ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ ಪುರ ಹಬ್ಬಕ್ಕೆ ಚಾಲನೆ

Last Updated 26 ನವೆಂಬರ್ 2022, 15:32 IST
ಅಕ್ಷರ ಗಾತ್ರ

ಬೆಂಗಳೂರು: ಸರ್‌ ಎಂ. ವಿಶ್ವೇಶ್ವರಯ್ಯ ಅವರ ನಕ್ಷೆಯಂತೆ ನಿರ್ಮಾಣವಾದ ವಿ.ವಿ. ಪುರ ಬಡಾವಣೆಗೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ವಿ.ವಿ ಪುರ ಹಬ್ಬ’ ಹಬ್ಬಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಸಾಂಸ್ಕೃತಿಕ ಉತ್ಸವ, ಕಲಾಮೇಳ ಮತ್ತು ಆಹಾರ ಮೇಳ, ರಂಗೋಲಿ ಸ್ಪರ್ಧೆ, ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿ.ವಿ.ಪುರ ಹಬ್ಬ ಹಾಗೂ ಸಜ್ಜನ್ ರಾವ್ ವೃತ್ತ ಉದ್ಯಾನಕ್ಕೆ ಶಾಸಕ ಉದಯ್ ಬಿ.ಗರುಡಾಚಾರ್‌ ಶನಿವಾರ ಚಾಲನೆ ನೀಡಿದರು.

‘ನಗರದ ಇತಿಹಾಸಕ್ಕೆ ಮೆರುಗು ನೀಡುವಂತೆ ಮೊದಲ ಬಾರಿಗೆ ವಿ.ವಿ.ಪುರ ಹಬ್ಬವನ್ನು ಆಚರಿಸಲಾಗುತ್ತಿದೆ.ಬೆಳ್ಳಿ ತೇರು ಉತ್ಸವ ನಡೆಯುತ್ತದೆ. ಪ್ರತಿವರ್ಷವೂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ. ಹಬ್ಬದಲ್ಲಿ ಎಲ್ಲಾ ಧರ್ಮೀಯರಿಗೂ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗುವುದು. ಯಾವುದೇ ವಿವಾದ ಇಲ್ಲದೆ ಮುಕ್ತವಾಗಿ ವ್ಯಾಪಾರ ಮಾಡಲು ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದು. ನಾನು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದೆ. ಹೀಗಾಗಿ, ಈ ಹಬ್ಬದಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಬೇಕು’ ಎಂದು ತಿಳಿಸಿದರು.

‘ಸರ್.ಎಂ.ವಿ. ಅವರು ಶಿಸ್ತು, ನಿಯಮ ಪಾಲನೆ, ಶ್ರದ್ಧೆಯಿಂದ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಮುಂದಿನ ಪೀಳಿಗೆಗೆ ವಿಶ್ವೇಶ್ವರಯ್ಯರವರ ಜೀವನ, ಸಾಧನೆ ಅರಿತುಕೊಳ್ಳಲಿ ಎಂಬ ಉದ್ದೇಶದಿಂದ ಈ ಹಬ್ಬ ಆಚರಿಸಲಾಗುತ್ತಿದೆ’ ಎಂದರು.

ಸರ್.ಎಂ.ವಿಶ್ವೇಶ್ವರಯ್ಯರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಜೊತೆಗೆ, ಸಸಿ ನೆಡುವ ಮೂಲಕ ವಿ.ವಿ.ಪುರ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗರುಡಾ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗರುಡಾಚಾರ್ ಇದ್ದರು. ಕಲಾ ತಂಡಗಳು ಸಾಂಸ್ಕೃತಿಕ ನೃತ್ಯ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT