ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವದಲ್ಲೇ ಇಲ್ಲದ ಸಮಿತಿಯಿಂದ ವಾರ್ಡ್ ಮರುವಿಂಗಡಣೆ

ವರದಿ ನೀಡಿದ ಮೂರು ತಿಂಗಳ ಬಳಿಕ ಘಟನೋತ್ತರ ಅನುಮೋದನೆ
Last Updated 6 ಸೆಪ್ಟೆಂಬರ್ 2022, 22:17 IST
ಅಕ್ಷರ ಗಾತ್ರ

ಬೆಂಗಳೂರು: ಅಸ್ತಿತ್ವದಲ್ಲೇ ಇಲ್ಲದ ವಾರ್ಡ್‌ ಮರು ವಿಂಗಡಣಾ ಸಮಿತಿ ನೀಡಿದ ವರದಿ ಆಧರಿಸಿ ಸರ್ಕಾರ ವಾರ್ಡ್‌ಗಳ ಮರು ವಿಂಗಡಣೆ ಮಾಡಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾಂಗ್ರೆಸ್ ತಯಾರಾಗಿದೆ.

ವಾರ್ಡ್‌ಗಳ ಮರು ವಿಂಗಡಣೆಗೆ 2021ರ ಜನವರಿ 29ರಂದು ಪಾಲಿಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದ ಸರ್ಕಾರ, ಆರು ತಿಂಗಳ ಅವಧಿ ನಿಗದಿ ಮಾಡಿತ್ತು. ಕೋವಿಡ್ ಸಾಂಕ್ರಾಮಿಕದ ಕಾರಣ ನೀಡಿ ಇನ್ನಷ್ಟು ಕಾಲಾವಕಾಶ ನೀಡಲು ಮುಖ್ಯ ಆಯುಕ್ತರು ಮನವಿ ಮಾಡಿದ್ದರು.

ಅದರಂತೆ 2021ರ ಜುಲೈ 28ರಂದು ಮತ್ತೊಂದು ಆದೇಶ ಹೊರಡಿಸಿದ ಸರ್ಕಾರ ಆರು ತಿಂಗಳ ಅವಧಿ ನೀಡಿತ್ತು. ಆ ಅವಧಿಯಲ್ಲೂ ವರದಿ ಸಿದ್ಧವಾಗದೆ ಮತ್ತೆ
ಎರಡು ತಿಂಗಳ ಅವಧಿ ನೀಡಿ 2022ರ ಜನವರಿ 28ರಂದು ಆದೇಶ ಹೊರಡಿಸಿತ್ತು.

ಈ ಅವಧಿಯು ಮಾರ್ಚ್ 28ಕ್ಕೆ ಮುಕ್ತಾಯವಾಗಿದ್ದು, ಬಳಿಕ ಸಮಿತಿ ಅಸ್ತಿತ್ವ ಕಳೆದುಕೊಂಡಿತ್ತು. ಆ ನಂತರ ವರದಿ ಸಿದ್ಧಪಡಿಸಿದ ಮುಖ್ಯ ಆಯುಕ್ತರು, ಜೂನ್ 9ರಂದು ಸರ್ಕಾರಕ್ಕೆ ಸಲ್ಲಿಸಿದರು. ಅದೇ ವರದಿ ಆಧರಿಸಿ ಕರಡು ಪ್ರಕಟಿಸಿದ್ದ ನಗರಾಭಿವೃದ್ಧಿ ಇಲಾಖೆ, ಆಕ್ಷೇಪಣೆಗೆ ಅವಕಾಶ ನೀಡಿತ್ತು. ಬಳಿಕ ಅಧಿಸೂಚನೆ ಹೊರಡಿಸಿ ವಾರ್ಡ್‌ಗಳ ಮರು ವಿಂಗಡನೆಯನ್ನು ಅಧಿಕೃತಗೊಳಿಸಿತು. ಆ ಮೂಲಕ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198ರಿಂದ 243ಕ್ಕೆ ಏರಿಕೆಯಾಗಿದೆ.

ಈ ಪ್ರಕ್ರಿಯೆಗಳೆಲ್ಲವೂ ಮುಗಿದ ಬಳಿಕ ಆಗಸ್ಟ್ 28ರಲ್ಲಿ ಆಧಿಸೂಚನೆ ಹೊರಡಿಸಿರುವ ಸರ್ಕಾರ, ಸಮಿತಿಗೆ ಘಟನೋತ್ತರ ಅನುಮೋದನೆ ನೀಡಿದೆ. ಜೂನ್ ತಿಂಗಳ ಅಂತ್ಯದ ತನಕ ಸಮಿತಿಯ ಅವಧಿಯನ್ನು ವಿಸ್ತರಿಸಿದೆ. ಅಸ್ತಿತ್ವದಲ್ಲೇ ಇಲ್ಲದ ಸಮಿತಿ ನೀಡಿರುವ ವರದಿಯ ಶಿಫಾರಸು ಆಧರಿಸಿ ಮಾಡಿರುವ ವಾರ್ಡ್‌ ವಿಂಗಡಣೆಯ ಸಿಂಧುತ್ವ ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ನ್ಯಾಯಾಲಯದಲ್ಲಿ ಪ್ರಶ್ನೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

‘ಅಸ್ತಿತ್ವದಲ್ಲೇ ಇಲ್ಲದ ಸಮಿತಿ ನೀಡಿರುವ ವರದಿ ಆಧರಿಸಿ ಮಾಡಿರುವ ವಾರ್ಡ್‌ಗಳ ಮರು ವಿಂಗಡಣೆ ಸಂಪೂರ್ಣ ಅಸಿಂಧು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.

‘ಅವಧಿ ಮುಗಿದಿದ್ದ ಸಮಿತಿಗೆ ವರದಿ ನೀಡಲು ಯಾವ ಅಧಿಕಾರವೂ ಇಲ್ಲ. ವರದಿ ನೀಡುವ ಮುನ್ನ ಅವಧಿ ವಿಸ್ತರಣೆ ಮಾಡಿದ್ದರೆ ಅದಕ್ಕೆ ಮೌಲ್ಯ ಇರುತ್ತಿತ್ತು. ಈಗ ನೀಡಿರುವ ವರದಿಗೆ ಯಾವುದೇ ಮೌಲ್ಯ ಇಲ್ಲ’ ಎಂದರು.

‘ವರದಿ ನೀಡಿದ ಮೂರು ತಿಂಗಳ ಬಳಿಕ ಘಟನೋತ್ತರ ಅನುಮೋದನೆಯನ್ನು ಸರ್ಕಾರ ನೀಡಿದೆ. ವರದಿಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗುತ್ತಿದ್ದು, ವಾರ್ಡ್ ಮರು ವಿಂಗಡಣೆಯನ್ನು ಸಂಪೂರ್ಣ ರದ್ದುಪಡಿಸಬೇಕು ಎಂದು ಮನವಿ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT