ಕಾರಿನಲ್ಲಿ ಬಂದು ವಾಹನ ಕಳ್ಳತನ!

7
ಚಿಕನ್ ಅಂಗಡಿ ಮಾಲೀಕ ಸೇರಿ ಮೂವರ ಬಂಧನ

ಕಾರಿನಲ್ಲಿ ಬಂದು ವಾಹನ ಕಳ್ಳತನ!

Published:
Updated:

ಬೆಂಗಳೂರು: ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಕಾರು–ಸ್ಕೂಟರ್‌ಗಳನ್ನು ಕದಿಯಲು ಶುರು ಮಾಡಿದ್ದ ಮೂವರು ಸ್ನೇಹಿತರು ಕೆಂಗೇರಿ ಪೊಲೀಸರ ಅತಿಥಿಗಳಾಗಿದ್ದಾರೆ.

ದೊಡ್ಡಬಸ್ತಿಯ ಸುನೀಲ್ ಕುಮಾರ್, ಹರಿಪ್ರಸಾದ್ ಹಾಗೂ ರಾಜಶೇಖರ್ ಬಂಧಿತರು. ಆರೋಪಿಗಳಿಂದ ಎರಡು ಕಾರು, ಐದು ಸ್ಕೂಟರ್‌ಗಳು ಹಾಗೂ ಕಾರಿನ ಎಂಟು ಚಕ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುನೀಲ್, ಭುವನೇಶ್ವರಿನಗರ 2ನೇ ಹಂತದಲ್ಲಿ ಮಾಂಸ ಮಾರಾಟದ ಅಂಗಡಿ ಇಟ್ಟುಕೊಂಡಿದ್ದ. ಹರಿಪ್ರಸಾದ್ ಒಂದೂವರೆ ವರ್ಷದಿಂದ ಆತನ ಬಳಿಯೇ ಕೆಲಸ ಮಾಡುತ್ತಿದ್ದ. ರಾಜಶೇಖರ್, ಅಂಗಡಿಗಳಿಗೆ ಕುಡಿ ಯುವ ನೀರಿನ ಕ್ಯಾನ್‌ಗಳನ್ನು ಪೂರೈಕೆ ಮಾಡುತ್ತಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಮೂವರೂ ಸೇರಿ ಕಳ್ಳತನ ಕೃತ್ಯಕ್ಕೆ ಇಳಿದಿದ್ದರು.

ರಾತ್ರಿ ವೇಳೆ ಕಾರಿನಲ್ಲಿ ನಗರ ಸುತ್ತುತ್ತಿದ್ದ ಆರೋಪಿಗಳು, ಹ್ಯಾಂಡಲ್ ಲಾಕ್ ಮುರಿದು ಸ್ಕೂಟರ್‌ಗಳನ್ನು ಕದಿಯುತ್ತಿದ್ದರು. ಅಲ್ಲದೆ, ನಕಲಿ ಕೀಗಳನ್ನು ಬಳಸಿ ಕಾರುಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು. ಒಂದು ವೇಳೆ ಲಾಕ್ ತೆರೆಯಲು ಸಾಧ್ಯವಾಗದಿದ್ದರೆ, ಆ ಕಾರಿನ ಚಕ್ರಗಳನ್ನೇ ಬಿಚ್ಚಿಕೊಳ್ಳುತ್ತಿದ್ದರು. ಕದ್ದ ಮಾಲನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಮೋಜಿನ ಜೀವನ ನಡೆಸುತ್ತಿದ್ದರು. ಇವರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಒಂದು ಹಾಗೂ ಕೆಂಗೇರಿ ಠಾಣೆಯಲ್ಲಿ ಆರು ಪ್ರಕರಣಗಳು ದಾಖಲಾಗಿದ್ದವು.

’ಸೆ.5ರ ರಾತ್ರಿ ದೊಡ್ಡಬಸ್ತಿ ಮುಖ್ಯರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಆರೋಪಿಗಳೂ ಅದೇ ರಸ್ತೆಯಲ್ಲಿ ಬಂದರು. ಅವರ ಕಾರಿನೊಳಗೆ ಎಂಟು ಚಕ್ರಗಳು ಇದ್ದುದರಿಂದ ಸಂಶಯ ವ್ಯಕ್ತವಾಯಿತು. ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ಇವೆಲ್ಲ ಕಳವು ಮಾಡಿದ ಚಕ್ರಗಳು. ಮಾರಲು ಹೊರಟಿದ್ದೆವು’ ಎಂದು ಹೇಳಿಕೆ ಕೊಟ್ಟರು. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

30 ಕಾರುಗಳ ಸ್ಟೀರಿಯೋ ಕದ್ದಿದ್ದ ಗ್ಯಾಂಗ್!
ಮೈಸೂರಿನಿಂದ ರಾತ್ರಿ ವೇಳೆ ನಗರಕ್ಕೆ ಬಂದು 30 ಕಾರುಗಳ ಗಾಜು ಒಡೆದು ಸ್ಟೀರಿಯೊಗಳನ್ನು ಕಳ್ಳತನ ಮಾಡಿದ್ದ ಐದು ಮಂದಿಯ ಗ್ಯಾಂಗ್ ಕೆ.ಪಿ.ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದೆ.

ಮೈಸೂರಿನ ನಜೀರ್ ಪಾಷಾ, ರಿಯಾಜ್ ಪಾಷಾ, ಸಲೀಂ ಪಾಷಾ, ಅಫ್ರೋಜ್ ಪಾಷಾ ಹಾಗೂ ಬೆಂಗಳೂರಿನ ಗಂಗೊಂಡನಹಳ್ಳಿ ನಿವಾಸಿ ಸಜ್ಜಾದ್ ಅಹಮದ್ ಎಂಬುವರನ್ನು ಬಂಧಿಸಿ, ₹ 7 ಲಕ್ಷ ಮೌಲ್ಯದ ಸ್ಟೀರಿಯೊಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

’ರಾಜಾಜಿನಗರದಲ್ಲಿ 11, ವಿಜಯನಗರದಲ್ಲಿ 7, ನಂದಿನಿ ಲೇಔಟ್‌ನಲ್ಲಿ 4, ಬಸವೇಶ್ವರನಗರದಲ್ಲಿ 2, ಅನ್ನಪೂರ್ಣೇಶ್ವರಿನಗರದಲ್ಲಿ 2... ಹೀಗೆ, ವಿವಿಧ ಠಾಣೆಗಳಲ್ಲಿ ಇವರ ವಿರುದ್ಧ 30 ಪ್ರಕರಣಗಳು ದಾಖಲಾಗಿದ್ದವು. ಸರಣಿ ಕೃತ್ಯದಿಂದ ವಾಹನಗಳ ಮಾಲೀಕರು ಕಂಗಾಲಾಗಿದ್ದರು. ಆರೋಪಿಗಳ ಪತ್ತೆಗೆ ವಿಜಯನಗರ ಉಪವಿಭಾಗದ ಎಸಿಪಿ ಪರಮೇಶ್ವರ ಹೆಗಡೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸ ಲಾಗಿತ್ತು. ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಆಧರಿಸಿ ಸಿಬ್ಬಂದಿ ಆರೋಪಿ ಗಳನ್ನು ಪತ್ತೆ ಮಾಡಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !