ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರಣ್ಯಪುರ: ಪ್ರತಿಭಟನೆ ಬಳಿಕ ಬಂತು ನೀರು

Last Updated 13 ಸೆಪ್ಟೆಂಬರ್ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ಸತತ 11 ದಿನಗಳಿಂದ ಕುಡಿಯುವ ನೀರು ಪೂರೈಸದಿರುವುದನ್ನು ಖಂಡಿಸಿ, ವಿದ್ಯಾರಣ್ಯಪುರ ವಾರ್ಡ್‌ನ ವಿವಿಧ ಬಡಾವಣೆಗಳ ನಿವಾಸಿಗಳು ಜಲಮಂಡಳಿಯಸ್ಥಳೀಯ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಬಳಿಕ ಎಚ್ಚೆತ್ತುಕೊಂಡ ಜಲಮಂಡಳಿ ಇಲ್ಲಿನ ಬಡಾವಣೆಗಳ ನೀರಿನ ಸಮಸ್ಯೆಯನ್ನು ಬಗೆಹರಿಸಿದೆ.

ಜಲಮಂಡಳಿಯ ಸ್ಥಳೀಯ ಕಚೇರಿ ಬಳಿ ಸೇರಿದ್ದ ಸ್ಥಳೀಯರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ನೀರು ಪೂರೈಕೆ ಮಾಡದಿದ್ದರೆ ಜಲಮಂಡಳಿ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು. ಸ್ಥಳಕ್ಕೆ ಪೊಲೀಸರ ಜೊತೆ ಭೇಟಿ ನೀಡಿದ ಜಲಮಂಡಳಿ ಅಧಿಕಾರಿಗಳು, ‘ಯಂತ್ರಗಳು ಕೆಟ್ಟಿದ್ದರಿಂದ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಬದಲಿ ಯಂತ್ರಗಳನ್ನು ಅಳವಡಿಸಿ ತಕ್ಷಣವೇ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು.

‘ಪ್ರತಿಭಟನೆ ನಡೆಸಿದ ಬಳಿಕ ಜಲಮಂಡಳಿಯ ಸ್ಥಳೀಯ ಅಧಿಕಾರಿಗಳನ್ನು ಮೇಲಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ಸಂಜೆಯೇ ಇಲ್ಲಿನ ಮನೆಗಳಿಗೆ ನೀರು ಪೂರೈಕೆ ಆಗಿದೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರಣ್ಯಪುರ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಆರ್‌.ಅಶ್ವತ್ಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಾರ್ಡ್‌ನ ಎಚ್‌ಎಂಟಿ ಬಡಾವಣೆ, ಬಿಇಎಲ್‌ ಬಡಾವಣೆ, ಎನ್‌ಟಿಐ ಬಡಾವಣೆ ಸೇರಿದಂತೆ ಹಲವಾರು ಪ್ರದೇಶಗಳಿಗೆ 11 ದಿನಗಳಿಂದ ನೀರು ಪೂರೈಕೆ ಆಗಿರಲಿಲ್ಲ. ಕುಡಿಯುವ ನೀರಿಗೂ ಸ್ಥಳೀಯರು ಟ್ಯಾಂಕರ್‌ಗಳ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

‘ನಾವು ಒಂದು ಟ್ಯಾಂಕರ್‌ ನೀರಿಗೆ ₹ 500ರಿಂದ ₹ 650ರವರೆಗೆ ತೆತ್ತಿದ್ದೇವೆ. ನಮಗೆ 10 ದಿನಗಳಲ್ಲಿ ಆರೇಳು ಸಾವಿರ ರೂಪಾಯಿ ವೆಚ್ಚವಾಗಿದೆ. ಹೆಚ್ಚು ಜನರಿದ್ದ ಕುಟುಂಬಗಳು ₹ 10 ಸಾವಿರಕ್ಕೂ ಅಧಿಕ ಮೊತ್ತವನ್ನು ನೀರಿಗಾಗಿ ವ್ಯಯಿಸಿವೆ’ ಎಂದು ಅಶ್ವತ್ಥ್‌ ತಿಳಿಸಿದರು.

ಈ ಪ್ರದೇಶದ ನೀರಿನ ಬವಣೆ ಬಗ್ಗೆ ‘ಪ್ರಜಾವಾಣಿ’ ಸೋಮವಾರದ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT