ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು: ಮೂರೇ ತಿಂಗಳಿಗೆ ಸೆಮಿಸ್ಟರ್ ಪೂರ್ಣ

ಪದವಿ ಕಾಲೇಜುಗಳಲ್ಲೂ ಅವ್ಯವಸ್ಥೆ, ವಿದ್ಯಾರ್ಥಿಗಳು ಹೈರಾಣ
Last Updated 8 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ (ವಿಟಿಯು) ಮೂರೇ ತಿಂಗಳಿಗೆ ಸೆಮಿಸ್ಟರ್‌ ಮುಗಿಸಿ, ಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಆಕ್ರೋಶವ್ಯಕ್ತಪಡಿಸಿದ್ದಾರೆ.

ವಿಟಿಯು ವ್ಯಾಪ್ತಿಯಲ್ಲಿ 208 ಎಂಜಿನಿಯರಿಂಗ್‌ ಕಾಲೇಜುಗಳಿದ್ದು, 2.65 ಲಕ್ಷ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದಾರೆ. ಮೇ 23ರಂದು ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್‌ಗಳು ಆರಂಭವಾಗಿದ್ದವು. ನಿಯಮದಂತೆಬೋಧನೆಯ ಅವಧಿ ಕನಿಷ್ಠ 4 ತಿಂಗಳು ಇರಬೇಕು. ಆದರೆ, ಶೇ 70ರಷ್ಟು ಪಾಠಗಳು ಪೂರ್ಣವಾಗುವ ಮುನ್ನವೇಪರೀಕ್ಷಾ ವೇಳಾಪಟ್ಟಿ (ಸೆ.17ರಂದು ಆರಂಭ)
ಪ್ರಕಟಿಸಲಾಗಿದೆ.

ನಾಲ್ಕು ವರ್ಷಗಳ ಎಂಜಿನಿಯರಿಂಗ್‌ ಪದವಿ ಶಿಕ್ಷಣದಲ್ಲಿ ಕೌಶಲದ ವಿಷಯ, ತಾಂತ್ರಿಕ, ಬೌದ್ಧಿಕ ವಿಷಯಗಳಿರುತ್ತವೆ. ಅವುಗಳಲ್ಲಿ ಕೆಲ ಅಂಶಗಳನ್ನು ಕಡಿತಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದರೂ, ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ಇಲ್ಲ. ಅಧ್ಯಾಪಕರು ಪಠ್ಯಕೌಶಲ ಕಲಿಸದೆ, ಪಠ್ಯಕ್ರಮ ಪೂರ್ಣಗೊಳಿಸುತ್ತಿದ್ದಾರೆ.

ಹಲವು ಕಾಲೇಜುಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಕಾಲೇಜುಗಳು ನಡೆಯುತ್ತವೆ. ಫಲಿತಾಂಶವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೆಲವು ಕಾಲೇಜುಗಳು ಸಂಜೆ 6.30ರಿಂದ 11ರವರೆಗೆ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ.ಮೂರು ತಿಂಗಳಲ್ಲಿ ಸರಾಸರಿ ಏಳು ಪತ್ರಿಕೆ, ಎರಡು ಪ್ರಾಕ್ಟಿಕಲ್, ಅಸೈನ್ಮೆಂಟ್, ಇಂಟರ್ನಲ್ಸ್ ಎಂದು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪ್ರಾಧ್ಯಾಪಕರು ಬಿಡುವು ನೀಡದೇ ಪಠ್ಯ ವಿಷಯಗಳನ್ನು ತಲೆಗೆ ತುಂಬುತ್ತಿದ್ದಾರೆ ಎನ್ನುವುದು ಬಹುತೇಕ ವಿದ್ಯಾರ್ಥಿಗಳ
ಅಳಲು.

ಪದವಿ ಕಾಲೇಜುಗಳಲ್ಲೂ ಪರದಾಟ: ಪೂರ್ವಸಿದ್ಧತೆ ಮಾಡಿಕೊಳ್ಳದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದ ಪದವಿ ಕಾಲೇಜುಗಳಲ್ಲಿ ತರಾತುರಿಯಲ್ಲಿ ಅನುಷ್ಠಾನಗೊಳಿಸಿದ್ದರಿಂದ ಸಕಾಲಕ್ಕೆ ಸೆಮಿಸ್ಟರ್‌ಗಳನ್ನು ಮುಗಿಸಲು ಸಾಧ್ಯವಾಗಿಲ್ಲ. ಮೊದಲನೇ ಸೆಮಿಸ್ಟರ್‌ಗೆ ಹೆಚ್ಚು ಸಮಯ ತೆಗೆದುಕೊಂಡ ಕಾಲೇಜುಗಳು, ಅಲ್ಪಾವಧಿಯಲ್ಲೇ 2ನೇ ಸೆಮಿಸ್ಟರ್‌ ಮುಗಿಸುವ ಒತ್ತಡ ಎದುರಿಸುತ್ತಿವೆ.

ಎರಡನೇ ಸೆಮಿಸ್ಟರ್‌ ಮುಗಿಯುವ ಮೊದಲೆ ಹಲವು ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಪ್ರಥಮ ವರ್ಷದ ತರಗತಿಗಳನ್ನು ಸೆ.1ರಿಂದ ನಡೆಸಲಾಗುತ್ತಿದೆ. ಇದರಿಂದ ಮೊದಲ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಕೊಠಡಿಗಳಿಲ್ಲದೆ ಹೊಸ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

‘ಒಂದೇ ಕೊಠಡಿಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಹಳೆಯ ವಿದ್ಯಾರ್ಥಿಗಳು ಹೋಗದ ಕಾರಣ ಹಾಸ್ಟೆಲ್‌ಗಳಲ್ಲೂ ಪ್ರವೇಶ ದೊರೆತಿಲ್ಲ’ ಎನ್ನುತ್ತಾರೆ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಆರ್.ಕೆ.ಮಂಜುನಾಥ್‌.

***

ಎಐಸಿಟಿಇ ಅನ್ವಯವೇ ಶೈಕ್ಷಣಿಕ, ಪರೀಕ್ಷಾ ವೇಳಾ‍ಟ್ಟಿ ನಿಗದಿ ಮಾಡಲಾಗಿದೆ. ಪಾಠಗಳನ್ನೂ ಪೂರ್ಣಗೊಳಿಸಲಾಗಿದೆ. ವಿದ್ಯಾರ್ಥಿಗಳ ಆರೋಪದಲ್ಲಿ ಹುರುಳಿಲ್ಲ

- ಪ್ರೊ.ರಂಗಸ್ವಾಮಿ, ಪರೀಕ್ಷಾಂಗ ಕುಲಸಚಿವ, ವಿಟಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT