ಶುಕ್ರವಾರ, ಫೆಬ್ರವರಿ 3, 2023
25 °C
ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಆರ್‌.ಆರ್‌. ನಗರದಲ್ಲೂ ಮತದಾರರ ಪಟ್ಟಿ ಅಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ವ್ಯಾಪಕ ಅಕ್ರಮ ನಡೆದಿದೆ. ‌1.30 ಲಕ್ಷ ಮತದಾರರ ಹೆಸರು ಅನಧಿಕೃತವಾಗಿ ಸೇರ್ಪಡೆಯಾಗಿದ್ದು, 75 ಸಾವಿರ ಹೆಸರು ಕೈಬಿಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ರಾಜ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಅವರಿಗೆ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್ ಮತ್ತು ಕ್ಷೇತ್ರದ ಪಕ್ಷದ ನಾಯಕಿ ಎಚ್‌. ಕುಸುಮಾ ಅವರು ದೂರು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸುರೇಶ್‌, ‘ಕ್ಷೇತ್ರದ ಮತದಾರರ ಪಟ್ಟಿ ಪರಿಶೀಲಿಸಿದಾಗ, ಸಾಕಷ್ಟು ನಕಲಿ ಹೆಸರುಗಳು ಸೇರ್ಪಡೆಯಾಗಿರುವುದು ಗೊತ್ತಾಗಿದೆ. ಕ್ಷೇತ್ರದಲ್ಲಿನ ಕಾಂಗ್ರೆಸ್ ಬೆಂಬಲಿಗರು ಹಾಗೂ ಒಕ್ಕಲಿಗ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಆರೋಪಿಸಿದರು.

‘ಚಿಲುಮೆ ಎಂಬ ಸಂಸ್ಥೆ ಮೂಲಕ ಬಿಜೆಪಿ ನಾಯಕರು, ಸಚಿವರು, ಶಾಸಕರು ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಅಕ್ರಮ ಮಾಡಿದ್ದಾರೆ. ಆರ್‌.ಆರ್‌. ನಗರ ಕ್ಷೇತ್ರದಲ್ಲಿ 2018ರಿಂದ 2022 ಜನವರಿವರೆಗೆ ಸುಮಾರು 90 ಸಾವಿರ ಮತಗಳ ಸೇರ್ಪಡೆ ಮಾಡಲಾಗಿದೆ. 2022ರ ಜ.2ರಿಂದ ನ. 9ರವರೆಗೆ ಸುಮಾರು 40 ಸಾವಿರ ಮತದಾರರ ಹೆಸರು ಸೇರ್ಪಡೆ ಮಾಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗದ ಆಯುಕ್ತರ ಗಮನಕ್ಕೆ ತಂದಿದ್ದೇವೆ’ ಎಂದರು.

‘2018 ಮೇ ತಿಂಗಳಿನಿಂದ 2022ರ ಜನವರಿ ವೇಳೆಗೆ ಸುಮಾರು 40 ಸಾವಿರ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆ ಬಳಿಕ, 26 ಸಾವಿರ ‌ಹೆಸರು ಕೈಬಿಡಲಾಗಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಆ ಮೂಲಕ, 75 ಸಾವಿರ ಮತಗಳನ್ನು ತೆಗೆದುಹಾಕಲಾಗಿದೆ. ಕ್ಷೇತ್ರದ ಶಾಸಕರು ಹಾಗೂ ಸಚಿವರ ನಿರ್ದೇಶನದ ಮೇರೆಗೆ ನಮೂನೆ 6 ಮತ್ತು 7 ಇಲ್ಲದೆ ಪಟ್ಟಿ ಪರಿಷ್ಕರಿಸಲಾಗಿದೆ. ಬೂತ್ ಮಟ್ಟದಲ್ಲಿ ಕಳೆದ 10 ದಿನಗಳಿಂದ ಮತಗಳ ಸಮೀಕ್ಷೆ ಮಾಡಿದ ಸಮಯದಲ್ಲಿ ಖಾಲಿ ನಿವೇಶನಗಳ ವಿಳಾಸದಲ್ಲಿ 45 ಮತಗಳ ಸೇರ್ಪಡೆಯಾಗಿರುವುದು ಗೊತ್ತಾಗಿದೆ. ಪ್ರತಿ ಬೂತ್‌ನಲ್ಲಿ 20ರಿಂದ 25 ಹೆಸರು ಸೇರಿಸಲಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ’ ಎಂದರು.

ಹನುಮಂತರಾಯಪ್ಪ, ಲಗ್ಗೆರೆ ಬ್ಲಾಕ್ ಅಧ್ಯಕ್ಷ ಅಮರನಾಥ್, ರಾಜರಾಜೇಶ್ವರಿ ನಗರ ಬ್ಲಾಕ್ ಅಧ್ಯಕ್ಷ ರಾಂಪುರ ನಾಗೇಶ್, ಯಶವಂತಪುರ ಬ್ಲಾಕ್ ಅಧ್ಯಕ್ಷ ಗೋಪಾಲಕೃಷ್ಣ ಇದ್ದರು.

‘ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ’

ಬೆಂಗಳೂರು: ‘ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಸುವಷ್ಟು ಕೀಳುಮಟ್ಟದ ರಾಜ
ಕಾರಣ ಮಾಡುವುದಿಲ್ಲ. ನನ್ನ ತೇಜೋವಧೆ ಮಾಡಿ ಚುನಾವಣೆ ಗೆಲ್ಲುತ್ತೇವೆ ಎಂಬ ಕನಸು ಬಿಟ್ಟುಬಿಡಿ’ ಎಂದು ಆರ್‌.ಆರ್‌. ನಗರ ಕ್ಷೇತ್ರದ ಶಾಸಕರೂ ಆಗಿರುವ ತೋಟಗಾರಿಕಾ ಸಚಿವ ಮುನಿರತ್ನ ಅವರು ಡಿ.ಕೆ. ಸುರೇಶ್‌ಗೆ ತಿರುಗೇಟು ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮತದಾರರ ಪಟ್ಟಿಗೆ ಹೆಸರು ಸೇರಿಸುವುದು, ತೆಗೆಸುವುದು ನಮ್ಮ ಅಭ್ಯಾಸವಲ್ಲ. ಅದು ನಿಮ್ಮ
ಅಭ್ಯಾಸ. ನಾನು ನಾಮಪತ್ರ ಸಲ್ಲಿಸಿ ಮತ
ಯಾಚನೆ ಮಾಡುವುದಿಲ್ಲ. ನೀವೂ ಆ ರೀತಿ ಮಾಡಿ, ತೀರ್ಮಾನ ಜನರಿಗೆ ಬಿಡೋಣ’ ಎಂದರು.

‘ಏಳು ವರ್ಷ ಕಾಂಗ್ರೆಸ್‌ ಜತೆಯಲ್ಲಿದ್ದೆ. ಆಗ ಮತದಾರರ ಹೆಸರು ಡಿಲಿಟ್‌ ಆಗಿರಲಿಲ್ಲ. ಈಗ ಬಿಜೆಪಿಯಲ್ಲಿ ಇರುವುದಕ್ಕೆ ಡಿಲಿಟ್‌ ಆಗಿದೆಯಾ?  ನಿಮ್ಮ ಜತೆ ಇದ್ದಾಗ ನಾನು ಪವಿತ್ರ, ಈಗ ಅಪವಿತ್ರನಾ?’ ಎಂದು ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾಜಕೀಯ ಬಿಟ್ಟು ಕೂಲಿ ಕೆಲಸ ಬೇಕಾದರೂ ಮಾಡುತ್ತೇನೆ. ಆದರೆ, ಮತ್ತೆ ಕಾಂಗ್ರೆಸ್‌ ಸಹವಾಸ ಮಾತ್ರ ಮಾಡುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು