ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವೃಷಭಾವತಿ ತಡೆಗೋಡೆ ಕಾಮಗಾರಿಗೂ ಅಡ್ಡಿ

Last Updated 24 ಅಕ್ಟೋಬರ್ 2020, 21:55 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಬಳಿ ಇತ್ತೀಚೆಗೆ ಕೊಚ್ಚಿಹೋದ ವೃಷಭಾವತಿ ರಾಜಕಾಲುವೆಯ ತಡೆಗೋಡೆ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿರುವ ನಡುವೆಯೇ ಶುಕ್ರವಾರ ಸುರಿದ ಮಳೆಗೆ ಮೈಸೂರು ರಸ್ತೆಯಲ್ಲಿ ಪ್ರವಾಹ ಸ್ಥಿತಿ ಉಂಟು ಮಾಡಿತ್ತು.

ತಡೆಗೋಡೆ ಕಾಮಗಾರಿ ಬಹುತೇಕ ಮುಕ್ತಯವಾಗಿದ್ದು, ವೃಷಭಾವತಿ ಕಡೆಯಿಂದ ರಾಜಕಾಲುವೆ ನೀರು ರಸ್ತೆಗೆ ಉಕ್ಕಲಿಲ್ಲ. ಬದಲಿಗೆ ದುಬಾಸಿಪಾಳ್ಯ ಕಡೆಯಿಂದ ಬಂದಿರುವ ಕಾಲುವೆ ನೀರು ರಸ್ತೆ ಆವರಿಸಿಕೊಂಡಿತು.

ದುಬಾಸಿಪಾಳ್ಯ ಕಡೆಯಿಂದ ಬರುವ ಕಾಲುವೆ ಮೈಸೂರು ರಸ್ತೆಯನ್ನು ಹಾದು ವೃಷಭಾವತಿ ರಾಜಕಾಲುವೆ ತಲುಪಬೇಕು. ರಸ್ತೆಗೆ ಅಡ್ಡಲಾಗಿ ಒಂದೇ ಒಂದು ಪೈಪ್ ಅಳವಡಿಸಲಾಗಿದೆ. ಇಡೀ ಕಾಲುವೆಯ ನೀರು ಅದೇ ಪೈಪ್‌ನಿಂದ ರಾಜಕಾಲುವೆಗೆ ಸೇರಬೇಕು.

ಶುಕ್ರವಾರ ಒಮ್ಮೆಲೆ ಆರ್ಭಟಿಸಿದ ಮಳೆಯಿಂದ ಭಾರಿ ಪ್ರಮಾಣದ ನೀರು ಹರಿದು ಬಂತು. ಕಿರಿದಾದ ಕಾಲುವೆಯಲ್ಲಿ ಸಾಗಲು ಸಾಧ್ಯವಾಗದೆ ರಸ್ತೆಯ ಮೇಲೆ ಉಕ್ಕಿತು. ಮೆಟ್ರೊ ಪಿಲ್ಲರ್ ಜತೆಗೆ ರಸ್ತೆ ವಿಭಜಕ ಕೂಡ ಇದ್ದಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು ಎಂದು ಸ್ಥಳೀಯರು ಹೇಳಿದರು.

ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇತ್ತು. ಅಲ್ಲೀಯೂ ನೀರು ಪ್ರವಾಹದ ರೀತಿ ಹರಿದಿದ್ದರಿಂದ ಸಂಚಾರಕ್ಕೆ ಅಡಚಣೆ ಆಯಿತು ಎಂದರು. ‌

ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲೂ ನೀರು ತುಂಬಿಕೊಂಡಿರುವ ಕಾರಣ ಕೆಲಸ ಸ್ಥಗಿತಗೊಂಡಿದೆ. ‘ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ, ರಾಜಕಾಲುವೆಯಿಂದ ರಸ್ತೆಗೆ ನೀರು ಉಕ್ಕಲು ಇನ್ನು ಅವಕಾಶ ಇಲ್ಲ. ದುಬಾಸಿಪಾಳ್ಯ ಕಡೆಯಿಂದ ಬರುವ ನೀರು ರಸ್ತೆಗೆ ಹರಿಯುವ ಸಮಸ್ಯೆ ತಪ್ಪಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಬಿಬಿಎಂಪಿ ರಾಜಕಾಲುವೆ ವಿಭಾಗದ ಅಧಿಕಾರಿಗಳು ಹೇಳಿದರು.

ಬಸವನಗುಡಿಯಲ್ಲೂ ಅವಾಂತರ: ಬಸವನಗುಡಿ, ಗಾಂಧಿ ಬಜಾರ್ ಸುತ್ತಮುತ್ತಲ ಪ್ರದೇಶದಲ್ಲೂ ಶುಕ್ರವಾರ ರಾತ್ರಿ ರಸ್ತೆಯಲ್ಲಿ ನೀರು ಹರಿದು ಅವಾಂತರ ಸೃಷ್ಟಿಸಿತು. ರಸ್ತೆಯಲ್ಲಿ ಹರಿದ ನೀರಿನ ನಡುವೆ ವಾಹನ ಸವಾರರು ಪರದಾಡಿದರು.

‘ಈ ಪ್ರದೇಶದಲ್ಲಿ ರಾಜಕಾಲುವೆ ಸಮಸ್ಯೆ ಇಲ್ಲ. ಆದರೆ, ಒಮ್ಮೆಲೆ ಭಾರಿ ಮಳೆ ಸುರಿದ ಕಾರಣ ನೀರು ಹರಿದು ಹೋಗಲು ಸಮಯ ಬೇಕಾಯಿತು. ಮಳೆ ನಿಂತ ಬಳಿಕ ಒಂದೇ ಗಂಟೆಯಲ್ಲಿ ಖಾಲಿ ಆಯಿತು’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT