ಭಾನುವಾರ, ಜುಲೈ 3, 2022
25 °C
ಕಿರಿಯ ವೈದ್ಯರಿಗೆ ಹೆಚ್ಚಿದ ಕೋವಿಡ್ ಕೆಲಸದ ಒತ್ತಡ

ವಿಕ್ಟೋರಿಯಾ: ಸೇವೆಗೆ ಹಿರಿಯ ವೈದ್ಯರ ಹಿಂದೇಟು

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ವಿಕ್ಟೋರಿಯಾ ಆಸ್ಪತ್ರೆ–ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಸೇವೆಗೆ ಹಿರಿಯ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕಿರಿಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೇಲಿನ ಒತ್ತಡ ಹೆಚ್ಚಾಗಿದೆ.

ಅತ್ಯಂತ ಹಳೆಯ ಆಸ್ಪತ್ರೆಯಲ್ಲಿ ಒಂದಾದ ವಿಕ್ಟೋರಿಯಾ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ವಿಕ್ಟೋರಿಯಾ ಆವರಣದಲ್ಲಿರುವ ಟ್ರಾಮಾ ಕೇರ್‌ ಸೆಂಟರ್, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯಲ್ಲಿನ ಹಾಸಿಗೆಗಳನ್ನು ಕೂಡ ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. 500ಕ್ಕೂ ಅಧಿಕ ಹಾಸಿಗೆಗಳನ್ನು ಗುರುತಿಸಲಾಗಿದೆ. ಅಲ್ಲಿನ 40 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳು ಹಾಗೂ 60 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು ಭರ್ತಿಯಾಗಿವೆ.

ಆಸ್ಪತ್ರೆಯಲ್ಲಿ 150 ಹಿರಿಯ ವೈದ್ಯರಿದ್ದಾರೆ. 50 ವರ್ಷ ಮೇಲ್ಪಟ್ಟ ಕಾರಣ ಅವರಲ್ಲಿ ಕೆಲವರಿಗೆ ಕೋವಿಡ್ ಸೇವೆಯಿಂದ ವಿನಾಯಿತಿ ನೀಡಲಾಗಿದೆ. ಇನ್ನುಳಿದವರು ಕೋವಿಡ್ ಸೇವೆಗೆ ನಿಯೋಜನೆಗೊಂಡರೂ ವಾರ್ಡ್‌ಗಳಿಗೆ ತೆರಳಿ, ರೋಗಿಗಳನ್ನು ಪರಿಶೀಲಿಸುತ್ತಿಲ್ಲ ಎಂದು ಕಿರಿಯ ವೈದ್ಯರು ಆರೋಪಿಸಿದ್ದಾರೆ.

ಮಾನಸಿಕ ಒತ್ತಡ: ‘ಎರಡನೇ ಅಲೆಯಲ್ಲಿ ಹೆಚ್ಚಿನ ಸೋಂಕಿತರು ಗಂಭೀರವಾಗಿ ಅಸ್ವಸ್ಥರಾದ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ, ಅವರನ್ನು ನಿಭಾಯಿಸಲು ಹರಸಾಹಸ ಪಡಬೇಕಿದೆ. ಕೆಲಸದ ಒತ್ತಡ ಕೂಡ ಹೆಚ್ಚಳವಾಗಿದ್ದು, ಹಲವರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಹಿರಿಯ ವೈದ್ಯರು ಕೂಡ ಕೋವಿಡ್ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ ನಿರ್ವಹಣೆ ಅಷ್ಟು ಕಷ್ಟವಾಗುತ್ತಿರಲಿಲ್ಲ. ಈಗಾಗಲೇ ಎಲ್ಲ ವೈದ್ಯರು ಲಸಿಕೆ ಪಡೆದಿದ್ದಾರೆ. ಇಷ್ಟಾಗಿಯೂ ನಾನಾ ಕಾರಣಗಳನ್ನು ನೀಡಿ, ಕೋವಿಡ್‌ ಸೇವೆಯಿಂದ ವಿನಾಯಿತಿ ಪಡೆಯುತ್ತಿದ್ದಾರೆ’ ಎಂದು ಕಿರಿಯ ವೈದ್ಯರೊಬ್ಬರು ತಿಳಿಸಿದರು.

‘ಹಿರಿಯ ವೈದ್ಯರು ಆಸ್ಪತ್ರೆಗೆ ಬಂದರೂ ಕೋವಿಡ್‌ ವಾರ್ಡ್‌ಗಳಿಗೆ ಬರುತ್ತಿಲ್ಲ. ದೂರವಾಣಿ, ಆನ್‌ಲೈನ್ ಮೂಲಕವೇ ಕಿರಿಯ ವೈದ್ಯರಿಗೆ ಮಾರ್ಗದರ್ಶನ ನೀಡುತ್ತಾರೆ. ರೋಗಿಗಳಿಗೆ ತಜ್ಞ ವೈದ್ಯರ ಸೇವೆ ಸಿಗುತ್ತಿಲ್ಲ’ ಎಂದು ಶುಶ್ರೂಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಕಿರಿಯ ವೈದ್ಯರಿಗೆ ಮಾರ್ಗದರ್ಶನದ ಕೊರತೆ:

‘ಆಸ್ಪತ್ರೆಯಲ್ಲಿ 250 ಕಿರಿಯ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. 150 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಕೋವಿಡ್‌ ಸೇವೆಗೆ ಬಳಸಿಕೊಳ್ಳಲಾಗಿದೆ. ಹಿರಿಯ ವೈದ್ಯರು ಕೋವಿಡ್‌ ವಾರ್ಡ್‌ಗಳಿಗೆ ತೆರಳುತ್ತಿಲ್ಲ. ಕೆಲವರು ಪಿಪಿಇ ಕಿಟ್‌ ಧರಿಸಿ, ವಾರ್ಡ್‌ಗಳಿಗೆ ಹೋದರೂ ರೋಗಿಗಳನ್ನು ತಪಾಸಣೆ ಮಾಡಿ, ಚಿಕಿತ್ಸೆ ನೀಡುತ್ತಿಲ್ಲ. ಕಿರಿಯ ವೈದ್ಯರಿಗೆ ಸೂಚನೆಗಳನ್ನು ಮಾತ್ರ ನೀಡುತ್ತಾರೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು. 

‘ವಿಶ್ರಾಂತಿಗೂ ಅವಕಾಶ ಸಿಗುತ್ತಿಲ್ಲ’:

‘ಎಲ್ಲ ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯರು ಕಿರಿಯ ವೈದ್ಯರಿಂದ ಕೋವಿಡ್‌ ಕೆಲಸ ಮಾಡಿಸುತ್ತಿದ್ದಾರೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಯದಲ್ಲಿ ಸೇವೆ ನೀಡುತ್ತಿದ್ದಾರೆ. ಇಲ್ಲವಾದಲ್ಲಿ ಅಂಕ ಕಡಿತ ಮಾಡುವ ಸಾಧ್ಯತೆ ಇರುತ್ತದೆ. ಸೂಕ್ತ ಸುರಕ್ಷಾ ಸಾಧನಗಳನ್ನು ಕೂಡ ಒದಗಿಸುತ್ತಿಲ್ಲ. ಸೋಂಕಿತರಾದಲ್ಲಿ ಕನಿಷ್ಠ 10 ದಿನ ವಿಶ್ರಾಂತಿಗೆ ಅವಕಾಶ ಕೂಡ ಸಿಗುತ್ತಿಲ್ಲ’ ಎಂದು ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಯುವ ವೈದ್ಯರ ಸಂಘದ ಅಧ್ಯಕ್ಷ ಡಾ. ಭರತ್ ಕುಮಾರ್ ಬೇಸರ ವ್ಯಕ್ತಪಡಿಸಿದರು.


ಡಾ.ಸಿ.ಆರ್. ಜಯಂತಿ

* 50 ವರ್ಷ ಮೇಲ್ಪಟ್ಟ ಕೆಲ ವೈದ್ಯರಿಗೆ ಮಾತ್ರ ಕೋವಿಡ್ ಸೇವೆಯ ವಿನಾಯಿತಿ ನೀಡಲಾಗಿತ್ತು. ಉಳಿದ ಎಲ್ಲ ವೈದ್ಯರೂ ಕೋವಿಡ್‌ ವಾರ್ಡ್‌ಗಳಿಗೆ ತೆರಳಿ, ನಿರಂತರ ಸೇವೆ ನೀಡುತ್ತಿದ್ದಾರೆ.

-ಡಾ.ಸಿ.ಆರ್. ಜಯಂತಿ, ಬಿಎಂಸಿಆರ್‌ಐ ಡೀನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು