ಸೋಮವಾರ, ಸೆಪ್ಟೆಂಬರ್ 16, 2019
23 °C
ರೌಡಿಗಳ ಪರೇಡ್ ನಡೆಸಿದ ಸಂದೀಪ್ ಪಾಟೀಲ * ಅಪರಾಧಗಳಿಂದ ದೂರವಿರುವಂತೆ ಖಡಕ್ ಎಚ್ಚರಿಕೆ

‘ಮಧ್ಯಸ್ಥಿಕೆ’ಯಲ್ಲಿ ಭಾಗಿಯಾದರೆ ಕ್ರಮ

Published:
Updated:

ಬೆಂಗಳೂರು: ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಸಂದೀಪ್ ಪಾಟೀಲ, ನಗರದಲ್ಲಿ ಶನಿವಾರ ರೌಡಿಗಳ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದರು.  

‘ನಿಮ್ಮ ಪಾಡಿಗೆ ನೀವು ಜೀವನ ನಡೆಸಬೇಕು. ಯಾವುದೇ ಅಪರಾಧಗಳಲ್ಲಿ ತೊಡಗಬಾರದು. ಜನರನ್ನು ಬೆದರಿಸಿ ಯಾವುದಾದರೂ ‘ಮಧ್ಯಸ್ಥಿಕೆ’ಯಲ್ಲಿ ಭಾಗಿಯಾಗಿದ್ದು ಕಂಡುಬಂದರೆ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದೂ ಅವರು ಹೇಳಿದರು.

‘ಭೂ ವ್ಯಾಜ್ಯ, ಹಣಕಾಸು ವ್ಯವಹಾರ ಹಾಗೂ ಭೂ ಒತ್ತುವರಿ ಪ್ರಕರಣದಲ್ಲಿ ರೌಡಿಗಳು ಭಾಗಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇಂಥ ಪ್ರಕರಣಗಳಲ್ಲಿ ಕೆಲವರು ರೌಡಿಗಳನ್ನು ಬಳಸಿಕೊಂಡು ಜನರನ್ನು ಬೆದರಿಸುತ್ತಿರುವ ಮಾಹಿತಿ ಇದೆ. ಇದಕ್ಕೆಲ್ಲ ಅಂತ್ಯ ಹಾಡಬೇಕು’ ಎಂದು ಎಚ್ಚರಿಸಿದರು.

ರೌಡಿಗಳಾದ ತನ್ವೀರ್, ಮೈಕಲ್, ಕುಮರೇಶ್ ಹಾಗೂ ಕೋತಿ ರಾಮನನ್ನು ಮಾತನಾಡಿಸಿದ ಸಂದೀಪ ಪಾಟೀಲ, ‘ಒಳ್ಳೆಯ ಕೆಲಸ ಮಾಡಿಕೊಂಡು ಇರಿ. ಜಾಸ್ತಿ ಬಾಲ ಬಿಚ್ಚಬೇಡಿ’ ಎಂದು ಎಚ್ಚರಿಕೆ ನೀಡಿದರು.

300ಕ್ಕೂ ಹೆಚ್ಚು ರೌಡಿಗಳು ಪರೇಡ್‌ನಲ್ಲಿ ಹಾಜರಿದ್ದರು. ಹಲವು ರೌಡಿಗಳು ಗೈರಾಗಿದ್ದರು. ಅದರಲ್ಲಿ ಕೆಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನುಳಿದವರನ್ನು ವಶಕ್ಕೆ ಪಡೆಯುವಂತೆ ಸಂದೀಪ ಪಾಟೀಲ ಅವರು ಸ್ಥಳದಲ್ಲಿದ್ದ ಸಿಸಿಬಿ ಪೊಲೀಸರಿಗೆ ಸೂಚನೆ ನೀಡಿದರು.  

‘ರೌಡಿಗಳ ಬಳಿ ಹೋಗಬೇಡಿ, ಪೊಲೀಸರನ್ನು ಸಂಪರ್ಕಿಸಿ’

ರೌಡಿ ಪರೇಡ್ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಸಂದೀಪ್ ಪಾಟೀಲ, ‘ಸಾರ್ವಜನಿಕರು ಯಾವುದೇ ಸಮಸ್ಯೆ ಇದ್ದರೂ ರೌಡಿಗಳ ಬಳಿ ಹೋಗಬೇಡಿ. ಬದಲಿಗೆ, ಪೊಲೀಸರನ್ನು ಸಂಪರ್ಕಿಸಿ’ ಎಂದು ಹೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಸಾರ್ವಜನಿಕರೊಬ್ಬರು, ‘ನಿಮ್ಮ ಪರೇಡ್, ನಿರಂತರವಾದ ಹಾಸ್ಯವಾಗುತ್ತಿದೆ. ಯಾವುದಕ್ಕೂ ಉಪಯೋಗವಿಲ್ಲ. ಡ್ರಗ್ಸ್ ಮಾರಾಟ, ಬೈಕ್ ವ್ಹೀಲಿಂಗ್‌ನಂಥ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ’ ಎಂದಿದ್ದಾರೆ.

ಇಂದ್ರಜಿತ್ ಸಿಂಗ್ ಎಂಬುವರು, ‘ರಾಜಕಾರಣಿಗಳ ಸಹಕಾರದಿಂದ ನಡೆಯುತ್ತಿರುವ ಬಡ್ಡಿ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕಿ’ ಎಂದು ಕೋರಿದ್ದಾರೆ.   

Post Comments (+)