ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವದ್ಗೀತೆ ಕಲಿಕೆ: ಎಲ್ಲ ಧರ್ಮಿಯರಿಗೂ ಅವಕಾಶ

ವಿಶ್ವ ಹಿಂದೂ ಪರಿಷತ್ ಯೋಜನೆ
Last Updated 28 ಆಗಸ್ಟ್ 2021, 22:30 IST
ಅಕ್ಷರ ಗಾತ್ರ

ಬೆಂಗಳೂರು:ದಿನಕ್ಕೆ 5 ಶ್ಲೋಕಗಳಂತೆ 140 ದಿನಗಳಲ್ಲಿ ಭಗವದ್ಗೀತೆಯ ಎಲ್ಲ 700 ಶ್ಲೋಕಗಳನ್ನು ಕಲಿಸುವ ಯೋಜನೆಯನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಮ್ಮಿಕೊಂಡಿದೆ. ‘ಹಿಂದು ಧರ್ಮದ ಜೊತೆಗೆ ಅನ್ಯ ಧರ್ಮಿಯರಿಗೂ ಕಲಿಯುವ ಅವಕಾಶ ಇರಲಿದೆ’ ಎಂದು ಪರಿಷತ್ ತಿಳಿಸಿದೆ.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿವಿಎಚ್‌ಪಿಯ ಕೇಂದ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಮಾತನಾಡಿ, ‘ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಎಚ್‌ಪಿಯ ಸಂಸ್ಥಾಪನಾ ದಿನವಾದ ಸೋಮವಾರ (ಆ.30) ಮಧ್ಯಾಹ್ನ 3 ಗಂಟೆಗೆನೆಲಮಂಗಲದಲ್ಲಿರುವ ವಿಶ್ವ ಶಾಂತಿ ಆಶ್ರಮದ ಭಗವದ್ಗೀತಾ ಮಂದಿರದಲ್ಲಿ ಕಲಿಕಾ ಯೋಜನೆಗೆ ಚಾಲನೆ ಸಿಗಲಿದೆ. ಕಲಿಕಾ ತರಗತಿಗಳನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದರು.

‘ಪ್ರಾಚೀನ ಗುರುಕುಲ ಪದ್ಧತಿಯ ಪಾಠದ ರೂಪದಲ್ಲಿ ಶ್ಲೋಕಗಳನ್ನು ವಿಡಿಯೊ ಚಿತ್ರೀಕರಣ ಮಾಡಿ, ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಈ ಕಲಿಕೆಯಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು’ ಎಂದರು.

ವಿಎಚ್‌ಪಿ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ‘ಭಗವದ್ಗೀತೆಯು ವೇದಕ್ಕೆ ಸಮಾನ. ವೇದಗಳನ್ನು ಉಚ್ಚರಿಸುವಾಗ ಬಳಸಲಾಗುವ ಶಿಕ್ಷಾ ನಿಯಮಗಳನ್ನು ಬಳಸಿ ಕಲಿಸಲಾಗುತ್ತದೆ. ಬಹುತೇಕ ಶ್ಲೋಕಗಳು ಅನುಷ್ಟುಪ್ ಛಂದಸ್ಸಿನಲ್ಲಿವೆ. ಪ್ರತಿ ಶ್ಲೋಕದಲ್ಲಿ 32 ಅಕ್ಷರಗಳಿವೆ. ಸಂಸ್ಕೃತ ಭಾಷೆಯಲ್ಲಿರುವ ಶ್ಲೋಕಗಳನ್ನು ಸುಲಭವಾಗಿ ಉಚ್ಚರಿಸಲು ಸಹಾಯವಾಗುವಂತೆ ಆರಂಭದಲ್ಲಿ ಪ್ರತಿ ಶ್ಲೋಕವನ್ನು ನಾಲ್ಕು ಪಾದವಾಗಿ ವಿಂಗಡಿಸಿ ಹೇಳಿಕೊಡಲಾಗುತ್ತದೆ’ ಎಂದು ವಿವರಿಸಿದರು.

‘ಉಚ್ಚಾರಣೆಗೆ ಹೆಚ್ಚು ಒತ್ತು ಕೊಡಲಾಗಿದ್ದು, ಪ್ರತಿ ಶ್ಲೋಕವನ್ನು ಮೂರು ಸಲ ಹೇಳಿಕೊಡಲಾಗುವುದು.ಭಗವದ್ಗೀತೆಯನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಉದ್ದೇಶದಿಂದ ಎಲ್ಲ ಭಾಷೆಗಳಲ್ಲಿಯೂ ಆನ್‌ಲೈನ್ ತರಗತಿ ನಡೆಸಲಾಗುತ್ತದೆ’ ಎಂದರು.

‘ಗಣೇಶೋತ್ಸವಕ್ಕೆ ಅವಕಾಶ ನೀಡಿ’

‘ಸರ್ಕಾರವುಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅವಕಾಶ ನೀಡಬೇಕು. ಕೋವಿಡ್‌ ನಿರ್ಬಂಧಗಳೊಂದಿಗೆ ಕಳೆದ ಬಾರಿ ಅವಕಾಶ ನೀಡಲಾಗಿತ್ತು. ಹೀಗಾಗಿ, ಈ ಬಾರಿಯೂ 40ರಿಂದ 50 ಜನ ಸೇರಿ ಹಬ್ಬ ಆಚರಿಸಲು ಅನುಮತಿ ನೀಡಬೇಕು’ ಎಂದು ಜಗನ್ನಾಥ ಶಾಸ್ತ್ರಿ ಒತ್ತಾಯಿಸಿದರು.

‘ಮಸೀದಿ, ಚರ್ಚ್‌ಗಳಲ್ಲಿಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಅದರಂತೆ ಹಿಂದೂಗಳ ಹಬ್ಬಕ್ಕೂ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT