ಡಿ.ಜೆ.ಹಳ್ಳಿ ಗಲಭೆ: ನೇರಪ್ರಸಾರ ಮಾಡಿದ್ದ ಮುದಾಸೀರ್ ಬಂಧನ
ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದ ಪ್ರಕರಣದ ಮತ್ತೊಬ್ಬ ಆರೋಪಿ ಮುದಾಸೀರ್ ಅಹಮ್ಮದ್ ಎಂಬಾತನನ್ನು ಸಿಸಿಬಿ ಪೊಲೀಸರು ನಾಗಪುರದಲ್ಲಿ ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯ ಕಾವಲ್ ಭೈರಸಂದ್ರದಲ್ಲಿದ್ದ ಶಾಸಕರ ಮನೆಗೆ ದುಷ್ಕರ್ಮಿಗಳ ತಂಡ ಬೆಂಕಿ ಹಚ್ಚಿತ್ತು. ಮಾಜಿ ಮೇಯರ್ ಆರ್.ಸಂಪತ್ ರಾಜ್ ಸೇರಿದಂತೆ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆದರೆ, ಕೃತ್ಯದ ನಂತರ ಮುದಾಸೀರ್ ತಲೆಮರೆಸಿಕೊಂಡಿದ್ದ.
‘ಗಲಭೆ ನಡೆಯುತ್ತಿದ್ದಾಗ ಅದರ ವಿಡಿಯೊವನ್ನು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ನೇರಪ್ರಸಾರ ಮಾಡಿದ್ದ ಮೊಹಮ್ಮದ್, ಯುವಕರನ್ನು ಪ್ರಚೋದಿಸಿದ್ದ. ವಿಡಿಯೊ ನೋಡಿಕೊಂಡು ಯುವಕರ ಗುಂಪು ಶಾಸಕರ ಮನೆ ಎದುರು ಜಮಾಯಿಸಿ ಗಲಭೆ ಸೃಷ್ಟಿಸಿತ್ತು. ಮುದಾಸೀರ್ ಜೊತೆಯಲ್ಲಿ ಕೃತ್ಯ ಎಸಗಿದ್ದ ಜಾಕೀರ್ ಹಾಗೂ ಸೈಯದ್ ಸೊಹೈಲ್ ಎಂಬುವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು’ ಎಂದು ಸಿಸಿಬಿ ಮೂಲಗಳು ಹೇಳಿವೆ.
ರೈಲಿನಲ್ಲಿ ಪರಾರಿ: ‘ಆಗಸ್ಟ್ 11ರಂದು ರಾತ್ರಿ ಗಲಭೆ ನಡೆದಿತ್ತು. ಅದರ ಮರುದಿನವೇ ರೈಲಿನಲ್ಲಿ ಹುಬ್ಬಳ್ಳಿಗೆ ಹೋಗಿದ್ದ ಆರೋಪಿ ಮುದಾಸೀರ್, ಅಲ್ಲಿ ಕೆಲದಿನ ನೆಲೆಸಿದ್ದ. ನಂತರ, ಅಲ್ಲಿಂದ ದೆಹಲಿಗೆ ವಾಸ್ತವ್ಯ ಬದಲಿಸಿದ್ದ. ಆ ಬಗ್ಗೆ ಪೊಲೀಸರಿಗೆ ಸುಳಿವು ಸಿಗುತ್ತಿದ್ದಂತೆ ಅಲ್ಲಿಂದಲೂ ಪರಾರಿಯಾಗಿದ್ದ’ ಎಂದು ಸಿಸಿಬಿ ಮೂಲಗಳು ಹೇಳಿವೆ.
‘ಆರೋಪಿ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದ ತಂಡ, ಖಚಿತ ಸುಳಿವು ಮೇರೆಗೆ ನಾಗಪುರಕ್ಕೆ ಹೋಗಿತ್ತು. ಅಲ್ಲಿಯ ರೈಲು ನಿಲ್ದಾಣದಲ್ಲೇ ಆರೋಪಿ ಸಿಕ್ಕಿಬಿದ್ದ’ ಎಂದೂ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.