ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವಾರ್ಡ್‌ ಮಟ್ಟದಲ್ಲೇ ತ್ವರಿತ ಸ್ಪಂದನೆ

ಕೋವಿಡ್ ನಿರ್ವಹಣೆಗೆ ಎಲ್ಲ ವಾರ್ಡ್‌ಗಳಲ್ಲಿ ಡಬ್ಲ್ಯುಡಿಸಿ ರಚನೆ
Last Updated 8 ಮೇ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಸತತವಾಗಿ ಏರುತ್ತಿರುವ ಕಾರಣ, ಆಯಾ ವಾರ್ಡ್‌ ಮಟ್ಟದಲ್ಲಿ ಈ ಬಿಕ್ಕಟ್ಟು ನಿರ್ವಹಣೆ ಸುಲಭ ಸಾಧ್ಯವಾಗಿಸಲು ರಾಜ್ಯ ಸರ್ಕಾರವು ಕೋವಿಡ್‌ ವಾರ್‌ ರೂಮ್‌ ವಿಕೇಂದ್ರೀಕರಣ ಅಥವಾ ಸ್ಪಂದನ ಸಮಿತಿಗಳನ್ನು (ಡಬ್ಲ್ಯುಡಿಸಿ) ರಚಿಸಲಿದೆ.

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರನ್ನು ಈ ಕಾರ್ಯಕ್ಕೆ ನೋಡಲ್‌ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಸದ್ಯ, ಸೋಂಕಿತ ವ್ಯಕ್ತಿಗೆ ಕೋವಿಡ್‌ ದೃಢಪಟ್ಟ ವರದಿ ಬಂದ ನಂತರವೂ ಸೂಕ್ತ ಚಿಕಿತ್ಸೆಗೆ ಸಿಗಲು 12 ತಾಸುಗಳಷ್ಟು ವಿಳಂಬವಾಗುತ್ತದೆ. ಈ ವಿಳಂಬ ತಪ್ಪಿಸಿ, ಸೋಂಕಿತರಿಗೆ ತ್ವರಿತವಾಗಿ ಸ್ಪಂದಿಸುವ ಕಾರ್ಯವನ್ನು ಈ ಸಮಿತಿಗಳು ಮಾಡಲಿವೆ ಎಂದು ರಾಜ್ಯಸರ್ಕಾರ ಶನಿವಾರ ಹೇಳಿದೆ.

ನಗರದಲ್ಲಿನ ಎಲ್ಲ 198 ವಾರ್ಡ್‌ಗಳಲ್ಲಿ ಈ ಡಬ್ಲ್ಯುಡಿಸಿ ರಚಿಸಲಾಗುತ್ತಿದೆ. ಕೋವಿಡ್‌ ಪರಿಹಾರ ಕ್ರಮಗಳು ಪ್ರತಿ ಸೋಂಕಿತರನ್ನೂ ತಲುಪಬೇಕು, ಆರೋಗ್ಯ ಸೇವೆಗಳು ಪ್ರತಿ ನಾಗರಿಕನಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಸಮಿತಿಗಳನ್ನು ರಚಿಸಲಾಗುತ್ತಿದೆ.

ಆಯಾ ವಾರ್ಡ್‌ ವ್ಯಾಪ್ತಿಯಲ್ಲಿ ಸೋಂಕಿತ ವ್ಯಕ್ತಿಯ ವಿಳಾಸವನ್ನು ಪತ್ತೆ ಮಾಡುವುದು, ಅವರಿಗೆ ಮಾಹಿತಿ ನೀಡುವುದು, ಕೋವಿಡ್‌ ಆಸ್ಪತ್ರೆಗಳು, ಸಿಗಬೇಕಾದ ಚಿಕಿತ್ಸೆ, ಸರ್ಕಾರ ಮಾಡಿರುವ ವ್ಯವಸ್ಥೆ ತಿಳಿಸುವ ಕೆಲಸವನ್ನು ಈ ಡಬ್ಲ್ಯುಡಿಸಿಗಳು ಮಾಡುತ್ತವೆ.

ವಾರದಲ್ಲಿ ಮೂರು ಬಾರಿ ಡಬ್ಲ್ಯುಡಿಸಿ ಸಭೆ ಕರೆಯುವ ಜವಾಬ್ದಾರಿಯು ಈ ನೋಡಲ್‌ ಅಧಿಕಾರಿಗಳದ್ದಾಗಿರುತ್ತದೆ. ಈ ಸಭೆಗೆ ಸಂಬಂಧಪಟ್ಟ ವಿಭಾಗಗಳ ಅಥವಾ ಇಲಾಖೆಯ ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತದೆ. ಪರಿಹಾರ ಕ್ರಮಗಳ ಬಗ್ಗೆ ನಿಯಮಿತವಾಗಿ ಪರಿಶೀಲನೆಯನ್ನೂ ಈ ಸಮಿತಿಗಳು ಮಾಡಲಿವೆ ಎಂದು ಸರ್ಕಾರ ಹೇಳಿದೆ.

ಸಮಿತಿಯಲ್ಲಿ ಯಾರಿರುತ್ತಾರೆ ?

ಬಿಬಿಎಂಪಿ ಈಗಾಗಲೇ ವಾರ್ಡ್‌ವಾರು ನೇಮಕ ಮಾಡಿರುವ ನೋಡಲ್‌ ಅಧಿಕಾರಿಯೇ ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ವಾರ್ಡ್‌ ಸಮಿತಿ ಸದಸ್ಯರು, ಸರ್ಕಾರಿ ಅಧಿಕಾರಿಗಳು, ಆಯಾ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು, ಸ್ವಯಂಸೇವಕರು ಸಮಿತಿಯಲ್ಲಿ ಇರುತ್ತಾರೆ. ಇವರಿಗೆ ಅಗತ್ಯ ತರಬೇತಿಯನ್ನು ನೀಡಲಾಗುತ್ತದೆ.

ಪರೀಕ್ಷಾ ಫಲಿತಾಂಶ ಬರುವಲ್ಲಿ ವಿಳಂಬವಾಗುವುದು, ಆಮ್ಲಜನಕ ಕೊರತೆ, ಲಸಿಕೆಗಳ ಕೊರತೆಯನ್ನು ಸಮಿತಿಯು ಸರ್ಕಾರದ ಗಮನಕ್ಕೆ ತರಲಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಸಮಿತಿಗೆ ಪೂರಕ ಸಿಬ್ಬಂದಿಯನ್ನು ಪೂರೈಸಲಿದೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT