ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ಚಿಕಿತ್ಸಾಲಯ: ಘೋಷಣೆ 100, 20ಕ್ಕೆ ಆದೇಶ

Last Updated 14 ಫೆಬ್ರುವರಿ 2023, 5:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 100 ಪಶು ಚಿಕಿತ್ಸಾಲಯಗಳನ್ನು ಆರಂಭಿಸುವುದಾಗಿ 2022ರ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಮತ್ತೊಂದು ಬಜೆಟ್ ಮಂಡಿಸುವ ಹೊತ್ತಿಗೆ ಕೇವಲ 20 ಚಿಕಿತ್ಸಾಲಯಗಳನ್ನು ಆರಂಭಿಸಲು ಆದೇಶ ಹೊರಡಿಸಲಾಗಿದೆ.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಬಸವಂತರಾಯ ದೊಡ್ಡಗೌಡರ ಪ್ರಶ್ನೆಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ನೀಡಿದ ಉತ್ತರದಲ್ಲಿ ಈ ವಿವರಗಳಿವೆ. 20 ಚಿಕಿತ್ಸಾಲಯ ಆರಂಭಕ್ಕೆ ಕಳೆದ ಮೇ ತಿಂಗಳಿನಲ್ಲಿ ಆದೇಶ ಹೊರಡಿಸಲಾಗಿದೆ. 30 ಚಿಕಿತ್ಸಾಲಯಗಳನ್ನು ಪ್ರಾರಂಭಿಸುವ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ. 50 ಚಿಕಿತ್ಸಾಲಯಗಳನ್ನು ಆರಂಭಿಸಲು ಕ್ರಮವಹಿಸಲಾಗಿದೆ ಎಂದು ಅವರು ವಿವರಿಸಿದರು.

ದೇವಸ್ಥಾನ:ಸಿಎಂ ತವರು ಜಿಲ್ಲೆಗೆ ಹೆಚ್ಚು ಮೊತ್ತ

ಮುಜರಾಯಿ ಮತ್ತು ಮುಜರಾಯಿಯೇತರ ದೇವಸ್ಥಾನಗಳ ಅಭಿವೃದ್ಧಿಗೆ ನೀಡಿದ ಅನುದಾನದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ಬೆಳಗಾವಿ ಬಿಟ್ಟರೆ ಅತಿ ಹೆಚ್ಚಿನ ಪಾಲನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿ ಪಡೆದಿದೆ.

ಬಿಜೆಪಿಯ ಹರತಾಳು ಹಾಲಪ್ಪ ಅವರ ಪ್ರಶ್ನೆಗೆ ಸಚಿವೆ ಶಶಿಕಲಾ ಜೊಲ್ಲೆ ನೀಡಿದ ಉತ್ತರದಲ್ಲಿ ಈ ವಿವರಗಳಿವೆ.

2022ರಲ್ಲಿ ಒಟ್ಟು ₹422 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಬೆಳಗಾವಿ ಜಿಲ್ಲೆಗೆ ₹69.62 ಕೋಟಿಯಷ್ಟು ಬೃಹತ್ ಮೊತ್ತ ನೀಡಲಾಗಿದೆ. ಹಾವೇರಿ ಜಿಲ್ಲೆಗೆ ₹38.75 ಕೋಟಿ ನೀಡಲಾಗಿದೆ. ಕಲಬುರಗಿಗೆ ₹26.32 ಕೋಟಿ, ದಕ್ಷಿಣ ಕನ್ನಡಕ್ಕೆ ₹24.55 ಕೋಟಿ, ತುಮಕೂರಿಗೆ ₹23.04 ಕೋಟಿ, ಬಾಗಲಕೋಟೆಗೆ ₹20.94, ಉತ್ತರಕನ್ನಡಕ್ಕೆ ₹19.38 ಕೋಟಿ ಹಾಗೂ ಚಿಕ್ಕಮಗಳೂರಿಗೆ ₹19.52 ಕೋಟಿ ದಕ್ಕಿದೆ.

ಇದಲ್ಲದೇ, ಪರಿಶಿಷ್ಟ ಜಾತಿ ಉಪಯೋಜನೆಯಡಿ ಖರ್ಚಾಗದ ₹19.38 ಕೋಟಿ ಹಾಗೂ ಗಿರಿಜನ ಉಪಯೋಜನೆಯಡಿ ಖರ್ಚಾಗದ ₹30.36 ಕೋಟಿಯನ್ನೂ ಈ ಸಾಲಿನಲ್ಲಿ ಒದಗಿಸಲಾಗಿದೆ.

ಎತ್ತು, ಕುರಿ, ಹಂದಿಗೂ ವಿಮೆ

ಹಾಲುಕೊಡುವ ರಾಸುಗಳಿಗೆ ನೀಡುತ್ತಿರುವ ವಿಮಾ ಸೌಲಭ್ಯವನ್ನು ಎತ್ತು, ಹೋರಿ, ಕೋಣ, ಕುರಿ, ಮೊಲ ಹಾಗೂ ಹಂದಿಗಳಿಗೂ ವಿಸ್ತರಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.

ಕಾಂಗ್ರೆಸ್‌ನ ಯು.ಟಿ. ಖಾದರ್ ಪ್ರಶ್ನೆಗೆ ಉತ್ತರ ನೀಡಿದ ಅವರು, ವಿಮಾ ಸಂಸ್ಥೆ ಗುರುತಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ₹14 ಕೋಟಿ ಅನುದಾನವನ್ನೂ ನೀಡಲಾಗಿದೆ. ಮಲೆನಾಡು ಗಿಡ್ಡತಳಿಯ ರಾಸುಗಳನ್ನು ವಿಮೆಗೆ ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಆಡಳಿತ ಸೌಧ: ತಾರತಮ್ಯಕ್ಕೆ ಆಕ್ಷೇಪ

‘ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಎರಡು ತಾಲ್ಲೂಕುಗಳಿಗೆ ಆಡಳಿತಸೌಧ, ಉಪನೋಂದಣಾಧಿಕಾರಿ ಕಚೇರಿ ನೀಡುತ್ತೀರಿ. ಕೆಲವು ಕ್ಷೇತ್ರಗಳಿಗೆ ಒಂದು ಸೌಧಕ್ಕೂ ಅನುದಾನ ನೀಡುವುದಿಲ್ಲ’ ಎಂದು ಕಾಂಗ್ರೆಸ್‌ನ ಶಿವಾನಂದ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, 2017ರಲ್ಲೇ ಹೊಸ ತಾಲ್ಲೂಕುಗಳನ್ನು ಘೋಷಿಸಿದರೂ ಈವರೆಗೂ ಆಡಳಿತಸೌಧಕ್ಕೆ ಅನುದಾನ ನೀಡಿಲ್ಲ. ತಮ್ಮ ಪಕ್ಷದ ಬಬಲೇಶ್ವರ ಕ್ಷೇತ್ರದಲ್ಲಿ ಬಬಲೇಶ್ವರ, ತಿಕೋಟಾ ಎರಡು ತಾಲ್ಲೂಕುಗಳಿಗೆ ಹೊಸದಾಗಿ ಆಡಳಿತ ಸೌಧ ನಿರ್ಮಿಸಲಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್. ಅಶೋಕ, ‘ಕಾಂಗ್ರೆಸ್‌ ಶಾಸಕ, ನಿಮ್ಮ ಸ್ನೇಹಿತರಾದ ಎಂ.ಬಿ. ಪಾಟೀಲರನ್ನೇ ಕೇಳಿ. ನಿಡಗುಂದಿ, ಕೊಲ್ಹಾರ ತಾಲ್ಲೂಕುಗಳಲ್ಲಿ ಆಡಳಿತ ಸೌಧ ನಿರ್ಮಿಸಲು ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆರ್ಥಿಕ ಇಲಾಖೆ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ. ಇಲಾಖೆ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಯಾರಿಗೆ ಕೊಟ್ಟಿದ್ದೀರಿ ಎಂಬುದಲ್ಲ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಎರಡು ಕಚೇರಿಗಳನ್ನು ನೀಡುವ ಬದಲು, ನಮಗೂ ಒಂದು ಕೊಡಿ’ ಎಂದು ಶಿವಾನಂದ ಪಾಟೀಲ ಹೇಳಿದರು. ಹೊಸದಾಗಿ ರಚನೆಯಾದ ಕೆಜಿಎಫ್‌, ಮೂಡಬಿದರೆ, ಕಡಬ, ಮೂಲ್ಕಿ, ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ, ಕುರುಗೋಡು, ಕಂಪ್ಲಿ, ದಾಂಡೇಲಿಗಳಲ್ಲಿ ಆಡಳಿತ ಸೌಧ ನಿರ್ಮಿಸಲಾಗುತ್ತಿದೆ ಎಂದು ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT