ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಗೋಡೆ ಮರುನಿರ್ಮಾಣ: ಭರದ ಕಾಮಗಾರಿ

ಮಳೆಗೆ ಕುಸಿದಿದ್ದ ಗೋಡೆ * ಮರಳು ಮೂಟೆ ಜೋಡಿಸುವ ಕಾರ್ಯ ಚುರುಕು
Last Updated 27 ಜೂನ್ 2020, 20:08 IST
ಅಕ್ಷರ ಗಾತ್ರ

ಬೆಂಗಳೂರು: ಕೊಚ್ಚಿ ಹೋಗಿರುವ ವೃಷಭಾವತಿ ರಾಜಕಾಲುವೆಯ ತಡೆಗೋಡೆ ಮರುನಿರ್ಮಾಣ ಕಾಮಗಾರಿ ಚುರುಕಿನಿಂದ ಸಾಗಿದೆ.

ಮಳೆ ಬಂದು ನದಿಯ ನೀರಿನ ಪ್ರಮಾಣ ಜಾಸ್ತಿಯಾದರೆ ರಸ್ತೆ ಮತ್ತಷ್ಟು ಕೊಚ್ಚಿ ಹೋಗುವ ಸಾಧ್ಯತೆ ಇದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಮರಳು ಮೂಟೆಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ.

ರಸ್ತೆಯ ಕಡೆಗೆ ಇದ್ದ ನೀರಿನ ಹರಿವನ್ನು ಮಣ್ಣು ತುಂಬಿಸಿ ಬೇರೆಡೆಗೆ ತಿರುಗಿಸಲಾಗಿದೆ. ಇನ್ನೊಂದು ಬದಿಯಲ್ಲಿದ್ದ ಹೂಳನ್ನು ಹಿಟಾಚಿ ಯಂತ್ರದ ಮೂಲಕ ತೆಗೆಯುವ ಕೆಲಸವೂ ಆರಂಭವಾಗಿದೆ.

‘ಮರಳು ಮೂಟೆಗಳನ್ನು ಯಂತ್ರಗಳಿಂದ ಜೋಡಿಸಲು ಆಗುವುದಿಲ್ಲ. ಬೇರೆ ಕಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕರೆತಂದು ತುರ್ತು ಕಾಮಗಾರಿ ನಿರ್ವಹಿಸಲಾಗುತ್ತಿದೆ. ಶನಿವಾರ 25 ಕಾರ್ಮಿಕರು ಮರಳು ಮೂಟೆಗಳನ್ನು ಜೋಡಿಸಿದ್ದು, ಭಾನುವಾರ ಇನ್ನಷ್ಟು ಜನರನ್ನು ಕರೆತಂದು ತ್ವರಿತವಾಗಿ ಕೆಲಸ ಮುಗಿಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

‘ಮೂಟೆ ಜೋಡಿಸುವ ಕೆಲಸ ಮುಗಿದರೆ ಸೋಮವಾರದಿಂದ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಮಳೆ ನೀರು ಎಷ್ಟೇ ರಭಸವಾಗಿ ಬಂದರೂ ಗೋಡೆ ಅಲುಗಾಡದಂತೆ ಅಡಿಪಾಯ ಗಟ್ಟಿಗೊಳಿಸಲಾಗುವುದು’ ಎಂದು ವಿವರಿಸಿದರು.

ತಡೆಗೋಡೆಗೆ₹5 ಕೋಟಿ

ತಡೆಗೋಡೆ ಮರುನಿರ್ಮಾಣಕ್ಕೆ ₹5 ಕೋಟಿ ವೆಚ್ಚವಾಗಲಿದೆ ಎಂದು ಬಿಬಿಎಂಪಿ ಅಂದಾಜಿಸಿದೆ.

‘ತಡೆಗೋಡೆ ಕೊಚ್ಚಿ ಹೋಗಿರುವ ಜಾಗದಲ್ಲೇ ದುಬಾಸಿಪಾಳ್ಯ ಕೆರೆಯಿಂದ ನೀರು ಹರಿದು ಬರುವ ಮೋರಿ ಇದೆ. ಇದು ಮೈಸೂರು ರಸ್ತೆಯನ್ನು ಹಾದು ವೃಷಭಾವತಿ ನದಿಗೆ ಸೇರಲಿದೆ. ಚಿಕ್ಕದಾಗಿರುವ ಈ ಮೋರಿಯನ್ನು ವಿಸ್ತರಿಸಬೇಕು’ ಎಂದು ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ತಿಳಿಸಿದರು.

‘ಮೆಟ್ರೊ ಕಂಬಗಳಿಗೆ ಅಪಾಯವಿಲ್ಲ’

‘ತಡೆಗೋಡೆ ಕೊಚ್ಚಿ ಹೋಗಿರುವ ಸ್ಥಳದಿಂದ ನಮ್ಮ ಮೆಟ್ರೊ ಎತ್ತರಿಸಿದ ಮಾರ್ಗದ ಪಿಲ್ಲರ್ಗಳು ಸ್ವಲ್ಪ ದೂರದಲ್ಲಿದ್ದು, ಅವುಗಳಿಗೆ ಯಾವುದೇ ಅಪಾಯವಿಲ್ಲ’ ಎಂದು ಬಸವರಾಜ್ ಕಬಾಡೆ ಹೇಳಿದರು.

‘ಕೆಪಿಟಿಸಿಎಲ್‌ನ 220 ಕೆವಿ ವಿದ್ಯುತ್ ಮಾರ್ಗದ ಕೇಬಲ್‌ಗಳು ತಡೆಗೋಡೆಯ ಪಕ್ಕದಲ್ಲೇ ಹಾದು ಹೋಗಿವೆ. ಅವಘಡ ಸಂಭವಿಸಿದಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅವುಗಳಿಗೆ ಯಾವುದೇ ತೊಂದರೆ ಆಗಿಲ್ಲ. ಕಾಮಗಾರಿ ನಿರ್ವಹಿಸಲು ಅವುಗಳನ್ನು ಮೇಲಕ್ಕೆ ತೆಗೆಯಲಾಗಿದೆ. ಮತ್ತೆ ಅಲ್ಲೇ ಜೋಡಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT