ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ಕಂಪನಿಗಳ ನೀರಸ ವಹಿವಾಟು

Last Updated 20 ಮೇ 2018, 19:30 IST
ಅಕ್ಷರ ಗಾತ್ರ

ಷೇರುಪೇಟೆಯ ಹೆಗ್ಗುರುತಾದ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿಗಳು ಉತ್ತುಂಗದಲ್ಲಿದ್ದರೂ ಹೆಚ್ಚಿನ ಅಗ್ರಮಾನ್ಯ ಕಂಪನಿಗಳ ಷೇರುಗಳು ನೀರಸಮಯ ವಾತಾವರಣದಲ್ಲಿ ವಹಿವಾಟಾಗುತ್ತಿವೆ.

ಪ್ರಮುಖ ಕಂಪನಿಗಳಾದ ಎಸಿಸಿ, ಅಂಬುಜಾ ಸಿಮೆಂಟ್, ಕ್ಯಾಂಡಿಲ್ಲ ಹೆಲ್ತ್,  ಎಲ್‌ಐಸಿ ಹೌಸಿಂಗ್, ಪವರ್ ಫೈನಾನ್ಸ್ ಕಾರ್ಪೊರೇಷನ್, ರೂರಲ್ ಎಲೆಕ್ಟ್ರಿಫಿಕೇಷನ್, ಟಾಟಾ ಮೋಟರ್, ಬಿಎಚ್‌ಇಎಲ್‌, ಅಲೆಂಬಿಕ್ ಫಾರ್ಮಾ, ಕ್ಯಾನ್ ಫಿನ್ ಹೋಮ್ಸ್, ಕ್ಯಾಸ್ಟ್ರಾಲ್, ಇಂಡಿಯಾ ಸಿಮೆಂಟ್,  ಇಐಡಿ ಪ್ಯಾರಿ, ಯುಫ್ಲೆಕ್ಸ್,  ಪಿಟಿಸಿಗಳಲ್ಲದೆ ಸರ್ಕಾರಿ ವಲಯದ ಅನೇಕ ಬ್ಯಾಂಕ್‌ಗಳು , ಟಾಟಾ ಮೋಟರ್‌ನಂತಹ ಕಂಪನಿಗಳು ವಾರ್ಷಿಕ ಕನಿಷ್ಠದ ಹಂತಕ್ಕೆ ಕುಸಿದಿವೆ. ಆದರೂ ಸಹ ಖರೀದಿ ಬೆಂಬಲ ದೊರೆಯುತ್ತಿಲ್ಲ.

ಕೆಲವು ಆಯ್ದ ಕಂಪನಿಗಳ ಷೇರಿನ ಬೆಲೆಗಳಲ್ಲಿ ಮಿಂಚು ಸಂಚರಿಸುವಂತಹ ಚಟುವಟಿಕೆ ನಡೆಯುತ್ತಿದೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಬಜಾಜ್ ಫೈನಾನ್ಸ್‌  ಕಂಪನಿಯ ಷೇರಿನ ಬೆಲೆ ವಾರದ ಆರಂಭದಲ್ಲಿ ₹1,850 ರ ಸಮೀಪವಿದ್ದು ವಾರಾಂತ್ಯದ ದಿನ ₹2,167 ರವರೆಗೂ ಜಿಗಿತ ಕಂಡು ₹2,143 ರಲ್ಲಿ ಅಂತ್ಯಕಂಡಿದೆ.  ಕಂಪನಿಯ ಫಲಿತಾಂಶ ಪ್ರಕಟಣೆ ನಂತರ ದಿಢೀರ್ ಏರಿಕೆ ಕಂಡಿದೆ.

ಇದೆ ರೀತಿ ಬಜಾಜ್ ಫಿನ್‌ ಸರ್ವ್‌ ಷೇರಿನ ಬೆಲೆಯೂ  ₹5,286 ರಿಂದ ₹5,810 ರ ವರೆಗೂ ಏರಿಕೆ ಕಂಡು ₹5,727 ರ ಸಮೀಪ ಕೊನೆಗೊಂಡಿದೆ.  ಷೇರಿನ ಬೆಲೆ ಈ ರೀತಿ ದಿಢೀರ್ ಏರಿಕೆ ಕಂಡಾಗ ಆ ಷೇರು ಮಾರಾಟ ಮಾಡಿ ನಿರ್ಗಮಿಸುವುದೇ ಸೂಕ್ತ. ಕಾರಣ ಮುಂದೆ ಮತ್ತೊಮ್ಮೆ ಅದೇ ಷೇರು ಕಡಿಮೆ ಬೆಲೆಯಲ್ಲಿ ದೊರೆಯಬಹುದು.  ಈ ಕ್ರಮದಿಂದ ಬಂಡವಾಳ ಸುರಕ್ಷತೆ ಕಾಪಾಡಿಕೊಂಡಂತಾಗುತ್ತದೆ.

ಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳ ಷೇರುಗಳ ಬೆಲೆಗಳಲ್ಲಿ ಕಂಡುಬರುವ ರಭಸದ ಏರಿಳಿತಗಳು ಚಟುವಟಿಕೆಯ ದಿಸೆಯನ್ನೇ ಬದಲಿಸುವಂತೆ ಮಾಡುತ್ತಿವೆ. ಆಯ್ದ ಕಂಪನಿಗಳಲ್ಲಿ ಮಾತ್ರ ಚಟುವಟಿಕೆ ಹೆಚ್ಚಾಗಿದ್ದು ಉಳಿದಂತೆ ಇತರೆ ಕಂಪನಿಗಳಲ್ಲಿ ನಿರಾಶೆದಾಯಕವಾಗಿದೆ.

ಈ ವಾರ ಅಸಹಜ ಚಟುವಟಿಕೆಯಿಂದ ರಭಸದ ಏರಿಕೆ ಪ್ರದರ್ಶಿಸಿದ ಕಂಪನಿಗಳೆಂದರೆ ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಕರ್ಣಾಟಕ ಬ್ಯಾಂಕ್, ಹಿಂದೂಸ್ಥಾನ್ ಯುನಿಲಿವರ್, ಪರಾಗ್ ಮಿಲ್ಕ್ ನಂತಹ ಕಂಪನಿಗಳು ಪ್ರಕಟಿಸಿದ ಫಲಿತಾಂಶಗಳ ಪ್ರಭಾವವೇ ಕಾರಣವಾಗಿದೆ.

ಆದರೆ, ಈ ಕಂಪನಿಗಳು ಪ್ರಕಟಿಸಿರುವ ಲಾಭಾಂಶಗಳು ಮಾತ್ರ ಅವುಗಳ ಪೇಟೆ ದರಗಳಿಗೆ ಅನುಗುಣವಾಗಿರುವುದಿಲ್ಲ. ಉಳಿದಂತೆ  ಈ ವಾರ ಫಲಿತಾಂಶ ಪ್ರಕಟಸಿದ ಐಟಿಸಿ ಕಂಪನಿ ಷೇರಿನ ಬೆಲೆ ₹288 ಕ್ಕೆ ಜಿಗಿದು ಶುಕ್ರವಾರ ₹276 ರ ಸಮೀಪಕ್ಕೆ ಕುಸಿದು ₹282 ರ ಸಮೀಪಕ್ಕೆ ಚೇತರಿಕೆ ಕಂಡಿತು.

ಬಯೋಕಾನ್ ಕಂಪನಿ ತನ್ನ ಅಂಗ ಸಂಸ್ಥೆ ಸಿಂಜಿನ್ ಇಂಟರ್‌ನ್ಯಾಷನಲ್‌ ಭಾಗಿತ್ವ ಮಾರಾಟದ ಸುದ್ದಿ ಮತ್ತು ಕಂಪನಿಯನ್ನು ಬಿಎಸ್‌ಇ 100ರ ಸೂಚ್ಯಂಕದಲ್ಲಿ ಸೇರಿಸಲಾಗುವುದೆಂಬ ಸುದ್ದಿಯು  ಷೇರಿನ ಬೆಲೆ ಚೇತರಿಕೆ ಕಂಡು ₹656 ರ ವರೆಗೂ ಏರಿಕೆ ಕಂಡಿತು.  ರಿಲಯನ್ಸ್ ಕ್ಯಾಪಿಟಲ್ ಮತ್ತು ರಿಲಯನ್ಸ್ ಇನ್ಫ್ರಾ ಕಂಪನಿಗಳು ಶುಕ್ರವಾರದ ಆರಂಭಿಕ ಚಟುವಟಿಕೆಯಲ್ಲಿ ಹೆಚ್ಚಿನ ಏರಿಕೆ ಕಂಡು ದಿನಂದ ಅಂತ್ಯದಲ್ಲಿ ಕುಸಿತಕ್ಕೊಳಗಾದವು.

ಈ ಎಲ್ಲ ಬೆಳವಣಿಗೆಗಳಿಗೆ ಮುಖ್ಯ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳಿಂದ ಬರುತ್ತಿದ್ದ ಒಳಹರಿವು ಸ್ಥಗಿತಗೊಂಡಿರುವುದಲ್ಲದೆ ಅವು ಮಾರಾಟದ ಒತ್ತಡವನ್ನು ಹೆಚ್ಚಿಸುತ್ತಿವೆ. ಹೀಗಾಗಿ ಪೇಟೆಯಲ್ಲಿ ಉತ್ತಮ ಕಂಪನಿಗಳು ಸಹ ತಮ್ಮ ಏರಿಕೆಯನ್ನು ಕಾಪಾಡಿಕೊಳ್ಳದೆ ಕುಸಿಯುತ್ತಿವೆ.

ಈ ಷೇರುಗಳ ವಹಿವಾಟಿನಲ್ಲಿ ಎಚ್ಚರವಿರಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗ್ರಾಹಕರಿಗೆ ಅನಪೇಕ್ಷಿತ ಸಂದೇಶಗಳ ಮೂಲಕ ಅನೇಕ ಶಿಫಾರಸುಗಳನ್ನು ರವಾನಿಸಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನವು ಕಳಪೆ ಕಂಪನಿಗಳಾಗಿದ್ದು, ಸಾಮಾನ್ಯ ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸಲು  ಪೇಟೆಯ ನಿಯಂತ್ರಕ 'ಸೆಬಿ' ಮತ್ತು ಸ್ವಯಂ ನಿಯಂತ್ರಿತ ಸಂಸ್ಥೆಗಳಾದ ಷೇರು ವಿನಿಮಯ ಕೇಂದ್ರಗಳು  ಕ್ರಮ ಕೈಗೊಳ್ಳಲು ಮುಂದಾಗಿವೆ.  

ಇತ್ತೀಚಿಗೆ ಮೊಬೈಲ್‌ನಲ್ಲಿ ಖರೀದಿಮಾಡಲು ಪ್ರೇರೇಪಿಸುತ್ತಿರುವ ಕಂಪನಿಗಳಲ್ಲಿ  ಅಪಲ್ಯ ಕ್ರಿಯೇಷನ್ಸ್ ಲಿ., ಕಪಿಲ್ ರಾಜ್ ಫೈನಾನ್ಸ್ ಲಿ., ಕಿಡ್ಸ್ ಮೆಡಿಕಲ್ ಸಿಸ್ಟಮ್ಸ್ ಲಿ., ತಿರಾಣಿ ಪ್ರಾಜೆಕ್ಟ್ಸ್ ಲಿ., ಮಿಲಿಟೂನ್ಸ್ ಎಂಟರ್‌ಟೇನ್‌ಮೆಂಟ್ ಲಿ., ಗಾಯತ್ರಿ ಶುಗರ್ಸ್ ಲಿ., ವಿ ಬಿ ಇಂಡಸ್ಟ್ರೀಸ್ ಲಿ.,  ಜೆ ತಾಪರಿಯ ಪ್ರಾಜೆಕ್ಟ್ಸ್ ಲಿ.,  ಎಜೆಕ್ಟ್‌ ಮಾರ್ಕೆಟಿಂಗ್ ಸೇರಿವೆ.

ಈ ಹಿಂದೆ ಸಂದೇಶಗಳ ಮೂಲಕ ಪ್ರೇರೇಪಿಸಿದ್ದ ಕಂಪನಿಗಳಾದ  ಮೋಹಿತ್ ಇಂಡಸ್ಟ್ರೀಸ್, ಸ್ವದೇಶಿ ಇಂಡಸ್ಟ್ರೀಸ್ ಲೀಸಿಂಗ್, ಯುನಿವರ್ಸಲ್ ಕ್ರೆಡಿಟ್ ಅಂಡ್ ಸೆಕ್ಯುರಿಟೀಸ್, ಆಲ್ಪ್ಸ್ ಮೋಟರ್ ಫೈನಾನ್ಸ್, ಶ್ರೀ ಕೃಷ್ಣ ಪ್ರಸಾದಂ,  ಕಲ್ಪ ಕಮರ್ಷಿಯಲ್, ಮುಂತಾದವುಗಳಲ್ಲಿ ಮಾರಾಟ ಮಾಡಿದಾಗ ಬಂದ ಹಣವನ್ನು ಪ್ರತ್ಯೇಕ ಖಾತೆಯಲ್ಲಿರಿಸಿ ಅದನ್ನು ವಿವಿಧ ನಿಯಮಗಳನುಸಾರ ಪರಿಶೀಲನೆಗೊಳಪಡಿಸಬಹುದು ಮತ್ತು ನಿಯಂತ್ರಕರ ಆದೇಶ ಲಭಿಸುವವರೆಗೂ ಆ ಹಣವನ್ನು ಗ್ರಾಹಕರಿಗೆ ಬಿಡುಗಡೆ ಮಾಡುವಂತಿಲ್ಲ.

ಸೂಚ್ಯಂಕಗಳಲ್ಲಿ ಬದಲಾವಣೆ: 2018ರ ಜೂನ್‌ 18 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕದಲ್ಲಿರುವ  ಡಾ. ರೆಡ್ಡಿಸ್ ಲ್ಯಾಬ್ ಕಂಪನಿ ಬದಲಿಗೆ ವೇದಾಂತ ಲಿಮಿಟೆಡ್ ಅನ್ನು ಸೇರಿಸಲಾಗಿದೆ.

ಹಾಗೆಯೇ,  ವಿಮಾ ಕಂಪನಿಗಳಾದ  ಎಚ್‌ಡಿಎಫ್‌ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶುರನ್ಸ್‌ ಕಂಪನಿ ಲಿ.,  ಎಸ್‌ಬಿಐ ಲೈಫ್ ಇನ್ಶುರನ್ಸ್‌ ಕಂಪನಿ ಲಿ,  ಜನರಲ್ ಇಂಶುರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ,  ದಿ ನ್ಯೂ ಇಂಡಿಯಾ ಆಶುರನ್ಸ್ ಕಂಪನಿ ಲಿ,  ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರನ್ಸ್‌ ಕಂಪನಿ ಲಿ. ಕಂಪನಿಗಳನ್ನು ಬಿಎಸ್‌ಇ 200,  500, 150 ಮಿಡ್ ಕ್ಯಾಪ್ ಸೂಚ್ಯಂಕಗಳಲ್ಲಿ ಸಾರಾಸಗಟಾಗಿ ಸೇರಿಸಲಾಗಿದೆ.

ಹೊಸ ಷೇರು: ಪ್ರತಿ ಷೇರಿಗೆ ₹572 ರಂತೆ ಇತ್ತೀಚಿಗೆ ಆರಂಭಿಕ ಷೇರು ವಿತರಣೆಯಾದ ಇಂಡೋ ಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್ ಕಂಪನಿ ಷೇರುಗಳು 21 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ 'ಬಿ ' ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಲಾಭಾಂಶ: ₹೨.೦೦ ರ ಮುಖಬೆಲೆ ಷೇರುಗಳು: ಬ್ರಿಟಾನಿಯಾ: ₹25,  ಥರ್ಮಾಕ್ಸ್: ₹6, ಲುಪಿನ್: ₹5,  ಬಜಾಜ್ ಫೈನಾನ್ಸ್: ₹4, ಅಲೆಂಬಿಕ್ ಫಾರ್ಮಾ: ₹4,  ಕರೂರ್ ವೈಶ್ಯ ಬ್ಯಾಂಕ್: ₹2.50, ಕಿರ್ಲೋಸ್ಕರ್ ಇಂಜಿನ್ಸ್ : ₹2.50, ನೆಸ್ಕೊ: ₹2.30,  ಜಿ ಎಸ್ ಎಫ್ ಸಿ:₹2.20, ಲಕ್ಸ್ ಇಂಡಸ್ಟ್ರೀಸ್: ₹2,  ಬಾಲಕೃಷ್ಣ ಇಂಡಸ್ಟ್ರೀಸ್: ₹1.50.

ಬೋನಸ್ ಷೇರು:

* ಜ್ಯೋತಿ ಲ್ಯಾಬೊರೇಟರೀಸ್ ಕಂಪನಿ 1:1 ರ ಅನುಪಾತದ ಬೋನಸ್ ಪ್ರಕಟಿಸಿದೆ.

* ಕೋಸ್ಟಲ್ ಕಾರ್ಪೊರೇಷನ್ ಕಂಪನಿ ವಿತರಿಸಲಿರುವ 3:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 23 ನಿಗದಿತ ದಿನ.

* ಪ್ರಭಾತ್ ಟೆಲಿಕಾಂ  ಕಂಪನಿ 21 ರಂದು ಬೋನಸ್ ಷೇರಿನ ವಿತರಣೆ ಪರಿಶೀಲಿಸಲಿದೆ.

* ಜನರಲ್ ಇನ್ಶುರನ್ಸ್‌ ಕಾರ್ಪೊರೇಷನ್ ಕಂಪನಿ 25 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

(ಮೊ: 9886313380, ಸಂಜೆ 4.30 ರನಂತರ)

**

ವಾರದ ಮುನ್ನೋಟ

ಜಾಗತಿಕ ಪೇಟೆಗಳು ಕುಸಿತದಲ್ಲಿರುವುದು,  ರೂಪಾಯಿಯ ಬೆಲೆ ಹೊಸ ವಾರ್ಷಿಕ ಕನಿಷ್ಠಕ್ಕೆ ಕುಸಿದಿರುವುದು,  ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿರುವುದು, ವಿದೇಶಿ ವಿತ್ತೀಯ ಸಂಸ್ಥೆಗಳು ಷೇರುಪೇಟೆಯಲ್ಲಿ ಸತತವಾದ ಮಾರಾಟದ ಹಾದಿ ಹಿಡಿದಿರುವುದು, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಪಡೆಯಲು ಸಾಧ್ಯವಾಗದಿರುವುದು ಮತ್ತಿತರ ವಿದ್ಯಮಾನಗಳು ಮುಂದಿನ ದಿನಗಳಲ್ಲಿ ಪೇಟೆಯಲ್ಲಿ ನಿರುತ್ಸಾಹ ಮೂಡಿಸಬಹುದು.

ಈ ಮಧ್ಯೆ, ಮಧ್ಯಂತರದಲ್ಲಿ ಯಾವುದಾದರೂ ಷೇರಿನ ಬೆಲೆ ಗಗನಕ್ಕೇರಿದೆ  ಎಂದರೆ  ಮಾರಾಟ ಮಾಡಲು ಉತ್ತಮ ಅವಕಾಶವಾಗಬಹುದು.  ಉಳಿದಂತೆ ಹೊಸದಾಗಿ ಪೇಟೆ ಪ್ರವೇಶಿಸುವವರಿಗೆ,  ದೀರ್ಘಕಾಲೀನ ಹೂಡಿಕೆ ಮಾಡ ಬಯಸುವವರಿಗೆ  ಪೇಟೆ ಉತ್ತಮ ಅವಕಾಶವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT