ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕ’

Last Updated 16 ಜುಲೈ 2022, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಗೆ ಅನುಕೂಲ, ಸಾರ್ವಜನಿಕರಿಗೆ ಅನನುಕೂಲವಾಗುವಂತೆಅವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಲಾಗಿದೆ. ಈ ಬಗ್ಗೆ ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಕೆಯಾಗಿದ್ದರೂ ಹೆಸರು ಬದಲಾವಣೆ ಹೊರತು, ವಾರ್ಡ್‌ಗಳ ವಿಂಗಡಣೆ ಬದಲಾಗಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ವಾರ್ಡ್‌ಗಳ ಹೆಸರು ಬದಲಾವಣೆ ಅಧಿಕಾರ ಸರ್ಕಾರಕ್ಕಿದೆ. ಆದರೆ, ಇಲ್ಲಿ ವಾರ್ಡ್ ಮರುವಿಂಗಡಣಾ ಸಮಿತಿಯೇ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹೆಸರುಗಳನ್ನು ಬದಲಿಸಿದೆ’ ಎಂದರು.

‘ಈ ಬಾರಿ ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ವಾರ್ಡ್‌ ವಿಂಗಡಣೆ ನಿರ್ಧಾರವಾಗಿ, ಕೇಶವಕೃಪದಲ್ಲಿ ಅಂತಿಮ ಒಪ್ಪಿಗೆ ಪಡೆಯಲಾಗಿದೆ. ಸಲ್ಲಿಕೆಯಾದ ಆಕ್ಷೇಪಗಳನ್ನು ಕಂದಾಯ ಅಧಿಕಾರಿಗಳಾಗಲಿ, ಜಂಟಿ ಆಯುಕ್ತರಾಗಲಿ ಪರಿಶೀಲನೆ ನಡೆಸಲೇ ಇಲ್ಲ’ ಎಂದು ದೂರಿದರು.

‘ಈ ವಿಂಗಡಣೆಯ ಮೂಲಕ, ಕಾಂಗ್ರೆಸ್ ಪಕ್ಷ ಎಲ್ಲಿ ಗೆಲ್ಲಲು ಸಾಧ್ಯವಿದೆಯೋ ಅಲ್ಲಿ ಮತ ವಿಭಜಿಸಿ ಸೋಲಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಶೇ 20ರಷ್ಟು ತಟಸ್ಥ ಮತದಾರರು ಯಾವುದೇ ಪಕ್ಷಕ್ಕೆ ಸೇರದೆ ಮತ ಹಾಕುತ್ತಾರೆ. ಅವರ ಮತಗಳೇ ನಿರ್ಣಾಯಕ
ವಾಗುತ್ತವೆ. ಈ ವಿಶ್ಲೇಷಣೆಯನ್ನು ಬಿಜೆಪಿಯವರು ಚುನಾವಣೆ ಫಲಿತಾಂಶ ಬಂದಾಗ ಮಾಡಿಕೊಳ್ಳಲಿ’ ಎಂದರು.

‘ಜನಸಂಖ್ಯೆ ಆಧರಿಸಿದರೆ, ಪ್ರತಿ ವಾರ್ಡ್‌ನಲ್ಲಿ ಸರಾಸರಿ 35 ಸಾವಿರ ಜನಸಂಖ್ಯೆ ಇರಬೇಕು. ಕಾಂಗ್ರೆಸ್ ಪಕ್ಷ
ಇರುವ ಕಡೆಗಳಲ್ಲಿ ಪ್ರತಿ ವಾರ್ಡ್ ಜನಸಂಖ್ಯಾ ಪ್ರಮಾಣ 36,753 ಇದೆ. ಬಿಜೆಪಿ ಇರುವ ಕಡೆಗಳಲ್ಲಿ 33,927 ಮತ
ದಾರರು ಬರುತ್ತಾರೆ. ಗೋವಿಂದರಾಜನಗರ ಕ್ಷೇತ್ರದ ವಾರ್ಡ್‌ಗಳಲ್ಲಿ 30 ಸಾವಿರಕ್ಕಿಂತಲೂ ಕಡಿಮೆ ಮತದಾರರಿದ್ದಾರೆ.
35 ಸಾವಿರ ಸರಾಸರಿ ನೋಡಿದರೆ, ಬಿಜೆಪಿ ಇರುವ ಕ್ಷೇತ್ರಗಳಲ್ಲಿ 140 ವಾರ್ಡ್‌ಗಳು ಇರಬೇಕಿತ್ತು. ಆದರೆ, ಈಗ 145
ವಾರ್ಡ್‌ಗಳನ್ನು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 103 ವಾರ್ಡ್‌ಗಳು ಬರಬೇಕಿತ್ತು. ಕೇವಲ 98 ವಾರ್ಡ್‌ಗಳಿವೆ. ‌ಬ್ಯಾಟರಾಯನಪುರ,ಜಯನಗರ, ಚಾಮರಾಜಪೇಟೆ, ದಾಸರಹಳ್ಳಿ ಕ್ಷೇತ್ರಗಳಲ್ಲಿ ಜನಸಂಖ್ಯೆ ಪರಿಗಣಿಸಿದರೆ ಒಂದು ವಾರ್ಡ್‌ ಕಡಿಮೆ ಮಾಡಿ ಬಿಜೆಪಿ ಇರುವ ಕ್ಷೇತ್ರಗಳಲ್ಲಿ ಸೇರಿಸಿಕೊಂಡಿದ್ದಾರೆ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ‘ವಕೀಲರನ್ನು ಸೋಮವಾರ ಭೇಟಿ ಮಾಡಿ ಅಭಿಪ್ರಾಯ ಪಡೆಯುತ್ತೇವೆ.ಈ ವಿಚಾರವನ್ನು ಒಂದು ವಾರದಲ್ಲಿ ಸರಿಪಡಿಸಬಹುದು. ಚುನಾವಣೆ ಮುಂದೂಡುವಂತೆ ನಾವು ಹೇಳುವುದಿಲ್ಲ. ನ್ಯಾಯಾಲಯಕ್ಕೆ ಹೋದರೂ 10-15 ದಿನಗಳಲ್ಲಿ ಅರ್ಜಿ ಇತ್ಯರ್ಥ ಮಾಡುವಂತೆ ಮನವಿ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT