ ದರಗಳಲ್ಲಿ ಏರಿಳಿತ ಆಗುತ್ತಿದೆ. ಸದ್ಯ ಸಗಟು ದರವೇ ₹50 ಇದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಇದಕ್ಕಿಂತ ಹೆಚ್ಚಿನ ದರವೇ ಇರುತ್ತದೆ. ಮಳೆ ಬಿಡುವು ನೀಡಿದರೆ ಮಾತ್ರ ತರಕಾರಿಗಳು ಅಗ್ಗವಾಗಬಹುದು’ ಎಂದು ಹೇಳಿದರು.

ಕೆ.ಆರ್.ಮಾರುಕಟ್ಟೆಯ ತರಕಾರಿ ವರ್ತಕ ಹನುಮಂತ್, ‘ಮಳೆ ಸುರಿಯುತ್ತಿರುವುದರಿಂದ ತರಕಾರಿ ದರಗಳು ಏರಿವೆ. ಸಗಟು ದರಗಳೇ ಹೆಚ್ಚಾಗಿರುವುದರಿಂದ ಚಿಲ್ಲರೆ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ಗುಣಮಟ್ಟದ ತರಕಾರಿಯ ಅಭಾವ ಸೃಷ್ಟಿಯಾಗಿರುವುದರಿಂದ ಬೆಲೆಗಳು ಹೆಚ್ಚಾಗಿವೆ’ ಎಂದು ತಿಳಿಸಿದರು.

‘ಮನೆಯ ಹತ್ತಿರ ಬರುವ ತಳ್ಳುಗಾಡಿಗಳಲ್ಲಿ ತರಕಾರಿಗಳ ದರ ವಿಚಾರಿಸಿದಾಗ ಆಘಾತವಾಯಿತು. ಅನುಮಾನದಿಂದ ಕೆ.ಆರ್‌.ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಬಂದೆ. ಇಲ್ಲೂ ತರಕಾರಿ ದರಗಳು ಹೆಚ್ಚಳವಾಗಿವೆ. ಆದರೆ, ಮನೆಯ ಸಮೀಪದ ಮಳಿಗೆಗಳಿಗಿಂತ ಇಲ್ಲಿನ ದರಗಳು ಸ್ವಲ್ಪ ಕಡಿಮೆ ಇವೆ’ಎಂದು ಚಾಮರಾಜಪೇಟೆ ನಿವಾಸಿ ಎನ್.ಸುಶೀಲಾ ಹೇಳಿದರು.

‘ಮೊದಲು ₹100ಕ್ಕೆ ತರಹೇವಾರಿ ತರಕಾರಿ ಕೊಂಡೊಯ್ಯುತ್ತಿದ್ದೆವು. ಈಗ ಪ್ರತಿ ತರಕಾರಿ ದರ ₹50ರಿಂದ ₹80ರವರೆಗೆ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ತರಕಾರಿಯೂ ಈಗ ದುಬಾರಿ’ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆಯಿಂದ ಸೊಪ್ಪಿನ ದರಗಳೂ ಏರಿಕೆಯಾಗಿದ್ದು, ಪ್ರತಿ ಕಟ್ಟಿಗೆ ₹20ಕ್ಕಿಂತ ಹೆಚ್ಚಿನ ದರಗಳಲ್ಲಿ ಮಾರಾಟ ಆಗುತ್ತಿವೆ. ಹಣ್ಣಿನ ದರಗಳು ಸ್ಥಿರವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT