ಸೋಮವಾರ, ಅಕ್ಟೋಬರ್ 14, 2019
23 °C
ಮತದಾರರ ಪಟ್ಟಿ ಪರಿಷ್ಕರಣೆ

ಬೆಂಗಳೂರು: ಹೊಸ ಮತದಾರರ ನೋಂದಣಿಗೆ ಅಕ್ಟೋಬರ್‌ 15ರವರೆಗೆ ಅವಕಾಶ

Published:
Updated:

ಬೆಂಗಳೂರು: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, ಅಕ್ಟೋಬರ್‌15ರವರೆಗೆ ಹೊಸ ಮತದಾರರ ನೋಂದಣಿಗೆ ಹಾಗೂ ಹೆಸರು, ವಿಳಾಸ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. 

ಈ ಕುರಿತು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, 'ನಾಗರಿಕ ಸೇವಾ ಕೇಂದ್ರಗಳಲ್ಲಿ ಹೊಸ ಮತದಾರರು ಹೆಸರು ನೋಂದಣಿ ಮಾಡಬಹುದು. ಅರ್ಜಿ ಸ್ವೀಕರಿಸಿದ ಬಳಿಕ, ಅಕ್ಟೋಬರ್‌ 16ರಿಂದ ಮನೆಮನೆಗೆ ಹೋಗಿ ಪರಿಶೀಲನೆ ನಡೆಸಲಾಗುತ್ತದೆ' ಎಂದರು.  

'ಮತದಾರರ ವಾಸ್ತವ್ಯದ ಸ್ಥಳದಿಂದ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಮತಗಟ್ಟೆ ಲಭ್ಯ ಇರಬೇಕು. ಮತಗಟ್ಟೆಗಳ ಬದಲಾವಣೆ ಅಗತ್ಯ ಇದ್ದರೂ ಪರಿಷ್ಕರಣೆ ವೇಳೆ ಅವಕಾಶ ನೀಡಲಾಗುವುದು. ಎಲ್ಲಾ ಅರ್ಹ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳುವುದು ಸಮಗ್ರ ಪರಿಷ್ಕರಣೆಯ ಗುರಿ’ ಎಂದು ಹೇಳಿದರು.

ಬೆಂಗಳೂರಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8,514 ಮತಗಟ್ಟೆಗಳಿದ್ದು ಸದ್ಯ 91,00,207 ಮತದಾರರಿದ್ದಾರೆ. ರಾಜ್ಯದಲ್ಲಿ ನೆರೆಹಾವಳಿ ಇದ್ದಿದ್ದರಿಂದ ಮತದಾರರ ಪಟ್ಟಿ ಪರಿಶೀಲನೆ ತಡವಾಗಿ ಮಾಡಲಾಗುತ್ತಿದೆ. ಮತದಾರರಿಗೆ ಯಾವುದೇ ಗೊಂದಲಗಳಿದ್ದಲ್ಲಿ 1950 ಮತದಾರರ ಸಹಾಯವಾಣಿಗೆ ಕರೆ ಮಾಡಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

ನೋಂದಣಿಗೆ ಮತದಾರರು ಸಲ್ಲಿಸಬಹುದಾದ ವಿವರಗಳು

1. ಪಾಸ್ ಪೋರ್ಟ್
2. ಚಾಲನಾ ಪರವಾನಗಿ
3. ಆಧಾರ್ ಪತ್ರ
4. ಪಡಿತರ ಚೀಟಿ
5. ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ
6. ಬ್ಯಾಂಕ್ ಪಾಸ್ ಬುಕ್
7. ರೈತರ ಗುರುತಿನ ಚೀಟಿ
8. ಚುನಾವಣಾ ಆಯೋಗ ನಮೂದಿಸಿರುವ ಇತರ ಯಾವುದೇ ದಾಖಲೆಗಳು

Post Comments (+)