ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಯ ಜಾಮೀನಿಗೆ ಹಣ ಹೊಂದಿಸಲು ಗಾಂಜಾ ಮಾರಾಟ

ವಿ.ವಿ.ಪುರ ಠಾಣೆ ‍ಪೊಲೀಸರಿಂದ ನಾಲ್ವರ ಬಂಧನ
Last Updated 19 ಜನವರಿ 2022, 17:04 IST
ಅಕ್ಷರ ಗಾತ್ರ

ಬೆಂಗಳೂರು: ರೌಡಿ ಸ್ಟಾರ್‌ ರಾಹುಲ್‌ನ ಜಾಮೀನಿಗಾಗಿ ಹಣ ಹೊಂದಿಸಲು ಗಾಂಜಾ ಮಾರಾಟಕ್ಕಿಳಿದಿದ್ದ ನಾಲ್ವರನ್ನು ವಿ.ವಿ.‍ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹ 6 ಲಕ್ಷ ಮೌಲ್ಯದ 20 ಕೆ.ಜಿ. 600 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಹೊಂಡಾ ಸಿಟಿ ಕಾರು, ಲಾಂಗ್‌, ನಗದು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

‘ರಾಘವನಗರದ ಎನ್‌.ಪುರುಷೋತ್ತಮ್‌ ಯಾನೆ ಮಂಜ (26), ಶ್ರೀನಗರದ ಆರ್‌.ಕಿರಣ್‌ (21), ಕಾಟನ್‌ಪೇಟೆಯ ವಿ.ಕಾರ್ತಿಕ್‌ (21) ಹಾಗೂ ಕನಕನಪಾಳ್ಯದ ಎಲ್‌.ರಾಹುಲ್‌ ಯಾನೆ ತೊಡೆ (28) ಬಂಧಿತರು. ಆರೋಪಿಗಳು ರೌಡಿಶೀಟರ್‌ಗಳಾದ ಕುಳ್ಳು ರಿಜ್ವಾನ್‌, ಸ್ಟಾರ್‌ ರಾಹುಲ್‌ ಹಾಗೂ ಭರತನ ಸಹಚರರಾಗಿದ್ದಾರೆ’ ಎಂದು‍ಪೊಲೀಸರು ತಿಳಿಸಿದ್ದಾರೆ.

‘ರೌಡಿಶೀಟರ್‌ ಸ್ಟಾರ್‌ ರಾಹುಲ್‌ನನ್ನುಹನುಮಂತನಗರ ಠಾಣೆಯ ಪೊಲೀಸರು ಇದೇ 17ರಂದು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು. ಆತನಿಗೆ ಜಾಮೀನು ಕೊಡಿಸಲು ಕುಳ್ಳು ರಿಜ್ವಾನ್‌, ಭರತ ಹಾಗೂ ಆಟೊ ವಿಜಿ ಬಳಿ ಹಣ ಇರಲಿಲ್ಲ. ಹೀಗಾಗಿ ಹೊರ ರಾಜ್ಯದಿಂದ ಗಾಂಜಾ ತರಿಸಿಕೊಂಡು ಅದನ್ನು ದಾಸ್ತಾನು ಇಟ್ಟಿದ್ದರು. ಇದೇ 18ರಂದು ಬಂಧಿತ ಆರೋಪಿಗಳು ಭರತನ ಹೊಂಡಾ ಸಿಟಿ ಕಾರಿನ ಡಿಕ್ಕಿಯಲ್ಲಿ ಗಾಂಜಾ ಇಟ್ಟುಕೊಂಡು ಹಳೆ ಕೋಟೆ ಮೈದಾನದ ಎದುರಿರುವ ಕೆ.ಆರ್‌.ರಸ್ತೆಗೆ ಹೋಗಿದ್ದರು. ಅಲ್ಲಿ ಕಾರು ನಿಲ್ಲಿಸಿಕೊಂಡು ಕುಳ್ಳು ರಿಜ್ವಾನ್‌, ಭರತ ಹಾಗೂ ಆಟೊ ವಿಜಿಗಾಗಿ ಕಾಯುತ್ತಿದ್ದರು. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

‘ಬಂಧಿತ ಎಲ್‌.ರಾಹುಲ್‌ ಈ ಹಿಂದೆ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೊಲೆ ಪ್ರಯತ್ನ ಹಾಗೂ ಇತರ ಪ್ರಕರಣಗಳಲ್ಲಿ ಸಿದ್ದಾಪುರ, ಬನಶಂಕರಿ ಹಾಗೂ ಕೋಣನಕುಂಟೆ ಠಾಣೆ ಪೊಲೀಸರಿಗೆ ಬೇಕಾಗಿದ್ದ. ಆರೋಪಿ ಪುರುಷೋತ್ತಮ್‌ ನೆಲಮಂಗಲ ಬಳಿಯ ಎಸ್‌.ಎಸ್‌.ಟಿ.ಕಾರ್ಗೊ ಮೂವರ್ಸ್‌ ಎಂಬಲ್ಲಿ ಕೊರಿಯರ್‌ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಿರಣ್‌ ಹಾಗೂ ಕಾರ್ತಿಕ್‌ ಈ ಹಿಂದೆ ಬೇಕರಿಗಳಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT