ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಗಾ ವಹಿಸಲು ಪಾಲಿಕೆ 'ವಾರ್ ರೂಂ'

Last Updated 23 ಮಾರ್ಚ್ 2020, 21:30 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡದಂತೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಅನುಷ್ಠಾನದ ಬಗ್ಗೆ ನಿಗಾ ವಹಿಸುವುದೂ ಸೇರಿದಂತೆ ವಿವಿಧ ಸೇವೆಗಳ ನಿರ್ವಹಣೆಗೆ ಹಾಗೂ ಅಗತ್ಯ ಮಾಹಿತಿಯನ್ನು ಸಾರ್ವಜನಿಕರ ಜೊತೆ ಹಂಚಿಕೊಳ್ಳಲು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ‘ವಾರ್‌ ರೂಮ್’ ಆರಂಭಿಸಲಾಗಿದೆ.

ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾ ವಹಿಸುವುದು, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಶಿಕ್ಷಣ ಮತ್ತು ಮಾಹಿತಿ ಹಂಚಿಕೊಳ್ಳುವುದು, ಕಸ ನಿರ್ವಹಣೆಗೆ ಕುರಿತ ಮಾಹಿತಿ ನೀಡುವುದಕ್ಕೂ ಪಾಲಿಕೆ ಕೇಂದ್ರ ಕಚೇರಿಯ ಆನೆಕ್ಸ್ ಕಟ್ಟಡದ 6ನೇ ಮಹಡಿಯಲ್ಲಿ ಸ್ಥಾಪಿಸಿರುವ ಈ ವಾರ್ ರೂಂ ಬಳಕೆ ಯಾಗಲಿದೆ.

ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಈ ಕಮಾಂಡ್ ಆ್ಯಂಡ್ ಕಂಟ್ರೋಲ್ ವಾರ್ ರೂಂ ಅನ್ನು ಮೇಯರ್‌ ಎಂ.ಗೌತಮ್‌ ಕುಮಾರ್‌ ಸೋಮವಾರ ಉದ್ಘಾಟಿಸಿದರು.

‘ಮನೆಯಲ್ಲೇ ಪ್ರತ್ಯೇಕವಾಸದ ಮುದ್ರೆ ಹಾಕಿದವರ ಮೇಲೆ ನಿಗಾ ವಹಿಸುವುದಕ್ಕೆ ಸಂಬಂಧಿಸಿದಂತೆ ವಲಯವಾರು ನಕ್ಷೆ ಸಿದ್ದಪಡಿಸಿ ಅವರ ಜಾಡು ಪತ್ತೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರ ಮಾಹಿತಿಯನ್ನು ಕಲೆ ಹಾಕಿ, ಅವರು 14 ದಿನಗಳ ಕಾಲ ಮನೆಯಿಂದ ಹೊರಗೆ ಬರದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಅವರ ಮೇಲೆ ನಿಗಾ ಇರಿಸಲಾಗುತ್ತದೆ. ಇದರ ಸಿಬ್ಬಂದಿಯು ನಿತ್ಯ ಅವರಿಗೆ ಕರೆ ಮಾಡಿ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ’ ಮೇಯರ್‌ ತಿಳಿಸಿದರು.

‘ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆ ಲಭ್ಯ ಇವೆ, ಸೋಂಕು ಹೆಚ್ಚಾದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಸೋಂಕು ದೃಢಪಟ್ಟವರು ವಾಸಿಸುವ ಪ್ರದೇಶಗಳ ನಕ್ಷೆ ಸಿದ್ಧಪಡಿಸುವ ಕಾರ್ಯವನ್ನು ವಾರ್‌ ರೂಮ್‌ ಮೂಲಕ ನಿರ್ವಹಿಸಲಿದೆ. ಪಾಲಿಕೆ ಕೈಗೊಂಡ ಮುಂಜಾಗ್ರತಾ ಕ್ರಮಗಳು ವಲಯ ಮಟ್ಟದಲ್ಲಿ ಜಾರಿಯಾಗಿವೆಯೇ ಎಂಬ ಬಗ್ಗೆಯೂ ವಾರ್ ರೂಂನಲ್ಲಿ ದಿನದ 24 ಗಂಟೆ ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ನಿಗಾ ವಹಿಸಲಿದ್ದಾರೆ’ ಎಂದರು.

‘ದತ್ತಾಂಶ ಸಂಗ್ರಹ, ಸೋಂಕು ದೃಢಪಟ್ಟ ಪ್ರದೇಶದಲ್ಲಿ ಎಷ್ಟು ಕುಟುಂಬಗಳಿವೆ, ಎಷ್ಟು ಮಂದಿ ವಾಸವಾಗಿದ್ದಾರೆ ಎಂಬ ಮಾಹಿತಿ ಪಟ್ಟಿ ಸಿದ್ಧಪಡಿಸುವ ಕಾರ್ಯವೂ ನಡೆಯಲಿದೆ’ ಎಂದರು.

‘ಕೊರೋನಾ ವೈರಸ್ ಎದುರಿಸಲು ಪಾಲಿಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ವಿದೇಶದಿಂದ ನಗರಕ್ಕೆ ಬಂದಿರುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ, ಅವರ ಮನೆಗೆ ತೆರಳಿ ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡಿರುವ ಕುರಿತ ಮುದ್ರೆ ಹಾಕಲಾಗುತ್ತಿದೆ. ಈ ಕಾರ್ಯಕ್ಕೆ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ 300 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಇಂದು 6 ಸಾವಿರ ಮಂದಿಗೆ ಮುದ್ರೆ ಹಾಕಲಿದ್ದೇವೆ. ನಾಳೆ ಹೆಚ್ಚುವರಿಯಾಗಿ 200 ತಂಡಗಳನ್ನು ನಿಯೋಜನೆ ಮಾಡಲಿದ್ದೇವೆ. ಎಲ್ಲಾರಿಗೂ ಮುದ್ರೆ ಹಾಕಿ, ಮುಂಜಾಗ್ರತೆ ವಹಿಸಲು ಸೂಚನೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ನಗರದ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಮಾರ್ಗಸೂಚಿ ಪುಸ್ತಕವನ್ನು ಹಾಗೂ ಅತ್ಯಾಧುನಿಕ ವೈರ್‌ಲೆಸ್ ಡಿಜಿಟಲ್ ವಾಕಿಟಾಕಿಯನ್ನೂ ಬಿಡುಗಡೆಗೊಳಿಸಲಾಯಿತು.

ಅಂಕಿ ಅಂಶ

ಪಾಲಿಕೆ ವ್ಯಾಪ್ತಿಯಲ್ಲಿ ಮನೆಯಲ್ಲೇ ಪ್ರತ್ಯೇಕ ವಾಸ ಮಾಡಬೇಕಾದವರು -20 ಸಾವಿರ

ಮನೆಯಲ್ಲೇ ಪ್ರತ್ಯೇಕ ವಾಸ ಕುರಿತು ಮುದ್ರೆ ಹಾಕಲಾದವರು -6 ಸಾವಿರ

ಸೋಂಕಿತರಿಗೆ ಕೆಂಪು, ಶಂಕಿತರಿಗೆ ಹಳದಿ ಬಣ್ಣ

ಕೊರೊನಾ ಸೋಂಕಿತರನ್ನು ಕೆಂಪು ಬಣ್ಣ, ಕೊರೊನಾ ಶಂಕಿತರು ಇರುವ ಪ್ರದೇಶವನ್ನು ಹಳದಿ ಬಣ್ಣ ಹಾಗೂ ಆಸ್ಪತ್ರೆಗಳಿರುವ ಸ್ಥಳವನ್ನು ನೀಲಿ ಬಣ್ಣದಲ್ಲಿ ಗುರುತಿಸಲಾಗುತ್ತಿದೆ. ಸೋಂಕು ಪತ್ತೆ ಆದರೆ ಹತ್ತಿರ ಯಾವ ಆಸ್ಪತ್ರೆಗಳಿವೆ, ಅಲ್ಲಿ ಎಷ್ಟು ಹಾಸಿಗೆ ಸೌಲಭ್ಯಗಳಿವೆ ಎಂಬುದರ ಬಗ್ಗೆ ಮಾಹಿತಿಯನ್ನು ವಾರ್‌ ರೂಮ್ ಮೂಲಕ ಪಡೆಯಬಹುದಾಗಿದೆ. ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡಿದವರ ವಲಯವಾರು ನಕ್ಷೆಯ ವಿವರಗಳನ್ನೂ ಪಡೆಯಬಹುದಾಗಿದೆ.

ಕೊರೊನಾ ಮಾಹಿತಿಗಾಗಿಯೇ ಪ್ರತ್ಯೇಕ ಆ್ಯಪ್‌

‘ಕೊರೊನಾ ಮಾಹಿತಿಯ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡುವ ಸಲುವಾಗಿಯೇ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಬೆಂಗಳೂರು ಸ್ಮಾರ್ಟ್‌ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆ್ಯಪ್‌ ಅಭಿವೃದ್ಧಿ ಕಾರ್ಯ ಅಂತಿಮ ಹಂತದಲ್ಲಿದೆ. ಒಂದೆರಡು ದಿನಗಳಲ್ಲೇ ಅದನ್ನು ಬಿಡುಗಡೆ ಮಾಡಲಿದ್ದೇವೆ. ಜನರು ಈ ಆ್ಯಪ್‌ ಮೂಲಕ ಮನೆಯಲ್ಲೇ ಕುಳಿತು ಕಾಲಕಾಲಕ್ಕೆ ಮಾಹಿತಿ ಪಡೆಯಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT