ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸಸೌಧದಲ್ಲಿ ಅಕ್ರಮ ಪಾರ್ಕಿಂಗ್‌ಗೆ ಕಡಿವಾಣ

Last Updated 21 ಜೂನ್ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವಾಲಯದ ಕೆಲವು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸ್ವಂತ ವಾಹನಗಳನ್ನು ವಿಕಾಸಸೌಧದಲ್ಲಿ ತಿಂಗಳುಗಟ್ಟಲೆ ಪಾರ್ಕಿಂಗ್‌ ಮಾಡುವ ಪರಿಪಾಟಕ್ಕೆ ಕಡಿವಾಣ ಬಿದ್ದಿದೆ.

‘ರಾತ್ರಿ ವೇಳೆಯಲ್ಲಿ ಯಾವುದೇ ಸ್ವಂತ ವಾಹನ ಪಾರ್ಕಿಂಗ್‌ ಮಾಡಿದ್ದರೆ ತೆರವುಗೊಳಿಸಲು ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಲಾಗುವುದು’ ಎಂದು ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

‘ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಂತ ಬಳಕೆಗೆ ಎರಡು ಅಥವಾ ಮೂರು ವಾಹನಗಳನ್ನು ಇಟ್ಟುಕೊಂಡಿರುತ್ತಾರೆ. ಮನೆಯ ಆವರಣದಲ್ಲಿ ಅಷ್ಟು ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚುವರಿ ವಾಹನಗಳನ್ನು ವಿಕಾಸಸೌಧದ ತಳಮಹಡಿ –1 ಹಾಗೂ –3 ರಲ್ಲಿ ತಂದು ನಿಲ್ಲಿಸುವ ಪರಿಪಾಟ ಬೆಳೆದಿದೆ’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

‘ಇದರಿಂದಾಗಿ ಸಾಕಷ್ಟು ಸಂದರ್ಭದಲ್ಲಿ ಸರ್ಕಾರಿ ವಾಹನಗಳನ್ನು ನಿಲ್ಲಿಸಲು ಮತ್ತು ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಕಷ್ಟವಾಗಿದೆ. ಕೆಲವರಂತೂ ಹಲವು ತಿಂಗಳುಗಳಿಂದ ವಾಹನಗಳನ್ನು ನಿಲ್ಲಿಸಿದ್ದಾರೆ. ವಾಹನಗಳ ಮೇಲೆ ಒಂದು ಇಂಚು ದೂಳು ಕೂತಿದ್ದರೂ ತೆಗೆಯುತ್ತಿಲ್ಲ. ಸ್ವಂತ ವಾಹನಗಳನ್ನು ತೆರವುಗೊಳಿಸುವ ಉದ್ದೇಶದಿಂದ ಈ ಸುತ್ತೋಲೆ ಹೊರಡಿಸಲಾಗಿದೆ’ ಮೂಲಗಳು ಹೇಳಿವೆ.

ಸುತ್ತೋಲೆಯಲ್ಲಿ ಏನಿದೆ: ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ–ನೌಕರರು ತಮ್ಮ ಸ್ವಂತ ವಾಹನವನ್ನು ವಿಕಾಸಸೌಧದ ವಾಹನ ನಿಲುಗಡೆ ತಾಣದಲ್ಲಿ ಹಲವು ದಿನಗಳಿಂದ ನಿಲ್ಲಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವಿಕಾಸಸೌಧ ಕಟ್ಟಡ ಹಿತದೃಷ್ಟಿಯಿಂದ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ಇನ್ನು ಮುಂದೆ ಸ್ವಂತ ವಾಹನಗಳನ್ನು ರಾತ್ರಿ ವೇಳೆ ನಿಲ್ಲಿಸುವಂತಿಲ್ಲ. ರಾತ್ರಿ ವೇಳೆಯಲ್ಲಿ ಯಾವುದೇ ವಾಹನ ವಿಕಾಸಸೌಧದ ಕಟ್ಟಡದಲ್ಲಿ ಕಂಡುಬಂದರೆ, ಪೊಲೀಸರನ್ನು ಕರೆಸಿ ತೆರವುಗೊಳಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT