ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನದಂಡಗಳ ಉಲ್ಲಂಘನೆ: ಬೆಂಗಳೂರು ರಸ್ತೆಗಳ ದುಃಸ್ಥಿತಿ

ಟೆಂಡರ್‌, ಗುತ್ತಿಗೆ ಕರಾರಿನಲ್ಲಿರುವ ಐಆರ್‌ಸಿ ನಿಯಮಗಳು ಅನುಷ್ಠಾನಗೊಳ್ಳುತ್ತಿಲ್ಲ: ದೂರು
Last Updated 5 ನವೆಂಬರ್ 2022, 21:09 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ನಿರ್ಮಾಣ, ಅಭಿವೃದ್ಧಿ ಸಂದರ್ಭದಲ್ಲಿ ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಮಾನದಂಡಗಳನ್ನು ಉಲ್ಲಂಘಿಸಿರುವುದರಿಂದಹತ್ತಾರು ವರ್ಷ ಸದೃಢವಾಗಿರಬೇಕಾದರಸ್ತೆಗಳು ಒಂದು ಮಳೆಗೇ ಹಾಳಾಗುತ್ತಿವೆ. ನಗರದ ರಸ್ತೆಗಳ ಇಂದಿನ ದುಃಸ್ಥಿತಿಗೆ ಅನುಷ್ಠಾನದಲ್ಲಿನ ಲೋಪವೇ ಕಾರಣವಾಗಿದೆ.

ಐಆರ್‌ಸಿ ನಿಯಮಗಳಂತೆಯೇ ರಸ್ತೆ ನಿರ್ಮಾಣ ಮಾಡಬೇಕು ಎಂದು ಟೆಂಡರ್‌ನಲ್ಲಿ ನಮೂದಿಸಲಾಗಿರುತ್ತದೆ. ಅದರಂತೆ ನಿರ್ಮಾಣಮಾಡಲಾಗಿದೆ ಎಂದೂ ಪ್ರಮಾಣಿಸಲಾಗಿರುತ್ತದೆ. ಆದರೆ ವಾಸ್ತವದಲ್ಲಿ ಅಂತಿಮ ಹಾಗೂ ಅತ್ಯಂತ ಪ್ರಮುಖ ಘಟ್ಟದಲ್ಲಿ ಮಾರ್ಗಸೂಚಿ ಪಾಲನೆ ಆಗಿರುವುದಿಲ್ಲ. ಇದಕ್ಕೆ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿರುವ ಸಂಸ್ಥೆ ಹಾಗೂ ಮೇಲ್ವಿಚಾರಣೆ ಮಾಡಬೇಕಾದ ಎಂಜಿನಿಯರ್‌ಗಳೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಒಂದು ಸಾವಿರಕ್ಕೂ ಹೆಚ್ಚು ಕೋಟಿ ಹಣ ರಸ್ತೆಗಳಿಗೆ ವೆಚ್ಚವಾಗುತ್ತಿದೆ. ಐದರಿಂದ ಹತ್ತು ವರ್ಷ ಸದೃಢವಾಗಬೇಕಿರುವ ರಸ್ತೆಗಳು ಒಂದು ಮಳೆಗೇ ಹದಗೆಡುತ್ತಿವೆ. ಇದಕ್ಕೆ ಕಾರಣ ಮಾನದಂಡ ಪಾಲಿಸದಿರುವುದು.

‘ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗ್ರೇಡ್‌ 80/100 ಬಿಟಮಿನ್‌ ಬಳಸಬೇಕು. ತಂಪು ವಾತಾವರಣದಲ್ಲಿ ಗ್ರೇಡ್‌ 30/40 ಬಿಟಮಿನ್‌ ಬಳಸಬೇಕು. ಇವೆಲ್ಲವೂ ಎಲ್ಲರಿಗೂ ಗೊತ್ತಿದೆ. ಎಲ್ಲವನ್ನೂ ದಾಖಲೆಗಳಲ್ಲಿ ದಾಖಲಿಸಿರುತ್ತಾರೆ. ಆದರೆ, ಅದು ಅನುಷ್ಠಾನವಾಗುವ ಸಂದರ್ಭದಲ್ಲಿ ವಿಫಲವಾಗುತ್ತಿದೆ. ಹಲವು ಪದರಗಳಲ್ಲಿರಬೇಕಾದ ನಿರ್ದಿಷ್ಟ ಮಿಶ್ರಣವನ್ನು ಬಳಸುತ್ತಿಲ್ಲ. ಉಷ್ಣಾಂಶವನ್ನು ಕಾಪಾಡಿಕೊಳ್ಳುತ್ತಿಲ್ಲ. ಹಾಕಬೇಕಾದ ಅಂಟಿನ ಮಿಶ್ರಣ ಸರಿಯಾಗಿ ಬಳಸುತ್ತಿಲ್ಲ. ರಾತ್ರಿ ವೇಳೆ ನಡೆಯುವ ಡಾಂಬರು ಕಾಮಗಾರಿಯಲ್ಲಿ ಕೆಲಸಗಾರರು ಮಾಡಿದ ಮಿಶ್ರಣವನ್ನು ಯಾರೂ ಪರೀಕ್ಷಿಲ್ಲದಿರುವುದೇ ಈ ಎಲ್ಲ ಅವಾಂತರಗಳಿಗೆ ಕಾರಣ’ ಎಂದು ತಾಂತ್ರಿಕ ತಜ್ಞ ಶ್ರೀಹರಿ ವಿವರ ನೀಡಿದರು.

‘ರಸ್ತೆ ಗುಂಡಿ ಮುಚ್ಚುವ ಸಂದರ್ಭದಲ್ಲಿ ಗುಂಡಿಗಿಂತ ಹೆಚ್ಚಿನ ಜಾಗವನ್ನು ತೆಗೆಯಬೇಕು. ಮೊದಲು ಟ್ಯಾಕ್‌ ಕೋಟ್‌ ಹಾಕಬೇಕು. ಇದು ಹಳೆ ಹಾಗೂ ಹೊಸ ಮಿಶ್ರಣವನ್ನು ಹಿಡಿದಿಟ್ಟುಕೊಳ್ಳುವ ಸಾಧನ. ಇದಾದ ಮೇಲೆ ಎರಡು ಪದರ ಬಿಟಮಿನ್‌ ಹಾಕಿ, ಚೆನ್ನಾಗಿ ರೋಲ್‌ ಮಾಡಬೇಕು. ನಂತರ 3ನೇ ಪದರವಾಗಿಸೀಲ್‌ ಕೋಟ್‌ ಹಾಕಬೇಕು. ಇಷ್ಟೆಲ್ಲ ಮಾಡಿ ಗುಂಡಿ ಮುಚ್ಚಿದರೆ ಮೂರು ವರ್ಷ ಅದು ಬಾಳಿಕೆ ಬರುತ್ತದೆ. ಆದರೆ, ತುರ್ತಾಗಿ ನಡೆಯುವ ಗುಂಡಿ ಮುಚ್ಚುವ ಕಾರ್ಯದಲ್ಲಿ ಇದನ್ನು ಅನುಸರಿಸುವುದಿಲ್ಲ’ ಎಂದು ಮಾಹಿತಿ ನೀಡಿದರು.

‘ರಸ್ತೆ ಗುಂಡಿ ಮುಚ್ಚುವುದು ರಾಕೆಟ್‌ ಸೈನ್ಸ್‌ ಅಲ್ಲ. ಮಾನ
ದಂಡಗಳನ್ನು ಪಾಲಿಸಿದರೆ ಸಾಕು’ ಎಂದರು.

ನೀರು ನಿಲ್ಲಬಾರದು: ‘ರಸ್ತೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರಹಣ ನೀಡುತ್ತದೆ. ಬದಿ ಚರಂಡಿ, ಶೋಲ್ಡರ್‌ ಡ್ರೈನ್‌, ವಿಭಜಕಗಳನ್ನು ಸರಿಪಡಿಸಿ ಡಾಂಬರು ಹಾಕಬೇಕು. ಆದರೆ ಇವರು ರಸ್ತೆ ಅಭಿವೃದ್ಧಿ ಎಂದರೆ ಡಾಂಬರು ಮಾತ್ರ ಹಾಕಿ ಮುಗಿಸುತ್ತಿದ್ದಾರೆ. ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ಮಧ್ಯದಲ್ಲಿ ಎಲ್ಲೂ ನೀರು ನಿಲ್ಲದಬಾರದು. ಅದರಂತೆಯೇ ವಿನ್ಯಾಸ ಮಾಡಬೇಕು. ಇದನ್ನು ಮಾಡದೆ ವಿಭಜಕಗಳಲ್ಲಿ ಮಳೆನೀರು ನಿಲ್ಲುತ್ತದೆ. ಇದರಿಂದ ರಸ್ತೆ ಹಾಳಾಗುತ್ತಿದೆ’ ಎಂದು ಬಿಬಿಎಂಪಿಯ ಎಂಜಿನಿಯರ್‌ಗಳೇ ಹೇಳುತ್ತಾರೆ.

ಬಿಟುಮಿನ್‌ 140 ಡಿಗ್ರಿ ಬಿಸಿ ಇರಬೇಕು!

ರಸ್ತೆ ನಿರ್ಮಾಣ, ಅಭಿವೃದ್ಧಿ ಹಾಗೂ ಗುಂಡಿಗಳನ್ನು ಮುಚ್ಚುವ ಸಂದರ್ಭದಲ್ಲಿ ಬಳಸಲಾಗುವ ಬಿಟುಮಿನ್‌ (ಜಲ್ಲಿಕಲ್ಲಿನಂತೆ ಕಪ್ಪುಗಿರುವ ಸಾಮಗ್ರಿ) 140 ಡಿಗ್ರಿಯಿಂದ 165 ಡಿಗ್ರಿ ಉಷ್ಣಾಂಶ ಹೊಂದಿರಬೇಕು. ಆದರೆ, ಘಟಕದಿಂದ ಸ್ಥಳಕ್ಕೆ ಟ್ರಕ್‌ನಲ್ಲಿ ಬರುವ ವೇಳೆಗೆ ಅದರ ಉಷ್ಣಾಶ ಕಡಿಮೆಯಾಗಿರುತ್ತದೆ ಇದರಿಂದ ನಿರ್ಮಾಣ ಅಥವಾ ದುರಸ್ತಿ ಕಾರ್ಯ ನಿರೀಕ್ಷಿತ ಗುಣಮಟ್ಟದಲ್ಲಿ ಇರುವುದಿಲ್ಲ.

‘ರಸ್ತೆಯಲ್ಲಿ ಬಿಟಮಿನ್‌ ಬಳಸುವಾಗ 140 ಡಿಗ್ರಿಗೂ ಹೆಚ್ಚಿನ ಉಷ್ಣಾಂಶದಲ್ಲಿ ಇರಬೇಕೆಂಬ ಮಾರ್ಗಸೂಚಿ ಇದೆ. ಆದರೆ, ಇದನ್ನು ವಾಸ್ತವದಲ್ಲಿ ಅನುಸರಿಯುತ್ತಿಲ್ಲ. ಉಷ್ಣಾಂಶವನ್ನು ಅಳೆಯುವ ಮಾಪಕವೇ ಸ್ಥಳದಲ್ಲಿ ಇರುವುದಿಲ್ಲ. ಇದನ್ನು ಮೇಲ್ವಿಚಾರಣೆ ಮಾಡುವ ಎಂಜಿನಿಯರ್‌ ಸ್ಥಳದಲ್ಲಿ ಇರುವುದೇ ಇಲ್ಲ. ಹೀಗಾಗಿ ಐದಾರು ವರ್ಷ ಸದೃಢವಾಗಿರಬೇಕಾದ ರಸ್ತೆಗಳು ಒಂದೆರಡು ವರ್ಷಕ್ಕೇ ಹಾಳಾಗುತ್ತಿವೆ’ ಎಂದು ತಾಂತ್ರಿಕ ತಜ್ಞ ಶ್ರೀಹರಿ ಅವರು ತಿಳಿಸಿದರು.

‘ಹಲವು ಒತ್ತಡ’ದಿಂದ ಗುಣಮಟ್ಟಕ್ಕೆ ಕಂಟಕ...

‘ನಾವು ಎಂಜಿನಿಯರಿಂಗ್‌ ಓದಿಕೊಂಡೇ ಬಂದಿರುತ್ತೇವೆ. ಐಆರ್‌ಸಿ ಸೇರಿದಂತೆ ಎಲ್ಲ ನಿಯಮ, ಅನುಷ್ಠಾನದ ಮಾನದಂಡಗಳಲ್ಲವೂ ಗೊತ್ತು. ದಾಖಲೆಯಲ್ಲಿ ಎಲ್ಲವನ್ನೂ ನಮೂದಿಸಿಯೇ ಇರುತ್ತೇವೆ. ಆದರೆ, ಇವೆಲ್ಲವನ್ನೂ ಅನುಷ್ಠಾನ ಮಾಡುವ ಹಂತದಲ್ಲಿ ‘ಹಲವು ಒತ್ತಡ’ಗಳಿಂದ ನಾವು ಹಿಂದೆ ಸರಿಯಬೇಕಾಗುತ್ತದೆ. ಒಂದು ರಾತ್ರಿಯಲ್ಲಿ ನಾಲ್ಕಾರು ರಸ್ತೆಗೆ ಡಾಂಬರು ಮಾಡುವ ‘ಒತ್ತಡ’ ಹಾಕಲಾಗುತ್ತದೆ. ನಾವು ಸ್ಥಳದಲ್ಲಿ ಇಲ್ಲದಿದ್ದರೂ, ನಮ್ಮ ಗಮನಕ್ಕೆ ಬಾರದೆಯೂ ಡಾಂಬರು ಹಾಕಲಾಗಿರುತ್ತದೆ. ಗುತ್ತಿಗೆದಾರರೇ ಅಂತಿಮವಾಗುತ್ತಾರೆ. ಮೇಲ್ವಿಚಾರಣೆ, ಪರಿಶೀಲನೆ ಎಲ್ಲವೂ ನಡೆಯುತ್ತದೆ. ಯಾವ ಲೋಪವೂ ಎಲ್ಲಿಯೂ ನಮೂದಾಗುವುದಿಲ್ಲ’ ಎಂದು ಬಿಬಿಎಂಪಿಯ ಮಾಜಿ ಹಾಗೂ ಹಾಲಿ ಎಂಜಿನಿಯರ್‌ಗಳು ತಮ್ಮ ಅಳಲು ತೋಡಿಕೊಂಡರು.

ಯಾರು ಬೇಕಾದರೂ ಪರಿಶೀಲಿಸಲಿ...

‘ನಾವು ರಸ್ತೆಯನ್ನು ನಿರ್ಮಿಸುತ್ತಿಲ್ಲ. ಮೇಲ್ಮೈ ಅನ್ನು ಮಾತ್ರ ಅಭಿವೃದ್ಧಿ ಮಾಡುತ್ತಿದ್ದೇವೆ. ಇದು ಒಂದರಿಂದ ಎರಡು ವರ್ಷ ಮಾತ್ರ ಬಾಳಿಕೆ ಬರುತ್ತದೆ. ನಾವು ಎಲ್ಲ ರೀತಿಯ ಮಾನದಂಡಗಳನ್ನೂ ಅನುಷ್ಠಾನ ಮಾಡಿದ್ದೇವೆ. ನಾವೂ ಎಂಜಿನಿಯರ್‌ಗಳೇ. ಉಷ್ಣಾಂಶ ಎಲ್ಲ ಗೊತ್ತು. ಯಾರು ಬೇಕಾದರೂ ಪರಿಶೀಲಿಸಲಿ. ನಮ್ಮ ಬಳಿ ಕೋಲ್ಡ್‌ ಮಿಕ್ಸ್‌ ಇದ್ದರೂ ಹಾಟ್ ಮಿಕ್ಸ್‌ ತಯಾರಿಸಲು ಸಾಧ್ಯವಿಲ್ಲದ್ದರಿಂದ ಗುಂಡಿ ಮುಚ್ಚಲು ಈ ಮಳೆಗಾಲದಲ್ಲಿ ಸಾಧ್ಯವಾಗುತ್ತಿಲ್ಲ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT