ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂಸಾ ಮೂರ್ತಿ ಮಹಾವೀರ

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಜಗತ್ತಿನ ಯಾವುದೇ ಧರ್ಮದಲ್ಲಿಯೂ ಹಿಂಸೆಯನ್ನು ಪ್ರೋತ್ಸಾಹಿಸಿಲ್ಲ. ಹಿಂಸೆಯ ಬೋಧನೆ ಸಹ ಕಂಡುಬರುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಕೊಲೆಗಳಂತಹ ಹೀನಾಯ ಕೃತ್ಯಗಳು ಕೆಲವೆಡೆ ಕಂಡು ಬರುತ್ತಿರುವುದು ವಿಪರ್ಯಾಸ. ರಾಜ್ಯ, ಸಿರಿ, ಸಂಪತ್ತು ಹಾಗೂ ಚಕ್ರವರ್ತಿಯ ಪದವಿಗಾಗಿ ಯುದ್ಧವೇ ಅನಿವಾರ್ಯವೆನ್ನುವ ಪ್ರಸಂಗದಲ್ಲಿಯೂ ಸಹ ಜೀವಹಿಂಸೆ ಮತ್ತು ಆಸ್ತಿ ಪಾಸ್ತಿಗಳ ಹಾನಿಯಾಗದಂತೆ ಅಹಿಂಸಾತ್ಮಕ ಯುದ್ಧವನ್ನು ಮಾಡಬಹುದು ಎಂದು ಜಗತ್ತಿಗೇ ಭರತ, ಬಾಹುಬಲಿಯವರು ತೋರಿಸಿಕೊಟ್ಟಿದ್ದಾರೆ. ಅವರಿಬ್ಬರ ನಡುವೆ ನಡೆದ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧಗಳಲ್ಲಿ ಬಾಹುಬಲಿಯು ಜಯಶಾಲಿಯಾಗಿ ಚಕ್ರೇಶ್ವರ ಪದವಿಯನ್ನು ತನ್ನದಾಗಿಸಿಕೊಂಡರೂ ಸಹ ಭರತನಿಗೆ ಎಲ್ಲವನ್ನೂ ಅರ್ಪಿಸಿ ತಾನು ಸತ್ಯ, ಅಹಿಂಸೆ, ತ್ಯಾಗ ಮತ್ತು ಮೈತ್ರಿಗಾಗಿ ದಿಗಂಬರ ಮುನಿಯಾಗಿ ತಪಸ್ಸಿಗೆ ನಡೆಯುತ್ತಾನೆ. ಜಗದ್ವಂದ್ಯನಾದ ಬಾಹುಬಲಿಯು ಇದೇ ದಿವ್ಯ ಸಂದೇಶವನ್ನು ಸಾರುತ್ತ ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ನಿಂತಿರುವ ಆ ಮಹಾಮಹಿಮನಿಗೆ ಇತ್ತೀಚೆಗಷ್ಟೇ ಮಹಾಮಜ್ಜನ ಮಹೋತ್ಸವವು ನಡೆದು, ಅವನ ಸಂದೇಶಗಳು ಅಭಿಷೇಕದ ದ್ರವ್ಯಗಳೊಂದಿಗೆ ವಿಂಧ್ಯಗಿರಿಯ ಕಡೆಯಿಂದ ಬೀಸಿ ಬರುತ್ತಿರುವ ಗಾಳಿಯೊಂದಿಗೆ ತೇಲಿ ಬಂದು ನಮ್ಮನ್ನು ಎಚ್ಚರಿಸುತ್ತಿರುವಂತೆ ಈಗಲೂ ಭಾಸವಾಗುತ್ತಿದೆ. ಅವಿನ್ನೂ ನಮ್ಮ ಮನದಿಂದ ಮಾಸುವ ಮುನ್ನವೇ ಈಗ ಜೈನ ಧರ್ಮದ ವರ್ತಮಾನ ಕಾಲದ 24ನೇ ತೀರ್ಥಂಕರ ಮಹಾವೀರರ ಜಯಂತ್ಯುತ್ಸವವು ಬಂದಿದೆ.

ಸತ್ಯ, ಅಹಿಂಸೆ, ಅಪರಿಗ್ರಹ, ಅಚೌರ್ಯ ಮತ್ತು ಬ್ರಹ್ಮಚರ್ಯಗಳೆಂಬ ಪಂಚವ್ರತಗಳನ್ನಾಗಿ ಮಹಾವೀರ ಬೋಧಿಸಿದ್ದು ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ್ದಾರೆ.

ಜೈನ ಧರ್ಮದ ತತ್ವಸಿದ್ಧಾಂತಗಳು ಜಗತ್ತಿನ ಎಲ್ಲ ಧರ್ಮಗಳಿಗಿಂತಲೂ ಅತ್ಯಂತ ಕಠಿಣವೆನಿಸುತ್ತಿದ್ದರೂ ಸಹ, ಅವುಗಳನ್ನು ಎರಡು ವಿಧವಾಗಿ ಬೋಧಿಸಿ, ಎಲ್ಲರಿಗೂ ನಿಕಟವಾಗುವಂತೆ ಅಣುವ್ರತಹಾಗೂ ಮಹಾವ್ರತಗಳನ್ನಾಗಿ ತಿಳಿಸಿರುವುದು ಒಂದು ಜೈನ ಧರ್ಮದ ವಿಶೇಷ.

ಅಂದರೆ ಶ್ರಾವಕ (ಸಂಸಾರಿ) ಆದವನು ಪಂಚವ್ರತಗಳನ್ನು ಸ್ಥೂಲವಾಗಿ ಆಚರಣೆಯಲ್ಲಿ ತಂದುಕೊಂಡು ಸಾಧನೆಯ ಮೆಟ್ಟಿಲನ್ನು ಏರುತ್ತಾ ಹೋಗಬಹುದು. ಇಲ್ಲಿ ಸಾಧಕನಿಗೆ ಹನ್ನೊಂದು ನೆಲೆಗಳನ್ನು ಬೋಧಿಸಲಾಗಿದ್ದು, ಕೊನೆಯ ಹಂತದಲ್ಲಿ ಉತ್ತಮ ಶ್ರಾವಕ ಸ್ಥಾನಕ್ಕೇರಿ, ತ್ಯಾಗಿ ಧರ್ಮ ಪರಿಪಾಲನೆಯ ಸಾಮರ್ಥ್ಯ ಹೊಂದಿದವನು ಪಂಚವ್ರತಗಳನ್ನು ಮಹಾವ್ರತಗಳನ್ನಾಗಿ ಆಚರಿಸಲಾರಂಭಿಸುತ್ತಾನೆ. ಮಹಾವ್ರತಿಯಾದ ತ್ಯಾಗಿಯ ಆಚರಣೆಗಳು ಇನ್ನೂ ಕಠೋರವಾಗುತ್ತವೆ. ಕರ್ಮಬಂಧನದಿಂದ ಬಿಡುಗಡೆ ಪಡೆದು ಆತ್ಮ ಪರಿಶುದ್ಧತೆಯೊಂದಿಗೆ ಮುಕ್ತಿ ಹೊಂದುವುದು ಪರಮಗುರಿಯಾಗಿದೆ.

ಹಾಗೆಯೇ, ಅನೇಕಾಂತವಾದ ಎಂದು ಹೇಳಲಾಗುವ ಸಿದ್ಧಾಂತದ ಪ್ರಕಾರ, ‘ನಾನು ತಿಳಿದುಕೊಂಡಿರುವುದೇ ಸರಿ, ಅದುವೇ ಕೊನೆಯ ಸತ್ಯ, ಮತ್ತು ಅದೇ ಅಂತಿಮ’ ಎನ್ನುವ ಅಹಂಕಾರದ ವಾದಕ್ಕೆ ಇಲ್ಲಿ ಸ್ಥಾನವಿಲ್ಲ. ಅನ್ಯರ ಹಾಗೂ ಅನ್ಯಧರ್ಮೀಯರ ವಿಚಾರ, ದೃಷ್ಟಿದರ್ಶನಗಳಿಗೂ ಗೌರವ ನೀಡಬೇಕು ಎನ್ನುವ ವಿಶಾಲ ಹಾಗೂ ಸಮತಾ ಭಾವ ಅನೇಕಾಂತದಲ್ಲಿದೆ. ಹೀಗೆ ಜೈನ ಸಿದ್ಧಾಂತದಲ್ಲಿ ಇದು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು ಪ್ರೀತಿ, ಪ್ರೇಮ ಹಾಗೂ ಸಹಬಾಳ್ವೆಗೆ ಸ್ಥಾನವಿದೆ.

ಜೈನ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಅದರ ತತ್ವ ಸಿದ್ಧಾಂತಗಳ ಪ್ರಖರತೆಯು ಬೆಳಗಿದ್ದು ಭಗವಾನ ಮಹಾವೀರರ ಕಾಲದಲ್ಲಿಯೇ ಎಂದು ಹೇಳಬಹುದು. ಕ್ರಿ.ಶ.ಪೂ. 599ರಲ್ಲಿ ಬಿಹಾರದ ಕುಂಡಲಪುರದಲ್ಲಿ ಚಕ್ರವರ್ತಿ ಸಿದ್ಧಾರ್ಥ ಮತ್ತು ಮಹಾರಾಣಿ ತ್ರಿಶಲಾ ಇವರ ಪುತ್ರನಾಗಿ ಮಹಾವೀರರ ಜನನ. ವರ್ಧಮಾನ, ಮಹಾವೀರ, ವೀರನಾಥ, ಸನ್ಮತಿ ಹೀಗೆ ಅನೇಕ ಹೆಸರುಗಳಿಂದ ಪ್ರವರ್ಧಮಾನಕ್ಕೆ ಬಂದ ಮಹಾವೀರರು ಚಿಕ್ಕಂದಿನಲ್ಲಿಯೇ ಅನೇಕ ಲೀಲೆಗಳನ್ನು ತೋರಿಸಿದರು. ಆದರೆ ಬಾಲ್ಯದಿಂದಲೇ ಅಲೌಕಿಕದೆಡೆಗೆ ಒಲುಮೆ ತೋರುತ್ತ, ರಾಜಭೋಗ, ಸೇವಕರ ಸೇವೆ, ಸಿರಿಸಂಪತ್ತು ಹಾಗೂ ಬಾಹ್ಯ ಸುಖದತ್ತ ಆಕರ್ಷಿತರಾಗದೇ ಅವುಗಳಿಂದ ನಿರ್ಲಿಪ್ತರಾಗಿದ್ದರು.

ಮಹಾವೀರರು ತಾರುಣ್ಯಾವಸ್ಥೆಗೆ ಬಂದಾಗ, ‘ಸಂಸಾರ ಬಂಧನಕ್ಕೆ ಕಾರಣವಾಗುವ ವಿವಾಹ ನನಗೆ ಬೇಡ. ಅವೆಷ್ಟೋ ಭವಗಳನ್ನು ಕಳೆದ ನಂತರ ಈಗ ನಾನು ಮಾನವ ಜೀವಿಯಾಗಿ ತಮ್ಮ ಪುಣ್ಯ ಗರ್ಭದಲ್ಲಿ ಜನಿಸಿರುತ್ತೇನೆ. ಈಗಲಾದರೂ ನನ್ನ ಮೋಕ್ಷ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಸಮ್ಯಕ್‌ ತತ್ವದಿಂದ ಲೋಕಕಲ್ಯಾಣ ಹಾಗೂ ಆತ್ಯಕಲ್ಯಾಣದ ಗುರಿಯು ನನ್ನ ಮುಂದಿವೆ. ಅದಕ್ಕಾಗಿ ನಾನು ಅಣಿಯಾಗಬೇಕಾಗಿದೆ’ ಎಂದು ಮಹಾವೀರರು ನುಡಿದರು.

ಕ್ರಿ.ಶ.ಪೂ. 569ನೆಯ ಮಾರ್ಗಶಿರ ಮಾಸದ ಕೃಷ್ಣಪಕ್ಷದಲ್ಲಿ ದಶಮಿ ತಿಥಿಯ ದಿನದಂದು, ಮಹಾವೀರರು ಸನ್ಯಾಸಿ ದೀಕ್ಷೆ ಪಡೆಯಲು ಕಾಡಿನೆಡೆಗೆ ನಡೆದರು. ಕಾಲಾಂತರದಲ್ಲಿ ಮಹಾವೀರರು ದೇಶದಲ್ಲೆಡೆ ವಿಹಾರಗೈದು ಶ್ರೇಣಿಕ, ಚೇಟಕರಂತಹ ಅನೇಕ ರಾಜ –ಮಹಾರಾಜರನ್ನು ತಮ್ಮ ಶಿಷ್ಯ ಪಡೆಯಲ್ಲಿ ಹೊಂದಿ ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಬೋಧಿಸಿದರು.

‘ಆತ್ಮ ಪರಿಶೋಧನೆಯ ಸಾಧನೆಯಿಂದ ಪರಿಶುದ್ಧ ಆತ್ಮ ಪರಮಾತ್ಮನಾಗುತ್ತಾನೆ. ಆದ್ದರಿಂದ ನಿನ್ನೊಳಗಿನ ಆತ್ಮವನ್ನು ಅರಿಯಲು ನೀನು ಸಾಧನೆ ಮಾಡು. ನಾನು ಎಂದುಕೊಂಡಿರುವ ಈ ದೇಹ ನಾನಲ್ಲ, ದೇಹವೇ ಬೇರೆ, ಆತ್ಮವೇ ಬೇರೆ ಎಂದು ಭೇದವಿಜ್ಞಾನ ಬೋಧಿಸಿದರು. ಹೀಗೆ ಅವರ ತತ್ವಸಿದ್ಧಾಂತಗಳು ಜನರ ಮನಸ್ಸಿಗೆ ಹತ್ತಿರವಾಗುತ್ತಿದ್ದಂತೆ ಅವು ಜನರ ಮನದಾಳದಲ್ಲಿ ಬೇರೂರಿದವು. ಮಹಾವೀರರು ಬೋಧನಾಮೃತವನ್ನು ದೇಶದೆಲ್ಲಡೆ ಹರಡಿತು. ತಮ್ಮ 72ನೆಯ ವಯಸ್ಸಿನಲ್ಲಿ ಸಂಪೂರ್ಣ ಅನ್ನಾಹಾರವನ್ನು ತ್ಯಾಗ ಮಾಡಿ ಶುಕ್ಲಧ್ಯಾನದಲ್ಲಿ ತೊಡಗಿದರು. ಅಷ್ಟಕರ್ಮಗಳನ್ನು ದಹಿಸಿದ ಅವರು ಕ್ರಿ.ಶ.ಪೂ. 527ನೆಯ ಕಾರ್ತೀಕ ಮಾಸದ ಕೃಷ್ಣಪಕ್ಷ ಚತುರ್ದಶಿಯ ರಾತ್ರಿಯಲ್ಲಿ ಮೋಕ್ಷ ಪದವಿಯನ್ನು ಪಡೆದರು. ಅಂದಿನ ದಿನವನ್ನು ಜೈನರು ಶ್ರದ್ಧಾಭಕ್ತಿಯಿಂದ ಒಂದು ವಿಶೇಷ ಪರ್ವವನ್ನಾಗಿ ಆಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT